ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಭ್ರಷ್ಟಾಚಾರ ವಿರೋಧಿಸಿ 20ಕ್ಕೆ ಮುಖ್ಯಮಂತ್ರಿ ಮನೆ ಚಲೋ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಕಾರ್ಮಿಕ ಇಲಾಖೆ ಮತ್ತು ಕಟ್ಟಡ ಕಟ್ಟುವ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ವಿರೋಧಿಸಿ ಸೆ. 20ರಂದು ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕರಿಂದ ‘ಮುಖ್ಯಮಂತ್ರಿ ಮನೆ ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಆವರಗೆರೆ ಎಚ್.ಜಿ. ಉಮೇಶ್ ತಿಳಿಸಿದರು.

ಪ್ರತಿ ಫುಡ್‌ಕಿಟ್‌ನಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಮತ್ತು ಅವರ ಕುಟುಂಬದವರು ಕಿಕ್‌ಬ್ಯಾಕ್‌ ಪಡೆದಿ
ದ್ದಾರೆ. ಇದಲ್ಲದೇ ಕಟ್ಟಡ ಕಾರ್ಮಿಕರಿಗಾಗಿ ನೀಡುತ್ತಿರುವ ಟೂಲ್ ಕಿಟ್, ಸುರಕ್ಷಾ ಕಿಟ್‌, ಬೂಸ್ಟಪ್‌ ಕಿಟ್‌ ಸಹಿತ ವಿವಿಧ ಕಿಟ್‌ಗಳಲ್ಲಿ ಅಪಾರ ಪ್ರಮಾಣದ ಭ್ರಷ್ಟಾಚಾರವಾಗಿದೆ. ಕಾರ್ಮಿಕ ಸಚಿವರಲ್ಲದೇ ಕಲ್ಯಾಣ ಮಂಡಳಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಕ್ರಂ ಪಾಷಾ ಸಹಿತ ಉನ್ನತ ಅಧಿಕಾರಿಗಳು ಶಾಮೀಲಾಗಿದ್ದಾರೆ. ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ವೈದ್ಯಕೀಯ ಪರಿಹಾರ, ವಸತಿ ನಿರ್ಮಾಣಕ್ಕೆ ನೆರವು, ಬಾಕಿ ಸೌಲಭ್ಯಗಳ ಜಾರಿಗಾಗಿ, ಅಲ್ಲದೇ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗುವ ಕಾರ್ಮಿಕರಿಗೆ ನೀಡುವ ಕೋವಿಡ್ ಲಸಿಕೆಗಳಿಗಾಗಿ ಖಾಸಗಿ ಆಸ್ಪತ್ರೆಗಳಿಗೆ ₹ 780 ಕೋಟಿ ನೀಡುವಂತೆ ಮಾಡಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

₹ 28 ಲಕ್ಷದ ಎರಡು ಇನೊವಾ ಕಾರು ಖರೀದಿಗೆ ಅನುಮೋದನೆ ಪಡೆದು ಏಳು ಕಾರು ಖರೀದಿ ಮಾಡಲಾಗಿದೆ. 200ಕ್ಕೂ ಅಧಿಕ ಟಿ.ವಿ. ಖರೀದಿಸಿದ್ದಾರೆ. ನೂರಾರು ಕಂಪ್ಯೂಟರ್‌ ಖರೀದಿ, ಕ್ಯಾಲೆಂಡರ್‌ ಮುದ್ರಣ, ಸಾಧನೆ ಪುಸ್ತಕ ಮುದ್ರಣ ಮಾಡಲಾಗಿದೆ. ಈ ಎಲ್ಲವನ್ನೂ ಆಡಿಟ್‌ ಮಾಡಿಸಬೇಕು. ಲಾಕ್‌ಡೌನ್‌ ಪರಿಹಾರ ಮೊತ್ತ ₹ 3000 ಬಹುಪಾಲು ಕಾರ್ಮಿಕರಿಗೆ ತಲುಪಿಲ್ಲ. ತಲುಪಿಸುವ ಕೆಲಸ ಮಾಡಬೇಕು. ಕೋವಿಡ್‌ನಿಂದ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ₹ 2 ಲಕ್ಷ ನೀಡಬೇಕು ಎಂದು ಆಗ್ರಹಿಸಿದರು.

ಕಾರ್ಮಿಕರ ಹೊಸಕಾರ್ಡ್‌ ನೋಂದಣಿ ಮಾಡಿಕೊಂಡು ಶೈಕ್ಷಣಿಕ ಸಹಾಯಧನಕ್ಕೆ ತ್ವರತಿಗತಿಯಲ್ಲಿ ಅರ್ಜಿ ಸಲ್ಲಿಸಲು ಕ್ರಮ ಕೈಗೊಳ್ಳಬೇಕು. ಬೋಗಸ್ ಕಾರ್ಮಿಕ ಕಾರ್ಡ್‌ಗಳನ್ನು ರದ್ದು ಮಾಡಬೇಕು. ಅದಕ್ಕೆ ಕಾರಣರಾದವರ ಮೇಲೆ ಪ್ರಕರಣ ದಾಖಲಿಸಬೇಕು. ಕಾರ್ಮಿಕರ ಕುಟುಂಬದ ವೈದ್ಯಕೀಯ ವೆಚ್ಚ ಸಂಪೂರ್ಣ ಭರಿಸಬೇಕು. ಮದುವೆ ಸಹಾಯಧನ ₹ 1 ಲಕ್ಷ, ಸಹಜ ಸಾವಿಗೆ ₹ 5 ಲಕ್ಷ, ಆಕಸ್ಮಿಕ ಸಾವಿಗೆ ₹ 10 ಲಕ್ಷ ನೀಡಬೇಕು. ಮನೆ ನಿರ್ಮಾಣಕ್ಕೆ ₹ 5 ಲಕ್ಷ ಸಹಾಯಧನ, ನಿವೃತ್ತಿ ವೇತನ ₹ 5 ಸಾವಿರ ನೀಡಬೇಕು ಎಂದು ತಿಳಿಸಿದರು.

ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆ. 20ರಂದು ಬೆಳಿಗ್ಗೆ 11.30 ಕ್ಕೆ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನ
ದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಮಧ್ಯಾಹ್ನ 1ಗಂಟೆಗೆ ಬಹಿರಂಗ ಸಭೆ ನಡೆಸಲಾಗುವುದು. ಅಲ್ಲಿಂದ ಮುಖ್ಯಮಂತ್ರಿ ಮನೆಗೆ ತೆರಳಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮಂಜುನಾಥ್ ಕುಕ್ಕವಾಡ, ಎ.ಗುಡ್ಡಪ್ಪ, ಆದಿಲ್ ಖಾನ್, ಸುರೇಶ್ ಯರಗುಂಟೆ, ಹರೀಶ್, ತಿಮ್ಮಣ್ಣ, ಲಕ್ಷ್ಮಣ, ಕೆ.ಎಂ. ಮಂಜುನಾಥ್‌ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.