ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್‌, ಐಪಿಎಸ್‌ ಮಾಡಲು ಮುಂದೆ ಬನ್ನಿ: ಶಾಸಕ ರವೀಂದ್ರನಾಥ ಕಿವಿಮಾತು

ಪಠ್ಯಪೂರಕ ಚಟುವಟಿಕೆಗಳ ಸಮಾರೋಪ
Last Updated 27 ಏಪ್ರಿಲ್ 2019, 10:37 IST
ಅಕ್ಷರ ಗಾತ್ರ

ದಾವಣಗೆರೆ: ‘ಕೇವಲ ಬಿ.ಎ, ಬಿ.ಎಸ್ಸಿ ಓದದರೆ ಸಾಲದು; ಐ.ಎ.ಎಸ್‌, ಐ.ಪಿ.ಎಸ್‌, ಕೆ.ಎ.ಎಸ್‌ ಮಾಡುವ ಬಗ್ಗೆಯೂ ಯೋಚಿಸಿ’ ಎಂದು ಶಾಸಕ ಎಸ್‌.ಎ. ರವೀಂದ್ರನಾಥ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ 2018–19ನೇ ಸಾಲಿನ ಪಠ್ಯಪೂರಕ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಯುಪಿಎಸ್‌ಸಿ, ಕೆಪಿಎಸ್‌ಸಿ ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದುಕೊಳ್ಳಬೇಡಿ. ಸಾಮಾನ್ಯ ವಿದ್ಯಾರ್ಥಿಗಳೇ ಇಂದು ಚೆನ್ನಾಗಿ ಓದಿ ಸಾಧನೆ ಮಾಡುತ್ತಿದ್ದಾರೆ. ಓದುವ ವಯಸ್ಸಿನಲ್ಲಿ ಸರಿಯಾಗಿ ಓದುವ ಮೂಲಕ ಪ್ರತಿಭೆ ಪ್ರದರ್ಶಿಸಬೇಕು. ನೀವು ಕಲಿತ ಕಾಲೇಜಿಗೂ ಕೀರ್ತಿ ತರಬೇಕು’ ಎಂದು ಸಲಹೆ ನೀಡಿದರು.

‘ಇಂದು ಸಾಕಷ್ಟು ಸರ್ಕಾರಿ ಸೌಲಭ್ಯಗಳು ಸಿಗುತ್ತಿವೆ. ಅವುಗಳನ್ನು ಬಳಸಿಕೊಂಡು ಚೆನ್ನಾಗಿ ಓದಬೇಕು. ಮುಂಬರುವ ಪರೀಕ್ಷೆಯ ಫಲಿತಾಂಶದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದುಕೊಳ್ಳಬೇಕು. ವಿದ್ಯಾರ್ಥಿನಿಯರು ಹೆಚ್ಚಿನ ರ‍್ಯಾಂಕ್‌ ಗಳಿಸಬೇಕು’ ಎಂದು ಆಶಿಸಿದರು.

ಸಮಾರೋಪ ನುಡಿಗಳನ್ನಾಡಿದ ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ. ಬಸವರಾಜ್‌ ಬಣಕಾರ, ಜೀವನದಲ್ಲಿ ಯಶಸ್ಸು ಗಳಿಸುವಲ್ಲಿ ವ್ಯಾಯಾಮ, ಮನಸ್ಸು ಹಾಗೂ ಮಾತಿನ ಮೇಲೆ ನಿಯಂತ್ರಣ ಮತ್ತು ಆಲೋಚನಾ ಶಕ್ತಿ ಹೆಚ್ಚಿಸಿಕೊಳ್ಳುವ ಈ ನಾಲ್ಕು ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ದಿನಾಲೂ ಬೆಳಿಗ್ಗೆ ಕನಿಷ್ಠ 30ರಿಂದ 45 ನಿಮಿಷ ವ್ಯಾಯಾಮ ಮಾಡಬೇಕು. ದೇಹ ಸದೃಢವಾಗಿದ್ದರೆ ಆರೋಗ್ಯವೂ ಚೆನ್ನಾಗಿರುತ್ತದೆ. ಆಗ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.

ವಿದ್ಯಾರ್ಥಿಗಳು ಮನಸ್ಸನ್ನು ನಿಯಂತ್ರಣದಲ್ಲಿ ಇಡುವುದು ಬಹಳ ಮುಖ್ಯ. ವ್ಯಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗಳಲ್ಲೇ ಕಾಲ ಕಳೆಯುವ ಮೂಲಕ ಮನಸ್ಸಿನ ಗುಲಾಮನಾಗಬೇಡಿ. ಮನಸ್ಸನ್ನು ನಿಯಂತ್ರಿಸಲು ಧ್ಯಾನ, ಪ್ರಾಣಾಯಾಮ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಪಠ್ಯಪುಸ್ತಕಗಳನ್ನು ಹೆಚ್ಚು ಓದಿದಾಗ ಜ್ಞಾನ ವೃದ್ಧಿಯಾಗುತ್ತದೆ. ಆಗ ಯಾವುದನ್ನು ಮಾತನಾಡಬೇಕು, ಯಾವುದನ್ನು ಆಡಬಾರದು ಎಂಬ ಪ್ರಜ್ಞೆ ಬರುತ್ತದೆ ಎಂದರು.

ಯಶಸ್ಸಿನ ಮೂಲ ಮಂತ್ರಗಳಲ್ಲಿ ಆಲೋಚನಾ ಶಕ್ತಿ ಬಹಳ ಮುಖ್ಯವಾಗಿದೆ. ಆಲೋಚನೆ ಮಾಡುವುದರಲ್ಲಿ ಸೃಜನಶೀಲತೆ ರೂಢಿಸಿಕೊಳ್ಳಬೇಕು ಎಂದು ಕುಲಸಚಿವರು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.

ಪ್ರಾಂಶುಪಾಲ ಡಾ. ದಾದಾಪೀರ್‌ ನವಿಲೇಹಾಳ್‌ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಹಾಯಕ ಪ್ರಾಧ್ಯಾಪಕ ಪ್ರೊ. ತೊಪ್ಪಲ ಕೆ. ಮಲ್ಲಿಕಾರ್ಜುನಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ನಾಗೇಂದ್ರ ನಾಯ್ಕ ಡಿ. ಕ್ರೀಡಾ ವರದಿ ವಾಚಿಸಿದರು. ಜಿ.ಎಸ್‌. ಅನುರಾಧಾ ಎನ್‌.ಎಸ್‌.ಎಸ್‌. ಚಟುವಟಿಕೆಗಳ ವರದಿ ವಾಚಿಸಿದರು.

ಸಹಾಯಕ ಪ್ರಾಧ್ಯಾಪಕಿ ಸುನೀತಾ ಕೆ.ಬಿ. ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ಕಳೆದ ಸಾಲಿನಲ್ಲಿ ಬಿ.ಕಾಂನಲ್ಲಿ ಮೊದಲ ರ‍್ಯಾಂಕ್‌ ಪಡೆದ ವಿದ್ಯಾರ್ಥಿನಿ ಬಿ.ಎಲ್‌. ಜ್ಯೋತಿ ಅವರನ್ನು ಇದೇ ಸಂದರ್ಭದಲ್ಲಿ ₹ 2,000 ನಗದು ನೀಡಿ ಕಾಲೇಜಿನಿಂದ ಸನ್ಮಾನಿಸಲಾಯಿತು. ದಿಳ್ಯಪ್ಪ ಅವರು ವೈಯಕ್ತಿಕವಾಗಿ ₹ 5 ಸಾವಿರ ಬಹುಮಾನ ನೀಡಿ ಗೌರವಿಸಿದರು.

ಡಾ. ಶಕುಂತಲಾ ಎನ್‌. ಸಂಪಾದಿಸಿದ್ದ ಇತಿಹಾಸ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡನೆಯಾಗಿದ್ದ ಪ್ರಬಂಧಗಳ ಕೃತಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಜ್ಯೋತಿ ಸಿದ್ದೇಶ್‌, ಡಿ.ಎಸ್‌. ಶಿವಶಂಕರ್‌, ವಿಠಲಾಪುರ ರುದ್ರಪ್ಪ, ಟಿ. ಶೇಷಪ್ಪ, ಸತೀಶ್‌ ಜಿ.ಎಸ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT