ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಸುಡು ಬಿಸಿಲಲ್ಲೂ ಬಂದ ‘ಕೈ’ ಪಡೆ

ಪ್ರಜಾಧ್ವನಿ–2 ಸಮಾವೇಶದಲ್ಲಿ ಕಾಂಗ್ರೆಸ್‌ ಪಕ್ಷದ ಶಕ್ತಿ ಪ್ರದರ್ಶನ
Published 5 ಮೇ 2024, 7:10 IST
Last Updated 5 ಮೇ 2024, 7:10 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಹೈಸ್ಕೂಲ್‌ ಮೈದಾನದಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಪಕ್ಷದ ಪ್ರಜಾಧ್ವನಿ–2 ಸಮಾವೇಶದಲ್ಲಿ ಭಾರಿ ಜನಸಾಗರ ಕಂಡುಬಂತು. ಕಿಕ್ಕಿರಿದು ಸೇರಿದ್ದ ಜನರು ಕಾಂಗ್ರೆಸ್‌ ಪರ ಘೋಷಣೆ ಕೂಗಿ, ಸಂಭ್ರಮಿಸಿದರು.

ನಗರ ಮಾತ್ರವಲ್ಲದೇ ಜಿಲ್ಲೆಯ ಮೂಲೆ ಮೂಲೆಯಿಂದಲೂ ಬಸ್‌, ಕಾರು, ಆಟೊ, ಬೈಕ್‌ ಹಾಗೂ ಇನ್ನಿತರ ವಾಹನಗಳಲ್ಲಿ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಹುರುಪಿನಿಂದಲೇ ಆಗಮಿಸಿದ್ದರು.

ನಗರದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವುದನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಸ್‌ಗಳು ಸೇರಿದಂತೆ ಇನ್ನಿತರ ವಾಹನಗಳನ್ನು ನಗರ ಹೊರಭಾಗದಲ್ಲೇ ತಡೆದರು.

ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಕಾರ್ಯಕರ್ತರು, ವಾಹನಗಳನ್ನು ನಿಲ್ಲಿಸಿದ ಜಾಗದಿಂದ ಸುಡು ಬಿಸಿಲನ್ನೂ ಲೆಕ್ಕಿಸದೇ ಸಮಾವೇಶದತ್ತ ಹೆಜ್ಜೆ ಹಾಕತೊಡಗಿದರು.

ಮಧ್ಯಾಹ್ನ 1 ಗಂಟೆಯಿಂದಲೇ ಜನರು ತಂಡೋಪತಂಡವಾಗಿ ಸಮಾವೇಶದ ಸ್ಥಳಕ್ಕೆ ಆಗಮಿಸಿ ಕುರ್ಚಿ ಹಿಡಿದಿದ್ದರು. ಕೆಲವರು ನಾಯಕರ ಭಾಷಣ ಕೇಳಿದರೆ, ಇನ್ನೂ ಕೆಲವರು ಬಿಸಿಲಿನ ಧಗೆ, ಸೆಕೆ ತಾಳದೇ ಅತ್ತಿಂದಿತ್ತ ಓಡಾಡುತ್ತಿರುವುದು, ಗಿಡಮರಗಳ ಕೆಳಗೆ ನಿಂತಿರುವುದು ಕಂಡುಬಂತು.

ನಗರದ ವಿವಿಧ ವಾರ್ಡ್‌ಗಳ ಪಕ್ಷದ ಸದಸ್ಯರು, ಮುಖಂಡರು ತಮ್ಮ ಬೆಂಬಲಿಗರೊಂದಿಗೆ ಡ್ರಮ್‌ಸೆಟ್‌, ತಮಟೆಯ ಸದ್ದಿನೊಂದಿಗೆ ಮೆರವಣಿಗೆ ಮೂಲಕ ಸಮಾವೇಶಕ್ಕೆ ಆಗಮಿಸಿದರು. ಆ ಮೂಲಕ ಕಾರ್ಯಕ್ರಮಕ್ಕೆ ಹುರುಪು ತುಂಬಿದರು. ಎಲ್ಲೆಡೆ ಕಾಂಗ್ರೆಸ್‌ ಪಕ್ಷದ ಬಾವುಟಗಳು ಹಾರಾಡಿದವು.

ಕಬ್ಬಿನ ಹಾಲಿಗೆ ಬೇಡಿಕೆ:

ನಗರದಲ್ಲಿ 39 ಡಿಗ್ರಿ ಸೆಲ್ಸಿಯಸ್‌ ತಾಪಮಾನವಿತ್ತು. ಬಿಸಿಲ ಝಳ ತಾಳದೇ ಜನರು ಕಬ್ಬಿನ ಹಾಲು, ಎಳನೀರು, ಮಜ್ಜಿಗೆ, ಸೋಡಾ ಹಾಗೂ ಇನ್ನಿತರ ತಂಪುಪಾನೀಯಗಳ ಮೊರೆ ಹೋದರು. ಅದರಲ್ಲೂ ಸಮಾವೇಶ ನಡೆದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಬ್ಬಿನ ಹಾಲು ಮಾರಾಟ ಜೋರಾಗಿತ್ತು. ಮುಖ್ಯ ರಸ್ತೆಯಲ್ಲಿನ ಅಂಗಡಿಗಳಲ್ಲಿನ ವ್ಯಾಪಾರವೂ ಎಂದಿಗಿಂತ ಜಾಸ್ತಿ ಕಂಡುಬಂತು.

ಗದ್ದಲ, ಗಲಾಟೆ:

ಸಮಾವೇಶದ ಸ್ಥಳದಲ್ಲಿ ಆಸನ ಹಾಗೂ ಇನ್ನಿತರ ಸಣ್ಣಪುಟ್ಟ ಕಾರಣಗಳಿಗಾಗಿ ಆ‌ಗಾಗ ಸಣ್ಣ ಪುಟ್ಟ ಗದ್ದಲ, ಗಲಾಟೆ ನಡೆಯುತ್ತಲೇ ಇತ್ತು. ಸ್ಥಳದಲ್ಲಿದ್ದ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.

ಕಾರ್ಯಕ್ರಮದಲ್ಲಿ ಭಾಷಣ ಮುಗಿಸಿ ತುರ್ತಾಗಿ ಹೊರಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೇಷ್ಮೆ ಶಾಲು ಹೊದಿಸಿ ಬೆಳ್ಳಿ ಗದೆಯನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರಿಗೆ ಬೃಹತ್‌ ಬೆಳ್ಳಿ ಕಪ್‌ ಅನ್ನು ನೀಡಿ ಸನ್ಮಾನಿಸಲಾಯಿತು.

ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ನಡೆದ ಕಾಂಗ್ರೆಸ್‌ ಪಕ್ಷದ ಪ್ರಜಾಧ್ವನಿ–2 ಸಮಾವೇಶದಲ್ಲಿ ಭಾಗವಹಿಸಿದ್ದ ಮಹಿಳೆಯರು ಲಂಬಾಣಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದರು
–ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ್
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ನಡೆದ ಕಾಂಗ್ರೆಸ್‌ ಪಕ್ಷದ ಪ್ರಜಾಧ್ವನಿ–2 ಸಮಾವೇಶದಲ್ಲಿ ಭಾಗವಹಿಸಿದ್ದ ಮಹಿಳೆಯರು ಲಂಬಾಣಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದರು –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ್
ಸಮಾವೇಶದಲ್ಲಿ ಕಂಡ ಮಹಾತ್ಮ ಗಾಂಧಿ!
ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರ ವೇಷಧರಿಸಿದ್ದ ವ್ಯಕ್ತಿಯೊಬ್ಬರು ಸಮಾವೇಶದಲ್ಲಿ ಜನರ ಕೇಂದ್ರಬಿಂದುವಾದರು. ಮಹಾತ್ಮ ಗಾಂಧಿ ವೇಷಧಾರಿ ವ್ಯಕ್ತಿಯು ಕೈಯಲ್ಲಿ ಕೋಲು ಹಿಡಿದು ಕನ್ನಡಕ ಧರಿಸಿದ್ದರು. ಸಮಾವೇಶದಲ್ಲಿ ಭಾಗವಹಿಸಿದ್ದ ಜನರು ಅವರೊಂದಿಗೆ ಸೆಲ್ಫಿ ಫೋಟೊ ತೆಗೆಸಿಕೊಂಡರು. ಕಾಂಗ್ರೆಸ್‌ ಪಕ್ಷದ ಬಾವುಟದ ಸೀರೆ ಧರಿಸಿದ್ದ ಪುಟಾಣಿ ಬಾಲಕಿಯೊಬ್ಬಳು ಜನರ ಗಮನ ಸೆಳೆದಳು.
ಸಮುದಾಯ ಭವನಕ್ಕೆ ತಟ್ಟಿದ ‘ಭದ್ರತೆ’ಯ ಬಿಸಿ
ನಗರದ ರಿಂಗ್‌ರಸ್ತೆಯಲ್ಲಿರುವ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಶನಿವಾರ ಮದುವೆ ಸಮಾರಂಭ ನಡೆಯಿತು. ಪ್ರಿಯಾಂಕಾ ಗಾಂಧಿ ಅವರು ಇದೇ ಮಾರ್ಗದಲ್ಲಿ ತೆರಳಿದ ಕಾರಣ ಭದ್ರತೆಯ ವಿಚಾರಕ್ಕೆ ಪೊಲೀಸರು ಹಾಗೂ ಮದುವೆಗೆ ಬಂದಿದ್ದವರ ನಡುವೆ ವಾಗ್ವಾದ ನಡೆಯಿತು. ‘ಪ್ರಿಯಾಂಕಾ ಗಾಂಧಿ ತೆರಳುವವರೆಗೆ ಸಮುದಾಯ ಭವನಕ್ಕೆ ಬೀಗ ಹಾಕಿ ಹೊರಗೆ ಯಾರೂ ಓಡಾಡಬೇಡಿ’ ಎಂದು ಪೊಲೀಸರು ಸೂಚಿಸಿದ್ದರಿಂದ ಮದುವೆಗೆ ಬಂದಿದ್ದವರು ಅಸಮಾಧಾನ ವ್ಯಕ್ತಪಡಿಸಿದರು. ಆಗ ಮಾತಿನ ಚಕಮಕಿ ನಡೆಯಿತು ಎಂದು ಸ್ಥಳದಲ್ಲಿದ್ದವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT