ಗುರುವಾರ , ಜನವರಿ 28, 2021
15 °C
ವಾರ್ಡ್ ಹಂತದಲ್ಲಿ ತೀವ್ರ ಹೋರಾಟ: ಎಚ್ಚರಿಕೆ

ಆಸ್ತಿ ತೆರಿಗೆ ಹೆಚ್ಚಳ ವಿರೋಧಿಸಿ ಕಾಂಗ್ರೆಸ್‍ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ರಾಜ್ಯ ಸರ್ಕಾರದ ಆಸ್ತಿ ತೆರಿಗೆ ಹೆಚ್ಚಳ ಪ್ರಸ್ತಾವವನ್ನು ವಿರೋಧಿಸಿ ಕಾಂಗ್ರೆಸ್ ಜಿಲ್ಲಾ ಘಟಕದಿಂದ ಶುಕ್ರವಾರ ದಾವಣಗೆರೆ ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ‘ಒಂದು ತಿಂಗಳೊಳಗೆ ಆಸ್ತಿ ತೆರಿಗೆ ಹೆಚ್ಚಳ ಪ್ರಸ್ತಾವ ರಾಜ್ಯ ಸರ್ಕಾರ ಹಿಂಪಡೆಯಬೇಕು. ಇಲ್ಲದಿದ್ದರೆ ವಾರ್ಡ್ ಹಂತದಲ್ಲಿ ತೀವ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

‘ಈ ಹಿಂದೆ ಕುಂದವಾಡ ಕೆರೆ ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿಯವರು ಈಗ ಕೆರೆ ಅಭಿವೃದ್ಧಿ ಹೆಸರಿನಲ್ಲಿ ಲೂಟಿಗೆ ಇಳಿದಿದ್ದಾರೆ. ಯಾವುದೇ ವ್ಯವಹಾರ ಮಾಡದಿದ್ದರೂ ಕೋಟ್ಯಂತರ ರೂಪಾಯಿ ಆಸ್ತಿ ಮಾಡಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಬಿಜೆಪಿಯವರು ಮೊದಲು ತನಿಖೆಗೆ ಒಳಗಾಗಲಿ’ ಎಂದು ಒತ್ತಾಯಿಸಿದರು.

ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನವಿರೋಧಿಯಾಗಿದ್ದು, ಕಣ್ಣು-ಕಿವಿ ಇಲ್ಲದ ದಪ್ಪ ಚರ್ಮದ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಎರಡು ತಿಂಗಳ ಹಿಂದೆ ವಿದ್ಯುತ್ ದರ ಹೆಚ್ಚಿಸಿದ್ದ ರಾಜ್ಯ ಸರ್ಕಾರ ಮತ್ತೆ ಈಗ ಆಸ್ತಿ ತೆರಿಗೆ ಹೆಚ್ಚಿಸಲು ಹೊರಟಿದೆ. ಹಣ ನೀಡಿ ಶಾಸಕರನ್ನು ಖರೀದಿಸಿದ ಬಿಜೆಪಿ ಸರ್ಕಾರ ಜನರ ಮೇಲೆ ತೆರಿಗೆ ಹೆಚ್ಚಿಸುವ ಮೂಲಕ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಲು ಹೊರಟಿದೆ’ ಎಂದು ದೂರಿದರು.

ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್ ಮಾತನಾಡಿ, ‘ಅತಿವೃಷ್ಟಿ ವೇಳೆ ಆಸ್ತಿ ತೆರಿಗೆ ಹಾಕದಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಆದರೂ ಕಳೆದ ಫೆಬ್ರುವರಿಯಲ್ಲಿ ಆಸ್ತಿ ತೆರಿಗೆ ಹೆಚ್ಚಿಸಲಾಗಿದೆ‌’ ಎಂದು ಆರೋಪಿಸಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ಜಿ.ಶಿವಕುಮಾರ್, ಕಾಂಗ್ರೆಸ್ ಮುಖಂಡ ಸೋಮ್ಲಾಪುರದ ಹನುಮಂತಪ್ಪ, ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಜಿಲ್ಲಾ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್, ಬಿ.ಜಿ. ನಾಗರಾಜ್, ಮಹಾನಗರ ಪಾಲಿಕೆ ಸದಸ್ಯರಾದ ವಿನಾಯಕ ಪೈಲ್ವಾನ್, ಜಾಕೀರ್ ಅಲಿ, ಕಲ್ಲಳ್ಳಿ ನಾಗರಾಜ್, ಸುಷ್ಮಾ ಪಾಟೀಲ್, ಡೋಲಿ ಚಂದ್ರು, ಗೋವಿಂದ ಹಾಲೇಕಲ್ಲು,ಕೆ.ಎಂ.ಮಂಜುನಾಥ್, ಶುಭಮಂಗಳ, ಮಂಗಳಮ್ಮ, ಉಮಾಕುಮಾರ್, ಆವರಗೆರೆ ಅಣ್ಣೇಶನಾಯ್ಕ, ವೆಂಕಟೇಶನಾಯ್ಕ, ಮುನಿಸ್ವಾಮಿ, ಅಲೆಕ್ಸಾಂಡರ್, ರವಿ, ಗೋಪಾಲ್, ರಾಕೇಶ್, ಅಬ್ದುಲ್ ಜಬ್ಬಾರ್, ಮೊಟ್ಟೆ ದಾದಾಪೀರ್, ಯುವರಾಜ್, ಕರಿಬಸಪ್ಪ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು