ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನೇಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ: ಸಚಿವ ಬೈರತಿ ಬಸವರಾಜ

Last Updated 27 ಜನವರಿ 2023, 5:08 IST
ಅಕ್ಷರ ಗಾತ್ರ

ದಾವಣಗೆರೆ: ಸ್ವಾತಂತ್ರ್ಯ ಗಳಿಸಿದ ಏಳು ದಶಕಗಳಲ್ಲಿ ದೇಶವು ಕೃಷಿ, ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೆ, ಬಾಹ್ಯಾಕಾಶ, ರಕ್ಷಣೆ, ವ್ಯಾಪಾರ, ಶಿಕ್ಷಣ, ಮೂಲ ಸೌಕರ್ಯಗಳ ಅಭಿವೃದ್ಧಿ, ಬಡತನ ನಿವಾರಣೆ, ಅಸಮಾನತೆ ನಿವಾರಣೆ ಸಹಿತ ಗಣನೀಯ ಸಾಧನೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಗಣರಾಜ್ಯೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

‘ದೇಶವು ಜ್ಯಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ತಳಹದಿಯ ಮೇಲೆ ನಿರ್ಮಿತವಾದ ಬಲಿಷ್ಠ ಗಣತಂತ್ರ ವ್ಯವಸ್ಥೆ ಒಳಗೊಂಡಿದೆ. ಭಾರತವನ್ನು ಬಲಾಢ್ಯ ಗಣರಾಜ್ಯವನ್ನಾಗಿ ರೂಪಿಸುವಲ್ಲಿ ತ್ಯಾಗ, ಬಲಿದಾನ ನೀಡಿದ ಮಹನೀಯರನ್ನು, ಅಸಂಖ್ಯಾತ ಯೋಧರನ್ನು, ದೇಶಾಭಿಮಾನಿಗಳನ್ನು ಕೃತಜ್ಞತಾ ಭಾವದಿಂದ ನೆನೆಯುತ್ತ, ಅವರ ಆಶಯದಂತೆ ರಾಷ್ಟ್ರವನ್ನು ಮತ್ತಷ್ಟು ಅಭ್ಯುದಯದತ್ತ ಕೊಂಡೊಯ್ಯುವುದು ನಮ್ಮೆಲ್ಲರ ಕರ್ತವ್ಯ’ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಮೂರೂವರೆ ವರ್ಷಗಳ ಹಿಂದೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಯಾವುದೇ ಕ್ಷೇತ್ರ ಮತ್ತು ಇಲಾಖೆಗಳನ್ನು ಕಡೆಗಣಿಸದೇ, ಜನರ ಅವಶ್ಯಕತೆಗೆ ತಕ್ಕಂತೆ, ಆದ್ಯತೆಯ ಮೇರೆಗೆ ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರಲಾಗಿದೆ ಎಂದರು.

ಜಿಲ್ಲೆಯಲ್ಲಿ ಪೈಲೆಟ್‌ ಯೋಜನೆಯಾಗಿ ‘ಗ್ರಾಮ ಒನ್‌’ ಜಾರಿಗೆ ತರಲಾಗಿದೆ. ಅದು ಈಗ ರಾಜ್ಯದಾದ್ಯಂತ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿಯವರೆಗೆ 9.75 ಲಕ್ಷ ಸೇವೆಗಳನ್ನು ‘ಗ್ರಾಮ ಒನ್‌’ ಮೂಲಕ ನೀಡಲಾಗಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

46 ಹೊಸ ತಾಂಡಾಗಳಲ್ಲಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ‘ಜಲಸಿರಿ’ ಯೋಜನೆಯಡಿ ಹಲವು ಬಡಾವಣೆಗಳಲ್ಲಿ ನೀರು ನೀಡಲಾಗುತ್ತಿದೆ. ಈ ವರ್ಷದ ಅಂತ್ಯಕ್ಕೆ ನಗರದ ಎಲ್ಲ ಕಡೆ ಕುಡಿಯುವ ನೀರು ಒದಗಿಸಲಾಗುವುದು. ಪೌರಕಾರ್ಮಿಕರ ಮನೆಗಳ ನಿರ್ಮಾಣ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. 200 ಟನ್‌ ಸಾಮರ್ಥ್ಯದ ಘನತ್ಯಾಜ್ಯ ಸಂಸ್ಕರಣಾ ಘಕದ ನಿರ್ಮಾಣ ಪ್ರಕ್ರಿಯೆ ಆರಂಭವಾಗಿದೆ. ‘ಸ್ಮಾರ್ಟ್‌ಸಿಟಿ’ ಯೋಜನೆಯಡಿ ನಗರದ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ವಿವರಿಸಿದರು.

ಕೃಷಿ, ಶಿಕ್ಷಣ, ಆರೋಗ್ಯ, ಉದ್ಯೋಗ ಖಾತರಿ, ಕುಡಿಯುವ ನೀರು, ನೈರ್ಮಲ್ಯ, ಪಶುಪಾಲನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿ ಅನೇಕ ವಿವರ ನೀಡಿದರು.

ಶಾಸಕ ಎಸ್.ಎ. ರವೀಂದ್ರನಾಥ್‌, ವಿಧಾನ ಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್, ಮೇಯರ್ ಜಯಮ್ಮ ಗೋಪಿನಾಯ್ಕ್, ಧೂಡಾ ಅಧ್ಯಕ್ಷ ಎ.ವೈ. ಪ್ರಕಾಶ್‌, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಎ. ಚನ್ನಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಪಾಲಿಕೆ ಆಯುಕ್ತೆ ರೇಣುಕಾ ಇದ್ದರು.

ಸಾಧಕರಿಗೆ ಸನ್ಮಾನ

ವಿನಯ ಎಸ್‌., ಮಾನ್ಯ ಬಿ.ಎಂ., ಗೌರಿ ಎಚ್‌.ಎಸ್‌., ಪ್ರಕಾಶ ದುಗಪ್ಪ ಮಾದರ, ಭೂಮಿಕಾ ಬಸವರಾಜ ಮುತ್ತಗಿ, ಪೂಜಾ ಪಾಟೀಲ್‌, ಚಂದನ, ಸೃಷ್ಟಿ ಎಚ್‌.ಸಿ. ಅವರಿಗೆ ಜಿಲ್ಲಾಮಟ್ಟದ ಅಸಾಧಾರಣ ಪ್ರತಿಭೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜತೆಗೆ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.

ಆಕರ್ಷಕ ಪಥಸಂಚಲನ

22 ತಂಡಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದವು. ಈ ಬಾರಿಯೂ ಪಥಸಂಚಲನದ ಪ್ರಕ್ರಿಯೆ ಕನ್ನಡದಲ್ಲಿ ನಡೆಯಿತು. ಹೊನ್ನೂರಪ್ಪ ನೇತೃತ್ವದ ವಾದ್ಯವೃಂದ ತಂಡ ಭಾಗವಹಿಸಿದ್ದು, ಸೇವಾದಳದ ಅಣ್ಣಯ್ಯ ಧ್ವಜಸ್ತಂಭ ನಿರ್ವಹಣೆ ಮಾಡಿದರು.

ಮನಸೆಳೆದ ನೃತ್ಯ ಕಾರ್ಯಕ್ರಮ

ಯುನೈಟೆಡ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌, ಅಲ್‌ ಇಕ್ರ ಸ್ಕೂಲ್‌, ತುರ್ಚಘಟ್ಟದ ಗುರುಕುಲ ಶಾಲೆಯ ಮಕ್ಕಳ ನೃತ್ಯ ಕಾರ್ಯಕ್ರಮ ಮನಸೆಳೆಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT