ಸೋಮವಾರ, ಜೂನ್ 14, 2021
22 °C

ಕೊರೊನಾ ನೆರವಿಗೆ 112 ಸಂಪರ್ಕಿಸಿ: ಎಸ್‌ಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾಗೆ ಸಂಬಂಧಿಸಿದಂತೆ ನೆರವು ಬೇಕಾದಾಗ. ಆಮ್ಲಜನಕ, ರೆಮ್‌ಡಿಸಿವರ್‌, ಬೆಡ್‌ಗಳ ಅವಶ್ಯಕತೆ ಇದ್ದಾಗಲೂ ಜನರು ಸಹಾಯವಾಣಿಯಾದ 112 ಬಳಸಿಕೊಳ್ಳಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

ಲಸಿಕಾ ಕೇಂದ್ರಗಳಲ್ಲಿ ಜನಸಂದಣಿ ಹೆಚ್ಚಾಗುವುದನ್ನು ತಪ್ಪಿಸಲು ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಬೇಕು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಸಲಹೆ ನೀಡಿದರು.

ಕಳೆದ ಕೆಲ ದಿನಗಳಿಂದ ಲಸಿಕೆ ನೀಡದ ಕಾರಣ ಈಗ ಜನಸಂದಣಿ ಹೆಚ್ಚಾಗಿದೆ. ಪ್ರಸಕ್ತ ಎರಡನೇ ಡೋಸ್ ಲಸಿಕೆಯಷ್ಟೇ ನೀಡುತ್ತಿರುವುದರಿಂದ ಜನಸಂದಣಿ ಕಡಿಮೆಯಾಗಲಿದೆ. ಜನರು ಆನ್‌ಲೈನ್‌ ಪೋರ್ಟಲ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು.

ವದಂತಿ ಹಬ್ಬಿಸಿದರೆ ಕ್ರಮ: ಕೊರೊನಾ ರಾಷ್ಟ್ರೀಯ ವಿಪತ್ತಿನ ಸಮಯದಲ್ಲಿ ತಪ್ಪು ಮಾಹಿತಿ, ವದಂತಿಗಳನ್ನು ಹರಡಿದರೆ ವಿಕೋಪ ನಿರ್ವಹಣೆ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ನಗರದ ಬಟ್ಟೆ ಅಂಗಡಿಯೊಂದು ಅರ್ಧ ತೆಗೆದು ಮಾರಲಾಗುತ್ತಿದೆ ಎಂದು ವರ್ಷದ ಹಿಂದಿನ ವಿಡಿಯೊವನ್ನು ಈಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿತ್ತು. ಅದೇ ರೀತಿ ಪೊಲೀಸರಿಂದ ದಂಡದ ರಸೀತಿಯಲ್ಲಿ ಹೆಸರು ಹಾಗೂ ಇತರೆ ವಿವರಗಳನ್ನು ಮರೆ ಮಾಚಿ, ಪೊಲೀಸರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಹೇಳಿಕೆ ನೀಡುವ ಚಿತ್ರವೊಂದನ್ನೂ ಹರಿ ಬಿಡಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದಾಗಲೂ ತಪ್ಪು ಮಾಹಿತಿ ನೀಡಲಾಗಿತ್ತು ಎಂಬುದು ಕಂಡು ಬಂದಿದೆ ಎಂದು ವಿವರಿಸಿದರು.

ಈ ಎರಡೂ ಘಟನೆಗಳಲ್ಲಿ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳಲಾಗಿದೆ. ಕೊರೊನಾ ಸಂದರ್ಭದಲ್ಲಿ ದುರುದ್ದೇಶದಿಂದ ಮಾಹಿತಿ ಹರಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

‘ಟ್ರಿಪಲ್ ರೈಡ್ ಮಾಡುವವರು ಹಾಗೂ ಮಾಸ್ಕ್ ಧರಿಸದೇ ಇರುವವರು ದಂಡ ಹಾಕಬೇಡಿ ಎಂದು ಹೇಳುತ್ತಾ ಅಸಹಕಾರ ನೀಡುವುದು ಕಂಡು ಬರುತ್ತಿದೆ. ಜನರಿಗೆ ದಂಡ ಹಾಕುವುದು ನಮ್ಮ ಉದ್ದೇಶವಲ್ಲ. ಕೊರೊನಾ ಸಮಯದಲ್ಲಿ ಮುನ್ನೆಚ್ಚರಿಕೆ ವಹಿಸುವ ಮೂಲಕ ಜನರು ಸಹಕರಿಸಬೇಕು’ ಎಂದು ಅವರು ಮನವಿ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು