ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಶಾಲೆಯ ತೆರೆಯಲು ಪೋಷಕರು ಸಹಕರಿಸಿ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಸ್.ಆರ್. ಉಮಾಶಂಕರ್ ಮನವಿ
Last Updated 13 ಆಗಸ್ಟ್ 2021, 5:10 IST
ಅಕ್ಷರ ಗಾತ್ರ

ದಾವಣಗೆರೆ: 9ರಿಂದ 12ನೇ ತರಗತಿವರೆಗಾದರೂ ಶಾಲಾ ಕಾಲೇಜು ಆರಂಭಿಸಬೇಕು. ಅದಕ್ಕೆ ವಿದ್ಯಾರ್ಥಿಗಳ ಪೋಷಕರು ಸಹಕಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಸ್.ಆರ್. ಉಮಾಶಂಕರ್ ಕೋರಿದರು.

ಗುರುವಾರ ಜಿಲ್ಲಾಡಳಿತ ಭವನದ ತುಂಗಾಭದ್ರಾ ಸಂಭಾಗಣದಲ್ಲಿ ಏರ್ಪಡಿಸಿದ್ದ ಕೋವಿಡ್ 3ನೇ ಅಲೆ ತಡೆಗಟ್ಟಲು ತೆಗೆದುಕೊಳ್ಳಲಾದ ಕ್ರಮಗಳು ಹಾಗೂ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಕೊರೊನಾ ಕಾರಣದಿಂದ ಶಾಲೆಗಳನ್ನು ಮುಚ್ಚಲಾಗಿದೆ. ಇದರಿಂದ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹಿಂದುಳಿಯುವುದಷ್ಟೇ ಅಲ್ಲ, ಶಿಕ್ಷಣದಿಂದಲೇ ದೂರ ಸರಿಯುವ ಪ್ರಕರಣಗಳೂ ನಡೆದಿವೆ ಎಂದು ವಿವರಿಸಿದರು.

ಈಗಾಗಲೇ ಕರೊನಾದ ಮೊದಲ ಹಾಗೂ ಎರಡನೇ ಅಲೆಯನ್ನು ನಿಭಾಯಿಸಿದ್ದೇವೆ. ಆ ಅನುಭವವನ್ನು ಬಳಸಿಕೊಂಡು ಸಂಭಾವ್ಯ 3ನೇ ಅಲೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಎದುರಿಸಲು ಎಲ್ಲರೂ ಕೈಜೋಡಿಸಬೇಕು. 3ನೇ ಅಲೆ ಮುಗಿದರೆ ಬಳಿಕ ಬರುವ ಅಲೆಗಳು ಅಷ್ಟು ಅಪಾಯಕಾರಿ ಅಲ್ಲ ಎಂದು ತಜ್ಞರು ಹೇಳಿದ್ದಾರೆ. ಹಾಗಾಗಿ ಮೂರನೇ ಅಲೆಯಲ್ಲಿ ಎಚ್ಚರದಿಂದ ಇರಬೇಕು ಎಂದು ತಿಳಿಸಿದರು.

3ನೇ ಅಲೆ ತಡೆಯಲು ಹೆಚ್ಚು ಪರೀಕ್ಷೆಗಳನ್ನು ಮಾಡಬೇಕು ಹಾಗೂ ಹೋಮ್ ಐಸೋಲೇಶ್‍ನನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ಎರಡನೇ ಅಲೆಯಲ್ಲಿ ಹೋಂ ಐಸೊಲೇಶನ್‌ ಆರಂಭದಲ್ಲೇ ನಿಲ್ಲಿಸದೇ ಇದ್ದಿದ್ದು ಪ್ರಕರಣ ಹೆಚ್ಚಾಗಲು ಕಾರಣವಾಯಿತು ಎಂದು ವಿವರಿಸಿದರು.

ಕೊರೊನಾ ನಿರೋಧಕ ಲಸಿಕೆ ಎಲ್ಲರಿಗೂ ನೀಡಬೇಕು. ಅದರ ಜತೆಗೆ ಅದೇ ಪರಿಹಾರವೇ ಎಂಬ ಬಗ್ಗೆಯೂ ಇನ್ನೂ ಸರಿಯಾಗಿ ಗೊತ್ತಾಗಿಲ್ಲ. ಅಮೆರಿಕದಲ್ಲಿ ಎರಡನೇ ಡೋಸ್‌ ಮುಗಿದಿದ್ದರೂ ಮತ್ತೆ ಕೊರೊನಾ ಕಾಣಿಸಿಕೊಂಡಿದೆ ಎಂದು ಅನುಮಾನ ವ್ಯಕ್ತಡಿಸಿದರು.

ಕೊರೊನಾ ನಿರೋಧಕ ಲಸಿಕೆ ಹೆಚ್ಚು ಒದಗಿಸಬೇಕು. ಮೂರನೇ ಅಲೆ ನಿಯಂತ್ರಿಸಲು ಈಗಾಗಲೇ ಸಲ್ಲಿಸಿರುವ ಬೇಡಿಕೆಗಳನ್ನು ಪೂರೈಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿದರು.

ಶ್ರಾವಣ ಮಾಸ ಆರಂಭವಾಗಿದ್ದು, ಮುಂದೆ ನವೆಂಬರ್‌ ವರೆಗೂ ಸಾಲು-ಸಾಲು ಹಬ್ಬಗಳಿವೆ. ಈ ಬಾರಿ ಹಬ್ಬಗಳನ್ನು ನಿಯಂತ್ರಿಸಬೇಕು. ಈ ಬಾರಿ ಹಬ್ಬ ಆಚರಿಸದೇ ಇದ್ದರೆ ಮುಂದಿನ ವರ್ಷದಿಂದ ಚೆನ್ನಾಗಿ ಹಬ್ಬ ಮಾಡಬಹುದು. ಇಲ್ಲದೇ ಇದ್ದರೆ ಮುಂದಿನ ವರ್ಷ ಕೊರೊಗಬೇಕಾಗುತ್ತದೆ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ರಾಘವನ್ ಸಭೆಗೆ ಕರೊನಾ ನಿರ್ವಹಣೆ ಬಗೆಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಡಾ. ವಿಜಯ ಮಹಾಂತೇಶ್ ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಡಿಎಚ್‍ಒ ಡಾ.ನಾಗರಾಜ್, ಆರ್‌ಸಿಎಚ್ ಡಾ. ಮೀನಾಕ್ಷಿ, ಜಿಲ್ಲಾ ಸರ್ಜನ್ ಡಾ.ಜಯಪ್ರಕಾಶ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT