ಮಂಗಳವಾರ, ಜನವರಿ 21, 2020
19 °C
ಪಂಚಾಯತ್ ಅಧಿಕಾರಿಗಳಿಗೆ ಕೋಟ್ಪಾ– 2003 ಕುರಿತ ಕಾರ್ಯಾಗಾರ

ತಂಬಾಕು ನಿಯಂತ್ರಣಕ್ಕೆ ಸಹಕಾರ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಆರೋಗ್ಯ ಇಲಾಖೆಯೊಂದಿಗೆ ಎಲ್ಲಾ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮೀಣ ಮಟ್ಟದಲ್ಲಿ ಜನಪ್ರತಿನಿಧಿಗಳು ಎಲ್ಲರೂ ಒಗ್ಗೂಡಿ ತಂಬಾಕು ನಿಯಂತ್ರಣಕ್ಕೆ ಮುಂದಾದಲ್ಲಿ ಯಶಸ್ಸು ಸಾಧ್ಯ  ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ. ಆನಂದ್ ಹೇಳಿದರು.

ಇಲ್ಲಿನ ಚೇತನಾ ಹೋಟೆಲ್ ಸಭಾ ಭವನದಲ್ಲಿ ಶುಕ್ರವಾರ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕೋಟ್ಪಾ ಕಾಯ್ದೆ ಕುರಿತು ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸ

15 ರಿಂದ 20 ವರ್ಷದೊಳಗಿನ ಯುವಜನರು ಇಂದು ತಂಬಾಕು ಉತ್ಪನ್ನಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ. ತಂಬಾಕು ನಿಯಂತ್ರಣ ತಂಡವು ಗ್ರಾಮೀಣ ಹಾಗೂ ನಗರಗಳ ಶಾಲಾ-ಕಾಲೇಜು ಸುತ್ತಮುತ್ತಲಿನ ಅಂಗಡಿಗಳಿಗೆ ದಾಳಿ ನಡೆಸಿ ದಂಡ ಮತ್ತು ಪ್ರಕರಣ ದಾಖಲಿಸಬೇಕು. ಕೇವಲ ಗುಲಾಬಿ ಆಂದೋಲನದ ಮೂಲಕ ಮನವೊಲಿಸದೆ ದಂಡ ಮತ್ತು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಗ್ರಾಮೀಣ ಮಟ್ಟದಲ್ಲಿ ಕಾರ್ಯ ನಿರ್ವಾಹಕ ಅಧಿಕಾರಿಗಳು, ಪಿಡಿಒಗಳು ದಾಳಿ ನಡೆಸುವ ಅಧಿಕಾರ ಹೊಂದಿದ್ದು, ತಂಡಗಳನ್ನು ರಚಿಸಿಕೊಂಡು ಪ್ರತಿ 15 ದಿನಗಳಿಗೊಮ್ಮೆ ದಾಳಿ ನಡೆಸಬೇಕು. 2 ತಿಂಗಳಾದರೂ ತಂಬಾಕು ಉತ್ಪನ್ನ ಮಾರಾಟ ನಿಲ್ಲಿಸದಿದ್ದಲ್ಲಿ, ತಂಬಾಕು ನಿಷೇಧ ಫಲಕ ಹಾಕದಿದ್ದಲ್ಲಿ ಪ್ರಕರಣ ದಾಖಲಿಸಬೇಕು. ನಗರ ಪ್ರದೇಶದ ಮೆಡಿಕಲ್, ಎಂಜಿನಿಯರಿಂಗ್ ಕಾಲೇಜು ಸುತ್ತಮುತ್ತಲೂ ಡ್ರಗ್ ಮಾಫಿಯಾ ಬೆಳೆಯುತ್ತಿದೆ ಎಂಬ ಮಾಹಿತಿ ಇದ್ದು, ಈ ಬಗ್ಗೆಯೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ‘ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾನೂನು-ಕೋಟ್ಪಾ– 2003 ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಿರಂತರವಾಗಿ ತಂಬಾಕು ದಾಳಿ, ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ತಮ್ಮ ಶಿಕ್ಷಣ ಸಂಸ್ಥೆಯನ್ನು ಸಂಪೂರ್ಣ ತಂಬಾಕು ಮುಕ್ತವಾಗಿಸುವ ಜವಾಬ್ದಾರಿ ಹೊಂದಿರುತ್ತಾರೆ. ಶಿಕ್ಷಣ ಸಂಸ್ಥೆಗಳನ್ನು ತಂಬಾಕುಮುಕ್ತಗೊಳಿಸಲು ಸಹಕರಿಸಿದ 30 ಮುಖ್ಯಶಿಕ್ಷಕರನ್ನು ಗುರುತಿಸಿ ಸನ್ಮಾನಿಸಲಾಗಿದೆ. 40 ಜನ ತಂಬಾಕು ಬೆಳೆಗಾರರಿಗೆ ಕಾರ್ಯಾಗಾರ ನಡೆಸಿ ಪೂರಕ ಬೆಳೆ ಬೆಳೆಯುವಂತೆ ಉತ್ತೇಜಿಸಲಾಗಿದೆ’ ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ತಂಬಾಕು ಬಳಸುವವರ ಸಂಖ್ಯೆ ಹೆಚ್ಚುತ್ತಿದ್ದು, ನಿಯಂತ್ರಿಸುವ ನಿಟ್ಟಿನಲ್ಲಿ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಪಿಡಿಒಗಳಿಗೆ ನಿಯಂತ್ರಣ ಅನುಷ್ಠಾನ ಅಧಿಕಾರ ನೀಡಲಾಗಿದೆ. ಇನ್ನು ಮುಂದೆ ಕೋಟ್ಪಾ ಕಾಯ್ದೆ ಉಲ್ಲಂಘನೆ ಸಂಬಂಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಗಂಗಾಧರ್, ‘ತಂಬಾಕಿನ ವಿರುದ್ದ ಹೋರಾಡುವಲ್ಲಿ ನನ್ನ ಪಾತ್ರವೂ ಇದೆ ಎಂದು ಎಲ್ಲರೂ ಅರಿತು, ಎಲ್ಲ ಇಲಾಖೆಗಳು, ಸಾರ್ವಜನಿಕರು ಸಾಮೂಹಿಕ ಜವಾಬ್ದಾರಿಯಿಂದ ಮುಂದೆ ಬಂದಲ್ಲಿ ತಂಬಾಕು ಮುಕ್ತಗೊಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಅರಿವು ಹೆಚ್ಚಬೇಕು’ ಎಂದು ಹೇಳಿದರು.

ರಾಜ್ಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ, ಸಿ.ಜಿ.ಆಸ್ಪತ್ರೆ ದಂತ ವಿಭಾಗದ ಮುಖ್ಯಸ್ಥ ಡಾ.ತಿಪ್ಪೇಸ್ವಾಮಿ ಮಾತನಾಡಿದರು.

ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕರಾದ ಮಹಾಂತೇಶ ಉಳ್ಳಾಗಡ್ಡಿ  ಉಪನ್ಯಾಸ ನೀಡಿದರು.

ರೇಖಾ ಮತ್ತು ರೂಪ ಪ್ರಾರ್ಥಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಉಮಾಪತಿ ಸ್ವಾಗತಿಸಿ, ವಂದಿಸಿದರು.

ಪ್ರತಿಕ್ರಿಯಿಸಿ (+)