ಬುಧವಾರ, ಏಪ್ರಿಲ್ 21, 2021
30 °C
ಕೋವಿಡ್‌ ನಿಯಂತ್ರಣ ಅಧಿಕಾರಿಗಳ ಸಭೆ

ಕೊರೊನಾ ಯುದ್ಧ ಮುಗಿದಿಲ್ಲ, ಮೈಮರೆತರೆ ಎಫ್‌ಐಆರ್‌: ಜಿಲ್ಲಾಧಿಕಾರಿ ಬೀಳಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ಯುದ್ಧ ಮುಗಿದಿಲ್ಲ. ಮದುವೆ, ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳೂ ಒಳಗೊಂಡಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮೈಮರೆತು ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು ಸೇರಿದಲ್ಲಿ ಎಫ್‍ಐಆರ್ ದಾಖಲಿಸಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚನೆ ನೀಡಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೋವಿಡ್ ಲಸಿಕೆ ನೀಡಿಕೆ ಪ್ರಗತಿ ಮತ್ತು ಕೋವಿಡ್ ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನರು ಕೊರೊನಾ ನಿಯಮಾವಳಿಗಳನ್ನು ಗಾಳಿಗೆ ತೂರಿ ಬದುಕುತ್ತಿರುವುದನ್ನು ನೋಡುತ್ತಿದ್ದರೆ ಎರಡನೇ ಅಲೆ ದೂರವಿಲ್ಲ ಎಂದೆನ್ನಿಸುತ್ತಿದೆ. ಜಿಲ್ಲೆ ಮತ್ತು ತಾಲ್ಲೂಕು ಆಡಳಿತ ಮೈಮರೆಯಬಾರದು ಎಂದು ತಿಳಿಸಿದರು.

ಕೋವಿಡ್‌ ಪರೀಕ್ಷೆ ಹೆಚ್ಚಿಸಬೇಕು. ಜಿಲ್ಲೆಯಲ್ಲಿ ಪ್ರತಿದಿನ 2,800 ಪರೀಕ್ಷೆ ಮಾಡಬೇಕಾದ ಗುರಿ ಇದೆ. ಆದರೆ ಪ್ರಗತಿ ಅಷ್ಟಿಲ್ಲ. ಇನ್ನು ಮುಂದೆ ಹೆಚ್ಚುವರಿಯಾಗಿ 100 ಟೆಸ್ಟ್ ಮಾಡಬೇಕು. ದಾವಣಗೆರೆ ತಾಲ್ಲೂಕಿನಲ್ಲಿ 1000, ಹೊನ್ನಾಳಿ ಮತ್ತು ಹರಿಹರ ತಲಾ 375, ಜಗಳೂರು 300 ಮತ್ತು ಚನ್ನಗಿರಿ 450 ಪರೀಕ್ಷೆಗಳನ್ನು ಪ್ರತಿದಿನ ಮಾಡಬೇಕು. ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರ ಪರೀಕ್ಷೆ ಕೂಡ ಮಾಡಬೇಕು ಎಂದರು.

ಲಸಿಕೆ ಪಡೆಯುವವರ ಸಂಖ್ಯೆ ಕಡಿಮೆ ಇದೆ. ಲಸಿಕೆ ಪಡೆಯಲು ಉತ್ತೇಜನ ನೀಡಬೇಕು. ಜನರನ್ನು ಮನವೊಲಿಸಬೇಕು. ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, 60 ವರ್ಷದ ದಾಟಿದ ಎಲ್ಲರು, ಇತರ ರೋಗಗಳಿರುವ 45 ವರ್ಷದ ದಾಟಿದವರು ಲಸಿಕೆ ಪಡೆಯಬೇಕು ಎಂದು ಹೇಳಿದರು.

ಶೀತಜ್ವರ, ಉಸಿರಾಟದ ಸಮಸ್ಯೆ ಇದ್ದವರ ಬಗ್ಗೆ ಖಾಸಗಿ ಆಸ್ಪತ್ರೆಗಳು ಮಾಹಿತಿ ಕಳುಹಿಸಬೇಕು. ಮಾಹಿತಿ ನೀಡದ ಆಸ್ಪತ್ರೆಗಳನ್ನು ಮುಚ್ಚಲು ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ‘ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳು, ಮದುವೆ ಇತರೆ ಜನ ಸೇರುವ ಸಮಾರಂಭಗಳಿಗೆ ಸ್ಥಳೀಯ ಸಂಸ್ಥೆಗಳು ಅನುಮತಿ ನೀಡುವಾಗ ಕಟ್ಟುನಿಟ್ಟಾಗಿ ನಿಯಮಾವಳಿಯನ್ನು ಪಾಲಿಸಬೇಕು. ಕೋವಿಡ್ ನಿಯಮಾವಳಿ ಪಾಲನೆ ಬಗ್ಗೆ ಸಭೆ ಕರೆದು ನಡಾವಳಿ ಸಿದ್ಧಪಡಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಕೋವಿಡ್ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಸದಾ ಸಿದ್ಧವಾಗಿದ್ದು ನೆರವು ಪಡೆದುಕೊಳ್ಳಿ’ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ವಿಜಯ ಮಹಾಂತೇಶ್‌ ದಾನಮ್ಮನವರ್‌, ‘ಲಸಿಕೆ ಹಾಕಲು ಹಾಗೂ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಂಗನವಾಡಿ, ಆಶಾ, ಪಿಡಿಓ ಸೇರಿದಂತೆ ನೌಕರರಿಗೆ ಮೈಕ್ರೋ ಪ್ಲಾನ್ ಸಿದ್ಧಪಡಿಸಬೇಕು. ಅದರಂತೆ ಕಾರ್ಯಾಚರಣೆ ಮಾಡಬೇಕು. ಶೀತ, ಕೆಮ್ಮು, ಮೈಕೈ ನೋವಿನಂತಹ ಪ್ರಕರಣಗಳಿಗೆ ಇನ್ನು ಮುಂದೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಬೇಕು’ ಎಂದರು.

ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ತಹಶೀಲ್ದಾರ್‌ಗಳಾದ ಗಿರೀಶ್, ಡಾ.ನಾಗವೇಣಿ, ರಾಮಚಂದ್ರಪ್ಪ, ಬಸವನಗೌಡ, ಆರ್‌ಸಿಎಚ್‍ಒ ಡಾ.ಮೀನಾಕ್ಷಿ, ಡಿಎಸ್‍ಒ ಡಾ.ರಾಘವನ್, ಟಿಎಚ್‍ಒ ಡಾ.ವೆಂಕಟೇಶ್ ಅವರೂ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.