ಮಂಗಳವಾರ, ಮಾರ್ಚ್ 31, 2020
19 °C
ಕೊರೊನಾ ಸೋಂಕು ತಡೆಯಲು ಕ್ರಮ

ದಾವಣಗೆರೆ: ರಸ್ತೆ ಬಂದ್‌ ಮಾಡಿದ ಕೋಲ್ಕುಂಟೆ ಗ್ರಾಮಸ್ಥರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ಸೋಂಕು ಹರಡುವುದನ್ನು ತಡೆಯಲು ದೇಶದಾದ್ಯಂತ ‘ಲಾಕ್‌ಡೌನ್‌’ ಮಾಡಿರುವುದರಿಂದ ತಾಲ್ಲೂಕಿನ ಕೈದಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಲ್ಕುಂಟೆ ಯುವಕರು ರಸ್ತೆಗಳ ಮೇಲೆ ಮುಳ್ಳುಗಳನ್ನಿಟ್ಟು ಹೊರಗಿನಿಂದ ಗ್ರಾಮದೊಳಗೆ ಯಾರೂ ಪ್ರವೇಶಿಸದಂತೆ ನಿರ್ಬಂಧ ಹೇರಿದ್ದಾರೆ.

ಕೊರೊನಾ ಸೋಂಕು ಹರಡುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ಮನೆಯಲ್ಲೇ ಉಳಿಯುವಂತೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಯುವಕರು ಬುಧವಾರ ಬೆಳಿಗ್ಗೆ ಗ್ರಾಮವನ್ನು ಪ್ರವೇಶಿಸುವ ಎರಡು ಒಳ ರಸ್ತೆಗಳನ್ನು ಬಂದ್‌ ಮಾಡಿದ್ದಾರೆ. ‘ಗ್ರಾಮದಿಂದ ಯಾರೂ ಹೊರಗೆ ಹೋಗುವುದಿಲ್ಲ. ಹೊರಗಿನಿಂದಲೂ ಯಾರೂ ಗ್ರಾಮಕ್ಕೆ ಬರುವಂತಿಲ್ಲ’ ಎಂಬ ಫಲಕವನ್ನು ಹಾಕಿದ್ದಾರೆ.

‘ಲಾಕ್‌ಡೌನ್‌ ಮಾಡಿರುವುದರಿಂದ ನಗರದಲ್ಲಿರುವವರು ಊರಿಗೆ ಜನ ಮರಳುತ್ತಿದ್ದಾರೆ. ಅವರಿಂದ ಗ್ರಾಮದ ಜನರಿಗೆ ಕೊರೊನಾ ಸೋಂಕು ಬರುವ ಸಾಧ್ಯತೆ ಇರುವುದರಿಂದ ಗ್ರಾಮದ ಒಳ ರಸ್ತೆಯನ್ನು ಮುಚ್ಚಲು ಕೆಲ ವಿದ್ಯಾವಂತ ಯುವಕರು ನಿರ್ಧರಿಸಿದ್ದಾರೆ. ದಾವಣಗೆರೆ ನಗರದಿಂದ ಹಾಗೂ ಗೋಪನಾಳದಿಂದ ಗ್ರಾಮವನ್ನು ಪ್ರವೇಶಿಸುತ್ತಿದ್ದ ಒಳ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ’ ಎಂದು ಕೈದಾಳೆ ಪಂಚಾಯಿತಿ ಸದಸ್ಯರೂ ಆಗಿರುವ ಈ ಗ್ರಾಮದ ಕೆ.ಎಸ್‌. ಚನ್ನಸಬಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ದೇವಸ್ಥಾನ ಬಂದ್‌: ‘ಗ್ರಾಮದ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಕ್ಕೆ ವಾರಕ್ಕೆ 300ಕ್ಕೂ ಹೆಚ್ಚು ಜನ ಪಾಂಡುರಂಗ ಮಾಲೆ ಧರಿಸಲು ಹೊರ ಊರುಗಳಿಂದ ಬರುತ್ತಿದ್ದರು. ಕೊರೊನಾ ಸೋಂಕು ಹರಡುವ ಭೀತಿಯಿಂದ ಒಂದು ವಾರದಿಂದ ದೇವಸ್ಥಾನ ಬಂದ್‌ ಮಾಡಲಾಗಿದೆ. ಎಲ್ಲರೂ ಮನೆಯಲ್ಲೇ ಉಳಿಯುವಂತೆ ಗ್ರಾಮದಲ್ಲಿ ಡಂಗುರ ಹೊರಡಿಸಲಾಗಿದೆ. ಜೊತೆಗೆ ಒಂದು ವಾಹನದಲ್ಲಿ ಧ್ವನಿವರ್ಧಕದ ಮೂಲಕ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೂ ದಿನಾಲೂ ಸಂದೇಶ ರವಾನಿಸಲಾಗುತ್ತಿದೆ’ ಎಂದು ಕೈದಾಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ. ಕೃಷ್ಣ ತಿಳಿಸಿದರು.

‘ಬೆಂಗಳೂರಿನಿಂದ ಸುಮಾರು 10 ಜನ ಊರಿಗೆ ಬಂದಿದ್ದಾರೆ. ಆಶಾ ಕಾರ್ಯಕರ್ತೆಯರ ಸಹಾಯದಿಂದ ಅವರೆಲ್ಲರನ್ನೂ ಪತ್ತೆ ಮಾಡಲಾಗಿದೆ. ಅವರ ಆರೋಗ್ಯದ ಮೇಲೆ ನಿಗಾವಹಿಸಲಾಗುತ್ತಿದೆ’ ಎಂದೂ ತಿಳಿಸಿದರು.

ಮಾರ್ಕಿಂಗ್‌: ಗ್ರಾಮದಲ್ಲಿ ಶುದ್ಧ ನೀರಿನ ಘಟಕಕ್ಕೆ ಬರುವ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ಉದ್ದೇಶದಿಂದ ಈಗಾಗಲೇ ಮಾರ್ಕಿಂಗ್‌ ಮಾಡಲಾಗಿದೆ ಎಂದೂ ಕೃಷ್ಣ ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು