ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಮನ್ನಣೆ ಪಡೆಯದ ದೇಶದ ವಿವಿಗಳು- ಮಾಜಿ ಕುಲಾಧಿಪತಿ ಪ್ರೊ. ಪಿ.ವಿ. ಕೃಷ್ಣ

Last Updated 25 ಮಾರ್ಚ್ 2022, 4:40 IST
ಅಕ್ಷರ ಗಾತ್ರ

ದಾವಣಗೆರೆ: ‘ದೇಶದಲ್ಲಿ 800ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿವೆ ಎಂದು ನಾವು ಹೇಳಿಕೊಂಡರೂ
ವಿಶ್ವಸ್ತರದಲ್ಲಿ ಎಣಿಕೆಯಾಗಬಲ್ಲ ವಿಶ್ವವಿದ್ಯಾಲಯಗಳ ಪೈಕಿ ಬೆರಳೆಣಿಕೆಯಷ್ಟೂ ಇಲ್ಲ ಎಂಬುದು ಸಂತೋಷದ ಸಂಗತಿಯಲ್ಲ’ ಎಂದು ಒಡಿಶಾದ ಕೇಂದ್ರೀಯ ವಿಶ್ವವಿದ್ಯಾಲಯದ ಮಾಜಿ ಕುಲಾಧಿಪತಿ ಪ್ರೊ. ಪಿ.ವಿ. ಕೃಷ್ಣ ಭಟ್‌ ಕಳವಳ ವ್ಯಕ್ತಪಡಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವ ಭಾಷಣೆ ಮಾಡಿದ ಅವರು, ‘ಸ್ವಾತಂತ್ರ್ಯಾ ನಂತರ ದೇಶದಲ್ಲಿ ರಾಷ್ಟ್ರೀಯ ಸ್ಫೂರ್ತಿ, ಚಿಂತನೆಯನ್ನು ಉತ್ತೇಜಿಸುವ, ರಾಷ್ಟ್ರೀಯ ಉದ್ದೇಶಗಳಿಗೆ ಪೂರಕವಾದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವಲ್ಲಿ ನಾವು ಯಶಸ್ವಿಯಾಗಿಲ್ಲ’ ಎಂದರು.

‘ವಿಶ್ವವಿದ್ಯಾಲಯಗಳ ಹಾಗೂ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಸಾಕಷ್ಟು ವೃದ್ಧಿಯಾಗಿದೆ. ಆದರೆ, ವಿಶ್ವವಿದ್ಯಾಲಯಗಳಿಂದ ಹೊರಬರುತ್ತಿರುವ ವಿದ್ಯಾರ್ಥಿಗಳು ರಾಷ್ಟ್ರವನ್ನು ಕಟ್ಟುವ, ಭಾರತವು ವಿಶ್ವದ ರಾಷ್ಟ್ರಗಳ ಮಾಲಿಕೆಯಲ್ಲಿ ಅಗ್ರಮಾನ್ಯ ರಾಷ್ಟ್ರವಾಗಿ ನಿಲ್ಲುವಂತೆ ಮಾಡುವ ಕನಸು, ಧ್ಯೇಯವನ್ನು ಹೊತ್ತು ಹೊರಬರುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರ ಸಂತೋಷದಾಯಕವಾಗಿದೆ ಎಂದು ಹೇಳುವಂತಿಲ್ಲ. ದೆಹಲಿಯ ಜೆಎನ್‌ಯು ವಿವಿಯಂತಹ ಪ್ರತಿಷ್ಠಿತ ವಿ.ವಿ.ಗಳ ವಿದ್ಯಾರ್ಥಿಗಳು ಭಾರತ್‌ ತೇರೆ ಟುಕಡೆ ಹೋಂಗೆ ಎಂಬ ಘೋಷಣೆ ಹಾಕುವ ಮಟ್ಟಕ್ಕೆ ತಲುಪಿರುವುದು ನಮ್ಮ ಶಿಕ್ಷಣ ವ್ಯವಸ್ಥೆಯ ಘೋರ ದುರಂತ’ ಎಂದು ಹೇಳಿದರು.

‘ವಿಜ್ಞಾನ–ತಂತ್ರಜ್ಞಾನಗಳು ಎರಡುಅಲಗಿನ ಕತ್ತಿಗಳು. ಅವು ಜಗತ್ತಿಗೆ ತಾರಕವೂ ಆಗಬಲ್ಲವು. ದುಷ್ಟ ವ್ಯಕ್ತಿಗಳ ಕೈಗೆ ಸಿಲುಕಿದಾಗ ಮಾರಕವೂ ಆಗಬಹುದು. ಮಾರಕವಾಗದೇ ಕಲ್ಯಾಣಕಾರಿ ಆಗಬೇಕಾದರೆ ಜೀವನಮೌಲ್ಯಗಳನ್ನು ಅರಳಿಸುವುದು ಅತ್ಯಗತ್ಯ’ ಎಂದ ಅವರು, ರಷ್ಯಾ–ಉಕ್ರೇನ್‌ ಯುದ್ಧವನ್ನು ಉಲ್ಲೇಖಿಸಿದರು.

‘ವಿಶ್ವದಾದ್ಯಂತ ಗಂಭೀರವಾದ ಸಾಮಾಜಿಕ ತುಮುಲವನ್ನು ನಾವು ವೀಕ್ಷಿಸುತ್ತಿದ್ದೇವೆ. ಹಿಂಸೆ, ಕ್ರೌರ್ಯ, ಶಸ್ತ್ರಸಂಗ್ರಹ, ಯುದ್ಧಭೀತಿಯ ಸನ್ನಿವೇಶಗಳು ವಿಕಾರರೂಪವನ್ನು ತಳೆಯುತ್ತಿವೆ. ಭಾರತದ ಶಾಂತಿ ಸಮನ್ವಯತೆ ಸಂದೇಶಕ್ಕಾಗಿ ವಿಶ್ವ ಕಾತರಿಸುತ್ತಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ವಿಜ್ಞಾನದೊಡನೆ ಸಮಗ್ರ ಜೀವನ ದೃಷ್ಟಿ, ಮಾನವ ಕಲ್ಯಾಣದ ಮೌಲ್ಯಗಳು ಮೇಳೈಸದಿದ್ದಾಗ ವಿಜ್ಞಾನದ ಪ್ರಗತಿ ವಿನಾಶಕ್ಕೂ ದಾರಿಯಾಗಬಲ್ಲದು. ಹಿಂದೆ ನಡೆದ ವಿಶ್ವ ಯುದ್ಧಗಳು ವಿನಾಶದ ಭಯಾನಕತೆಯ ಚಿತ್ರವನ್ನು ತೆರೆದಿಟ್ಟಿವೆ. ಸದ್ಯದ ಜಾಗತಿಕ ಸನ್ನಿವೇಶದಲ್ಲಿ ಜಗತ್ತು ಸಿಡಿಮದ್ದುಗಳ ರಾಶಿಯ ಮೇಲೆಯೇ ಕುಳಿತಿದೆಯೇನೋ ಎನ್ನುವ ಚಿತ್ರ ಕಣ್ಣಿಗೆ ಕಟ್ಟುತ್ತಿದೆ. ವಿಜ್ಞಾನ–ತಂತ್ರಜ್ಞಾನಗಳು ವಿನಾಶಕಾರಕ ಆಗದಿರಬೇಕಾದರೆ ಸಮಗ್ರ ಜಗತ್ತಿನ ಹಿತವನ್ನು ಸಾಧಿಸುವ ಮನೋಭಾವ, ಜೀವನ ದೃಷ್ಟಿಯನ್ನು ಬೆಳೆಸುವಂತಾಗಬೇಕು’ ಎಂದು ಡಾ. ಕೃಷ್ಣ ಭಟ್‌ ಪ್ರತಿಪಾದಿಸಿದರು.

ಸ್ವಾಗತಿಸಿದ ಕುಲಪತಿ ಡಾ. ಶರಣಪ್ಪ ವಿ. ಹಲಸೆ ಅವರು ವಾರ್ಷಿಕ ವರದಿಯನ್ನು ವಾಚಿಸಿದರು. ಶೈಕ್ಷಣಿಕ ಪ್ರಗತಿಗಾಗಿ ಕೈಗೊಂಡ ಕ್ರಮಗಳ ವಿವರ ನೀಡಿದರು.

ಕುಲಸಚಿವೆ (ಆಡಳಿತ) ಡಾ.ಗಾಯತ್ರಿ ದೇವರಾಜ್‌, ಪರೀಕ್ಷಾಂಗ ಕುಲಸಚಿವೆ ಡಾ. ಎಚ್‌.ಎಸ್‌. ಅನಿತಾ, ಸಿಂಡಿಕೇಟ್‌, ವಿದ್ಯಾ ವಿಷಯಕ ಪರಿಷತ್‌ ಸದಸ್ಯರು, ವಿವಿಧ ನಿಕಾಯಗಳ ಡೀನ್‌ ಹಾಗೂ ವಿಭಾಗಗಳ ಮುಖ್ಯಸ್ಥರುಇದ್ದರು.

‘ದೇಶದ ಸವಾಲಿಗೆ ಯುವಶಕ್ತಿಪರಿಹಾರ ಹುಡುಕಲಿ’

‘ಭಾರತ ಯುವಜನರು ಹೆಚ್ಚಿರುವ ದೇಶವಾಗಿದ್ದು, ಅವರ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ದೇಶದ ಸಮಸ್ಯೆ–ಸವಾಲುಗಳಿಗೆ ಪರಿಹಾರ ಹುಡುಕುವ ಜವಾಬ್ದಾರಿ ಯುವಶಕ್ತಿಯ ಮೇಲಿದೆ’ ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಹೇಳಿದರು.

ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ಅವರು, ‘ದೇಶದ ಅಸ್ತಿತ್ವ ನಮ್ಮೆಲ್ಲರ ಹೆಗಲ ಮೇಲಿದೆ. ಕೇವಲ ನಾನು, ನನ್ನ ಕುಟುಂಬ ಎಂದು ಯೋಚಿಸದೇ ಸಮಾಜ, ದೇಶದ ಏಳ್ಗೆಗಾಗಿ ಪ್ರತಿಯೊಬ್ಬರೂ ತಮ್ಮ ಕತ್ವವ್ಯವನ್ನು ನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

‘ಪರಿಸರ ಮಾಲಿನ್ಯ ಸಮಸ್ಯೆಗೆ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ದೇಶದ ಅಖಂಡತೆ, ಧರ್ಮ–ಸಂಸ್ಕೃತಿ ಸದೃಢವಾಗಿರಬೇಕು’ ಎಂದ ಅವರು, ‘21ನೇ ಶತಮಾನ ಭಾರತದ್ದಾಗಿದ್ದು, ವಿಶ್ವಗುರುವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT