ಮೆಳ್ಳಕಟ್ಟೆ ರೈತನಿಗೆ ನಟ ಉಪೇಂದ್ರ ಸಹಾಯಹಸ್ತ

ದಾವಣಗೆರೆ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿ ತಾಲ್ಲೂಕಿನ ಮೆಳ್ಳಕಟ್ಟೆ ಗ್ರಾಮದ ರೈತನಿಗೆ ಚಿತ್ರ ನಟ ಉಪೇಂದ್ರ ನೆರವಾಗಿದ್ದಾರೆ.
ರೈತ ಜಯವರ್ಧನ ಹಾಗೂ ಸಹೋದರ ದೇವರಾಜ್ ಅವರು ಬೆಳೆದಿದ್ದ 25 ಕೆ.ಜಿ.ಯ 10 ಬಾಕ್ಸ್ ಪೇರಲ ಹಣ್ಣನ್ನು ಖರೀದಿಸಿ ಜನರಿಗೆ ಉಚಿತವಾಗಿ ಹಂಚಿದ್ದಾರೆ.
ಜಯವರ್ಧನ ಅವರು 3 ಎಕರೆ ಜಮೀನಿನಲ್ಲಿ ಪೇರಲವನ್ನು ಬೆಳೆದಿದ್ದಾರೆ. ಕಟಾವು ಮಾಡುವ ವೇಳೆಗೆ ಲಾಕ್‌ಡೌನ್ ಶುರುವಾಯಿತು.
ಹೊರಗಡೆ ಮಾರಾಟ ಮಾಡಲು ಹೋದರೆ ದಲ್ಲಾಳಿಗಳು ಒಂದು ಬಾಕ್ಸ್‌ಗೆ ₹ 100ಕ್ಕೆ ಕೇಳುತ್ತಿದ್ದರು. ಇದು ಬೆಳೆದಿರುವ ಖರ್ಚಿಗೂ ಸಾಕಾಗುತ್ತಿರಲಿಲ್ಲ.
ರೈತರ ಸಂಕಷ್ಟಕ್ಕೆ ನೆರವಾಗುವ ನಿಟ್ಟಿನಲ್ಲಿ ನಟ ಉಪೇಂದ್ರ ಅವರು ಫೇಸ್‌ಬುಕ್ ಪೇಜ್ ತೆರೆದಿದ್ದು, ಜಯವರ್ಧನ ಅವರು ತಮ್ಮ ಮೊಬೈಲ್ ನಂಬರ್ ಹಾಕಿ ಅಳಲು ತೋಡಿಕೊಂಡಿದ್ದರು. ಇದನ್ನು ಗಮನಿಸಿದ ಉಪೇಂದ್ರ ಅವರು ರೈತನನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡರು.
ದಾವಣಗೆರೆಯ ಅಭಿಮಾನಿಯೊಬ್ಬರನ್ನು ಕಳುಹಿಸಿ ಒಂದು ಬಾಕ್ಸ್‌ಗೆ ₹ 300ರಂತೆ 10 ಬಾಕ್ಸ್ ಖರೀದಿಸಿ ₹ 3 ಸಾವಿರ ನೀಡಿದರು.
‘ಲಾಕ್‌ಡೌನ್ ಇಲ್ಲದಿದ್ದರೆ ಒಂದು ಬಾಕ್ಸ್‌ಗೆ ₹ 700ರಿಂದ ₹ 800 ದರ ಸಿಗುತ್ತಿತ್ತು. ₹4 ಲಕ್ಷದಿಂದ ₹ 5 ಲಕ್ಷ ವಹಿವಾಟು ನಡೆದು ₹ 2.50 ಲಕ್ಷ ಲಾಭ ಸಿಗುತ್ತಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ಜಮೀನಿನಲ್ಲಿ ಪೇರಲ ಕೊಳೆತುಹೋಗಿದೆ. ₹2 ಲಕ್ಷ ಖರ್ಚು ಮಾಡಿದ್ದು, ಈ ಹಣವೂ ಸಿಗುತ್ತಿಲ್ಲ‘ ಎಂದು ರೈತ ದೇವರಾಜ್ ಅಳಲು ತೋಡಿಕೊಂಡರು.
‘ಈಗ ಮತ್ತೊಂದು ಬಾರಿಗೆ ಲಾಕ್‌ಡೌನ್ ಆಗಿದ್ದು, ಇನ್ನೂ 200 ಬಾಕ್ಸ್ ಪೇರಲ ಹಣ್ಣು ಹೊಲದಲ್ಲೇ ಕೊಳೆಯುತ್ತಿದೆ. ನಟ ಉಪೇಂದ್ರ ಅವರು ಒಳ್ಳೆಯ ಉದ್ದೇಶದಿಂದ ಫೇಸ್‌ಬುಕ್ ಪೇಜ್ ತೆರೆದಿದ್ದಾರೆ. ಇದೇ ರೀತಿ ಜನರು ಸಹಾಯಕ್ಕೆ ಮುಂದೆ ಬರಬೇಕು’ ಎಂದು ದೇವರಾಜ್ ಮನವಿ ಮಾಡುತ್ತಾರೆ.
ದೇವರಾಜ್ ಅವರ ಸಂಪರ್ಕ ಸಂಖ್ಯೆ: 8073176365
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.