ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಕೊರತೆ ನೆಪ; ಬರಪೀಡಿತ ಜಗಳೂರಿನಲ್ಲಿ ನೆಡುತೋಪು ಕಾರ್ಯ ಸ್ಥಗಿತ

Last Updated 15 ಜುಲೈ 2021, 4:17 IST
ಅಕ್ಷರ ಗಾತ್ರ

ಜಗಳೂರು: ಜಿಲ್ಲೆಯಲ್ಲಿಯೇ ಅತ್ಯಂತ ಕಡಿಮೆ ಮಳೆ ಬೀಳುವ ಹಾಗೂ ಬರಪೀಡಿತ ಪ್ರದೇಶ ಎಂದೇ ಹೆಸರಾಗಿರುವ ಜಗಳೂರು ತಾಲ್ಲೂಕಿನಲ್ಲಿ ವಿವಿಧ ಯೋಜನೆಗಳಿಗೆ ಅನುದಾನದ ಕೊರತೆಯಿಂದ ಅರಣ್ಯೀಕರಣ ಕಾರ್ಯಕ್ರಮಕ್ಕೆ ಹಿನ್ನಡೆಯಾಗಿದೆ.

ಕೊರೊನಾದಿಂದ ಎರಡು ವರ್ಷಗಳಿಂದ ಉದ್ಯೋಗಖಾತ್ರಿ ಹಾಗೂ ಇಲಾಖಾ ಯೋಜನೆಗಳ ಅನುದಾನ ಸಮರ್ಪಕವಾಗಿ ಬಿಡುಗಡೆಯಾಗಿಲ್ಲ.ತಾಲ್ಲೂಕಿನ ಗೋಮಾಳ, ಶಾಲಾ–ಕಾಲೇಜು ಹಾಗೂ ಸಮುದಾಯ ಸ್ಥಳಗಳಲ್ಲಿ ನೆಡುತೋಪು ಬೆಳೆಸುವ ಹಾಗೂ ರೈತರಿಗೆ ಸಸಿಗಳನ್ನು ವಿತರಿಸುವ ಮಹತ್ವದ ಯೋಜನೆ ಎರಡು ವರ್ಷಗಳಿಂದ ಬಹುತೇಕ ಸ್ಥಗಿತವಾಗಿದೆ.

ಸಾಮಾಜಿಕ ಅರಣ್ಯ ಇಲಾಖೆಯಿಂದ ಪ್ರತಿ ವರ್ಷ ತಾಲ್ಲೂಕಿನ ಸಂಗೇನಹಳ್ಳಿ ಸಸ್ಯಪಾಲನಾ ಕ್ಷೇತ್ರದಲ್ಲಿ 2.5 ಲಕ್ಷದಿಂದ 3 ಲಕ್ಷದವರೆಗೆ ವಿವಿಧ ಜಾತಿಯ ಸಸಿಗಳನ್ನು ಬೆಳೆಸಲಾಗುತ್ತಿತ್ತು. ವಿವಿಧ ಗಾತ್ರಗಳಲ್ಲಿ ಬೆಳೆಸಿದ ಸಸಿಗಳನ್ನು ಗೋಮಾಳ, ಶಾಲಾ ಕಾಲೇಜು, ರಸ್ತೆಬದಿ ಹಾಗೂ ಸಮುದಾಯದ ಸ್ಥಳಗಳಲ್ಲಿ ನೆಡುತೋಪು ಬೆಳೆಸುವುದು ಮತ್ತು ರೈತರಿಗೆ ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಿಸಲಾಗುತ್ತಿತ್ತು.

ಅನುದಾನದ ಕೊರತೆಯಿಂದಾಗಿ ಎರಡು ವರ್ಷಗಳಿಂದ ಸಸಿಗಳನ್ನು ಬೆಳೆಸುತ್ತಿಲ್ಲ. ಸಂಗೇನಹಳ್ಳಿ ಕೆರೆ ದಡದಲ್ಲಿ ಲಕ್ಷಾಂತರ ಸಸಿಗಳಿಂದ ತುಂಬಿರುತ್ತಿದ್ದ ಸಸ್ಯಪಾಲನಾ ಕ್ಷೇತ್ರದ ಸುಂದರ ನೋಟ ಈಗ ಇಲ್ಲವಾಗಿದೆ. ಸಸಿಗಳಿಲ್ಲದೆ ಪಾರ್ಥೇನಿಯಂ ಹಾಗೂ ಇತರೆ ಕಳೆ ಸಸ್ಯಗಳಿಂದ ಸಸ್ಯಕ್ಷೇತ್ರ ಭಣಗುಡುತ್ತಿದೆ.

ನರೇಗಾ ಹಾಗೂ ಇಲಾಖೆಯ ಯೋಜನೆಗಳಾದ ಆರ್.ಎಸ್.ಪಿ.ಪಿ. (ಸಾರ್ವಜನಿಕರಿಗೆ ಸಸಿ ವಿತರಣಾ ಯೋಜನೆ), ಸಾಮಾಜಿಕ ಅರಣ್ಯ ಯೋಜನೆ (ಎಸ್.ಎಫ್.ಪಿ) ಹಸಿರೀಕರಣ ಮತ್ತು ವನಮಹೋತ್ಸವ ಯೋಜನೆಗಳಿಗೆ ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆಯಾಗದ ಕಾರಣ ಈ ವರ್ಷ ಕೇವಲ 2 ಸಾವಿರ ಸಸಿಗಳನ್ನು ಮಾತ್ರ ಬೆಳೆಸಲಾಗಿದೆ.

‘3 ವರ್ಷಗಳಿಂದ ನರೇಗಾ ಯೋಜನೆಯಡಿ ಅನುದಾನ ಸಮರ್ಪಕವಾಗಿ ಬಂದಿಲ್ಲ. ಈ ಹಿಂದೆ 2 .5 ಲಕ್ಷದವರೆಗೆ ಸಸಿಗಳನ್ನು ಬೆಳೆಸಿ ರೈತರಿಗೆ ಹಾಗೂ ನೆಡುತೋಪಿನಲ್ಲಿ ಬೆಳೆಸಲು ಬಳಸಲಾಗುತ್ತಿತ್ತು. ಅನುದಾನ ಕೊರತೆಯಿಂದಾಗಿ ಸಸಿಗಳನ್ನು ಬೆಳೆಸಲು ಸಾಧ್ಯವಾಗಿಲ್ಲ’ ಎಂದು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ. ರಾಜಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅನುದಾನ ಬಿಡುಗಡೆಯಾಗಿಲ್ಲ ಎಂಬ ನೆಪವೊಡ್ಡಿ ಸಸಿಗಳನ್ನು ಬೆಳೆಸದಿರುವುದು ಸರಿಯಲ್ಲ. ಅತ್ಯಂತ ಕಡಿಮೆ ಮಳೆ ಬೀಳುವ ಹಾಗೂ ಶಾಶ್ವತ ಬರಪೀಡಿತ ತಾಲ್ಲೂಕಿನಲ್ಲಿ ಅರಣ್ಯೀಕರಣ ಕಾರ್ಯಕ್ಕೆ ಮೊದಲ ಆದ್ಯತೆ ನೀಡಬೇಕಾಗಿತ್ತು. ಸತತ ಎರಡು ವರ್ಷ ಸಸಿಗಳನ್ನು ಬೆಳೆಸದ ಕಾರಣ ನೆಡುತೋಪು ಕಾರ್ಯಕ್ಕೆ ಹಿನ್ನಡೆಯಾಗಲಿದ್ದು, ತಾಲ್ಲೂಕಿನಲ್ಲಿ ಮತ್ತಷ್ಟು ಬರ ಹೆಚ್ಚಲು ಕಾರಣವಾಗುತ್ತದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ನರೇಗಾ ಯೋಜನೆಯಡಿ ಬಾಕಿ ಅನುದಾನ ಬಿಡುಗಡೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಹರಿಸಿ ‌ ಕ್ರಮ ಕೈಗೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮರೇನಹಳ್ಳಿ ಬಸವರಾಜ್ ಒತ್ತಾಯಿಸಿದ್ದಾರೆ.

ತಾಲ್ಲೂಕಿನಲ್ಲಿ ಬೇಡಿಕೆ ಇದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಸಿರೀಕರಣ ಯೋಜನೆಗೆ ಹಿನ್ನಡೆಯಾಗಿದೆ. ಕೇವಲ ಒಂದು ಯೋಜನೆಯಡಿ ಅನುದಾನ ವಿಳಂಬದ ಕಾರಣಕ್ಕೆ ಸಸಿ ಬೆಳೆಸುವ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸುವುದು ಅಕ್ಷಮ್ಯ. ಈ ಬಗ್ಗೆ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅನುದಾನ ಕೊರತೆಯ ನಡುವೆಯೂ ಪ್ರಾದೇಶಿಕ ಅರಣ್ಯ ಇಲಾಖೆಯಿಂದ ವಿವಿಧ ಯೋಜನೆಗಳ ಅಡಿಯಲ್ಲಿ ತಾಲ್ಲೂಕಿನಲ್ಲಿ ಪ್ರಸ್ತುತ ವರ್ಷ 75 ಸಾವಿರಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಿದ್ದು, ಈಗಾಗಲೇ ಸಾರ್ವಜನಿಕರಿಗೆ ವಿತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT