ಮಂಗಳವಾರ, ಮಾರ್ಚ್ 28, 2023
33 °C
ಹೆಣ್ಣುಮಕ್ಕಳ ಕೈಸೇರದ ಸಹಾಯಧನ, ಲ್ಯಾಪ್‌ಟಾಪ್‌

ಒಳನೋಟ: ಹಿತೈಷಿ ಇಲ್ಲ, ಸಂಬಂಧಿಕರೇ ಎಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾಗಿರುವ ಬಹುತೇಕ ಮಕ್ಕಳಿಗೆ ಸರ್ಕಾರದಿಂದ ಸಹಾಯಧನ ಬರುತ್ತಿದೆ. ಆದರೆ, ಎಸ್ಸೆಸ್ಸೆಲ್ಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸುವ ಮತ್ತು 21 ವರ್ಷ ತುಂಬಿದ ಹೆಣ್ಣುಮಕ್ಕಳಿಗೆ ಬದುಕು ಕಟ್ಟಿಕೊಳ್ಳಲು ₹1 ಲಕ್ಷ ಆರ್ಥಿಕ ನೆರವು ನೀಡುವ ಸರ್ಕಾರದ ವಾಗ್ದಾನ ಮಾತ್ರ ಇನ್ನೂ ಈಡೇರಿಲ್ಲ.

ಯಾರ ಆಶ್ರಯವೂ ಇಲ್ಲದ ಅನಾಥ ಮಕ್ಕಳನ್ನು ನೋಡಿಕೊಳ್ಳಲು ಮಾರ್ಗದರ್ಶಿ ಅಥವಾ ಹಿತೈಷಿಗಳ ನೇಮಕ ಮಾಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ಅದಕ್ಕೆ ಯಾರಿಂದಲೂ ಬೇಡಿಕೆ ಬಂದಿಲ್ಲ. ಅಪ್ಪ, ಅಮ್ಮನನ್ನು ಕಳೆದುಕೊಂಡ ಬಹುತೇಕ ಮಕ್ಕಳು ಹತ್ತಿರದ ಸಂಬಂಧಿಕರ ಆಶ್ರಯದಲ್ಲಿಯೇ ಬೆಳೆಯುತ್ತಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ನಾಲ್ವರು ಮಕ್ಕಳ ಪೈಕಿ ಒಬ್ಬರಿಗೆ ಮಾತ್ರ ಲ್ಯಾಪ್‌ಟಾಪ್‌ ಬಂದಿದೆ. ನಾಲ್ವರಿಗೂ ಸಹಾಯಧನ ಬರುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಐವರು ಮಕ್ಕಳಿಗೆ ಸಹಾಯಧನ ಸಿಗುತ್ತಿದೆ. ಇಬ್ಬರಿಗೆ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಣ ಪಡೆಯಲು ವ್ಯವಸ್ಥೆ ಮಾಡಲಾಗಿದೆ.

ಕೊಡಗು, ಮೈಸೂರಿನಲ್ಲಿ 10ನೇ ತರಗತಿ ಪೂರೈಸಿದ ಮೂವರಿಗೆ ಲ್ಯಾಪ್‌ಟಾಪ್ ನೀಡಲಾಗಿದೆ. ಚಾಮರಾಜನಗರದಲ್ಲಿ ಅನಾಥಳಾದ ಐದು ವರ್ಷದ ಹೆಣ್ಣು ಮಗು ಚಿಕ್ಕಪ್ಪ–ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆಯುತ್ತಿದೆ.

‘ಸರ್ಕಾರಿ ವಸತಿಶಾಲೆಗಳಿಗೆ ಸೇರುವುದಕ್ಕೆ ಅವಕಾಶ ಇದ್ದರೂ ಮಕ್ಕಳು ಆಸಕ್ತಿ ತೋರುತ್ತಿಲ್ಲ. ಏಕ ಪೋಷಕರಿರುವ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಕರೇ ನೆರವಾಗುತ್ತಿದ್ದಾರೆ’ ಎಂದು ಮೈಸೂರಿನ ಡಿಡಿಪಿಐ ರಾಮಚಂದ್ರರಾಜೇ ಅರಸ್‌ ಮಾಹಿತಿ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಬ್ಬರು ಲ್ಯಾಪ್‌ಟಾಪ್‌ ಪಡೆಯಲು ಅರ್ಹರಾಗಿದ್ದಾರೆ. ಲ್ಯಾಪ್‌ಟಾಪ್‌ ಬಂದಿದ್ದರೂ ಇನ್ನೂ ಫಲಾನುಭವಿಗಳ ಕೈ ಸೇರಿಲ್ಲ. ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆಯಲು ನೆರವು ನೀಡಬೇಕು ಎಂದು ಮನವಿ ಮಾಡಿರುವ ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿನಿಯೊಬ್ಬರಿಗೆ ಬೆಂಗಳೂರಿನಲ್ಲಿ ಕಾಲೇಜಿಗೆ ಪ್ರವೇಶ ಒದಗಿಸಿ, ಹಾಸ್ಟೆಲ್‌ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಐವರು ಮಕ್ಕಳು ಅನಾಥರಾಗಿದ್ದು, ವಸತಿಶಾಲೆಗೆ ಸೇರಿಸಲಾಗಿದೆ. 10ನೇ ತರಗತಿ ಪೂರೈಸಿದ ಒಬ್ಬ ವಿದ್ಯಾರ್ಥಿಗೆ ಲ್ಯಾಪ್‌ಟಾಪ್‌ ವಿತರಿಸಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ಒಬ್ಬ ವಿದ್ಯಾರ್ಥಿನಿಗೆ ಲ್ಯಾಪ್‌ಟಾಪ್‌ ನೀಡಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್‌ನಿಂದ 17 ಮಕ್ಕಳು ಅನಾಥರಾಗಿದ್ದು, ಅವರನ್ನು ವಸತಿಶಾಲೆಗೆ ಸೇರಿಸುವ ಕೆಲಸ ಆಗಿಲ್ಲ. ಲ್ಯಾಪ್‌ಟಾಪ್‌ ವಿತರಣೆಯೂ ಆಗಿಲ್ಲ. ಸಮಾಧಾನಕರ ಅಂಶವೆಂದರೆ ಗದಗ ಜಿಲ್ಲೆಯಲ್ಲಿ ಅನಾಥರಾಗಿರುವ ಎಂಟು ಮಕ್ಕಳಿಗೆ ವಸತಿಶಾಲೆಗಳಲ್ಲಿ ಪ್ರವೇಶ ಕಲ್ಪಿಸಲಾಗಿದೆ. ಆದರೆ, ಎಸ್ಸೆಸ್ಸೆಲ್ಸಿ ಪೂರೈಸಿದ ಮಕ್ಕಳ ಕೈಗೆ ಲ್ಯಾಪ್‌ಟಾಪ್ ಸೇರಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು