ಭಾನುವಾರ, ಮಾರ್ಚ್ 7, 2021
18 °C
ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ಪಟೇಲ್ ಸಲಹೆ

ನೇಕಾರರಿಗೆ ಸಾಲದ ಜೊತೆಗೆ ಮಾರುಕಟ್ಟೆ ಕಲ್ಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನೇಕಾರರಿಗೆ ಸಹಾಯಧನ ನೀಡುವುದೇ ಮುಖ್ಯವಲ್ಲ. ಜೊತೆಗೆ ಉತ್ತಮ ಮಾರುಕಟ್ಟೆ ಒದಗಿಸಲು ಕಾರ್ಯಯೋಜನೆ ರೂಪಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ಪಟೇಲ್ ಸಲಹೆ ನೀಡಿದರು.

ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯಿತಿ, ದಾವಣಗೆರೆ ಜಿಲ್ಲೆಯ ನೇಕಾರರ ಸಹಕಾರ ಸಂಘಗಳ ಸಹಯೋಗದಲ್ಲಿ ಇಲ್ಲಿನ ರೋಟರಿ ಬಾಲಭವನದಲ್ಲಿ ಬುಧವಾರ ನಡೆದ 5ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆಯ ಯೋಜನೆಗಳ ಕುರಿತು ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಬಹಳಷ್ಟು ಜನ ಸಾಲ ಪಡೆದು ಕೈಗಾರಿಕೆ ಸ್ಥಾಪಿಸುತ್ತಾರೆ. ಆದರೆ ಅದಕ್ಕೆ ಮಾರುಕಟ್ಟೆ ಸಿಗದೇ ಪೇಚಾಡುವುದು ಮಾಮೂಲಿಯಾಗಿದೆ. ಸರ್ಕಾರದಲ್ಲಿ ಅಭಿವೃದ್ಧಿ, ಮಾಹಿತಿ ಇಲಾಖೆಗಳು ಇವೆ. ಆದರೆ ಮಾರುಕಟ್ಟೆಗೆ ಪ್ರತ್ಯೇಕ ಇಲಾಖೆ ಇಲ್ಲ. ತಿನ್ನುವ ಆಹಾರ, ಬಟ್ಟೆ ತೊಡುವ ಪದ್ಧತಿಗಳು ಬದಲಾಗಿವೆ. ಜೀವನ ಶೈಲಿ ಬದಲಾದಂತೆ, ಉದ್ಯಮವನ್ನು ತಂತ್ರಜ್ಞಾನಕ್ಕೆ ಒಳಪಡಿಸಬೇಕಿದೆ’ ಎಂದು ಸಲಹೆ ನೀಡಿದರು.

‘ಪ್ರಸ್ತುತ ನೇಕಾರರದ್ದು ಸವಾಲಿನ ಬದುಕಾಗಿದ್ದು, ಹೊಸ ಕೃಷಿ, ಟೆಕ್ಸ್‌ಟೈಲ್‌ ಆರಂಭಿಸಿದವರು ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಆದರೆ ಪರಂಪರೆಯಿಂದ ಬಂದಿರುವ ನೇಕಾರರು ನಷ್ಟದಲ್ಲಿದ್ದಾರೆ. ಹೊಸ ತಂತ್ರಜ್ಞಾನ, ಸಹಾಯ ಸೌಲಭ್ಯವನ್ನು ಪಡೆದು ಅಭಿವೃದ್ಧಿಪಡಿಸಬೇಕು. ದೇಶೀಯ ವಸ್ತುಗಳನ್ನು ಪ್ರೋತ್ಸಾಹಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್ ಮಾತನಾಡಿ, ‘ಯುವಜನತೆ ಓದಿಗೆ ತಕ್ಕಂತೆ ಸರ್ಕಾರಿ ಉದ್ಯೋಗವನ್ನೇ ಬಯುಸುವ ಬದಲು, ಸ್ವ ಉದ್ಯೋಗಕ್ಕೆ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು. ತಮ್ಮಲ್ಲಿರುವ ಜ್ಞಾನ, ಕೌಶಲವನ್ನು ಬಳಸಿಕೊಂಡು ಸ್ವಂತ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವಂತ ಮನಸ್ಥಿತಿ ಯುವಜನತೆಯಲ್ಲಿ ಮೂಡಬೇಕು’ ಎಂದು ಸಲಹೆ ನೀಡಿದರು.

‘ಜವಳಿ ಉದ್ಯಮ ಇಂದು ಫ್ಯಾಷನ್ ಜಗತ್ತಿಗೆ ಕಾಲಿಟ್ಟಿದೆ. ಯುವಕರು ನಿಮ್ಮ ಕಲ್ಪನೆಗಳನ್ನು ಸಾಕಾರಗೊಳಿಸಿದರೆ ವಿದೇಶದಲ್ಲೂ ನಮ್ಮ ಕೈಮಗ್ಗಕ್ಕೆ ಮಾರುಕಟ್ಟೆ ಸೃಷ್ಟಿಸಬಹುದು. ಸಿಂಧೂ ನಾಗರಿಕತೆಯ ಕಾಲದಿಂದಲೇ ನಮ್ಮ ದೇಶದಿಂದ ಬಟ್ಟೆಗಳು ರಫ್ತಾಗುತ್ತಿದ್ದವು. ನೈಪುಣ್ಯ ನಮ್ಮ ಜೀನ್ಸ್‌ನಲ್ಲೇ ಇದೆ. ಆ ನೈಪುಣ್ಯವನ್ನು ಕ್ರಿಯಾಶೀಲತೆಗೆ ತೊಡಗಿಸಿಕೊಂಡರೆ ವಿಶ್ವವೇ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಬಹುದು’ ಎಂದು ಹೇಳಿದರು.

‘ಜಮೀನುಗಳನ್ನು ಗುತ್ತಿಗೆಗೆ ಪಡೆದು ವಿದ್ಯಾವಂತ ಯುವಕ ಯುವತಿಯರನ್ನು ಬಳಸಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆ ಸ್ಥಾಪಿಸಬೇಕು. ದಾವಣಗೆರೆ ಜವಳಿ ಉದ್ಯಮದಲ್ಲಿ ಒಂದು ಕಾಲದಲ್ಲಿ ಕರ್ನಾಟಕ ತಿರುಗಿ ನೋಡುವಂತೆ ಮಾಡಿತ್ತು. ಆದರೆ ಕೆಲವುಗಳಿಗೆ ಬೀಗ ಬಿದ್ದಿದೆ. ರಾಜಕೀಯ ಇಚ್ಛಾಶಕ್ತಿಯಿಂದ ಮತ್ತೆ ಆರಂಭ ಮಾಡಬೇಕು. ಹರಿಹರದಲ್ಲಿ ‘ತುಂಗಭದ್ರಾ’ ಬಟ್ಟೆ ಗಿರಣಿಯನ್ನು ಪುನರಾರಂಭಿಸಬೇಕು. ಹೊಸದಾಗಿ ಕೈಗಾರಿಕೆ ಸ್ಥಾಪಿಸುವುದಕ್ಕಿಂತ ಇರುವ ಕೈಗಾರಿಕೆಗಳನ್ನು ಪುನರುಜ್ಜೀವನಗೊಳಿಸಬೇಕು’ ಎಂದು ಸಲಹೆ ನೀಡಿದರು.

ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ ವೈ.ವೃಷಬೇಂದ್ರಪ್ಪ ಮಾತನಾಡಿ, ‘ನೇಕಾರರು ವಸ್ತುಗಳ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ನೂಲನ್ನು ಬಳಸುವ ಮೊದಲು ಅದನ್ನು ಪರೀಕ್ಷಿಸಬೇಕು’ ಎಂದು ಸಲಹೆ ನೀಡಿದರು.

ಹರಿಹರ ಚರಕಾ ಖಾದಿ ಗ್ರಾಮೋದ್ಯೋಗ ಸಹಕಾರ ಸಂಘದ ಕೆ.ಬಸಪ್ಪ ಹನಗವಾಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಟಿ.ವಿ.ರಾಜು ಮಾತನಾಡಿದರು. ಮಾಜಿ ಸದಸ್ಯೆ ಲತಾ ತೇಜಸ್ವಿ ಪಟೇಲ್, ಕೆನರಾ ಬ್ಯಾಂಕ್‌ ಜಿಲ್ಲಾ ಮಾರ್ಗದರ್ಶಿ ವ್ಯವಸ್ಥಾಪಕ ಸುಶೃತ ಡಿ ಶಾಸ್ತ್ರಿ, ಕೆಎಸ್‌ಎಫ್‌ಸಿ ಸಹಾಯಕ ಪ್ರಧಾನ ವ್ಯವಸ್ಥಾಪಕ ವೈ.ಕೆ. ಬಸವರಾಜ್, ಸತ್ಯನಾರಾಯಣ ಭಟ್‌ ‍ಪಾಲ್ಗೊಂಡಿದ್ದರು.

ಅಂಕಿ ಅಂಶ

393 ಜಿಲ್ಲೆಯಲ್ಲಿರುವ ನೇಕಾರರ ಸಂಖ್ಯೆ

59 ಎಕೆರೆ ಪ್ರದೇಶದಲ್ಲಿ ಜವಳಿ ಪಾರ್ಕ್ ಸ್ಥಾ‍ಪನೆ

92 ವಿದ್ಯುತ್ ಮಗ್ಗಗಳು

2,520 ಜವಳಿ ಕ್ಷೇತ್ರದಲ್ಲಿ ಉದ್ಯೋಗಿಗಳು

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.