ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಗುಬ್ಬಿ’ ಮೇಲೆ ಅಕ್ರಂ, ವೀರೇಶ್‌ ‘ಬ್ರಹ್ಮಾಸ್ತ್ರ’

ಕ್ರಿಕೆಟ್‌: ಅಂಡರ್‌ 16 ಕ್ಲಬ್‌ ಲೀಗ್‌, ವೀನಸ್‌ ಚಾಂಪಿಯನ್‌
Published 1 ಜೂನ್ 2024, 5:49 IST
Last Updated 1 ಜೂನ್ 2024, 5:49 IST
ಅಕ್ಷರ ಗಾತ್ರ

ದಾವಣಗೆರೆ: ಅಕ್ರಂ ಹಾಗೂ ವೀರೇಶ್‌ ಅವರ ಉತ್ತಮ ಬೌಲಿಂಗ್‌ ನೆರವಿನಿಂದ ತುಮಕೂರು ಜಿಲ್ಲೆ ಗುಬ್ಬಿಯ ಭರತ್‌ ಕ್ರಿಕೆಟ್‌ ಕ್ಲಬ್‌ ವಿರುದ್ಧ ಗೆಲುವು ಸಾಧಿಸಿದ ದಾವಣಗೆರೆಯ ವೀನಸ್‌ ಕ್ರಿಕೆಟ್‌ ಕ್ಲಬ್‌ ತಂಡ, ಕೆಎಸ್‌ಸಿಎ, 16 ವರ್ಷದೊಳಗಿನ ಕ್ಲಬ್‌ ಲೀಗ್‌ನ ಕೆಎಸ್‌ಸಿಎ ತುಮಕೂರು ವಲಯದ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಇಲ್ಲಿನ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲ ಬ್ಯಾಟಿಂಗ್‌ ಆಯ್ದುಕೊಂಡ ಗುಬ್ಬಿ ತಂಡ, ವೀನಸ್‌ ಕ್ರಿಕೆಟ್‌ ಕ್ಲಬ್‌ನ ಬಲಗೈ ಮಧ್ಯಮ ವೇಗದ ಬೌಲರ್‌ ಅಕ್ರಂ (24ಕ್ಕೆ 5) ಹಾಗೂ ಎಡಗೈ ಸ್ಪಿನ್ನರ್‌ ವೀರೇಶ್‌ (7ಕ್ಕೆ 4) ಅವರ ಕರಾರುವಾಕ್‌ ಎಸೆತಗಳಿಗೆ ತಲೆಬಾಗಿತು.

23.3 ಓವರ್‌ಗಳಲ್ಲಿ ಕೇವಲ 45 ರನ್‌ಗಳಿಗೆ ಎಲ್ಲ ವಿಕೆಟ್‌ ಕಳೆದುಕೊಂಡಿತು. ದಾವಣಗೆರೆ ತಂಡದ ನಾಯಕ, ಲೆಗ್‌ ಸ್ಪಿನ್ನರ್‌ ಎ.ಎ. ರೋಹಿತ್‌ 1 ವಿಕೆಟ್‌ ಗಳಿಸಿದರು. ಗುಬ್ಬಿ ತಂಡದ ಪರ ಕೆ.ಧನುಷ್‌ (11) ಹಾಗೂ ಎಂ.ಜಿ. ಕಿಶೋರ್‌ (10) ಮಾತ್ರ ಎರಡಂಕಿ ಮೊತ್ತ ಗಳಿಸಿದರು.

ಇದಕ್ಕೆ ಉತ್ತರವಾಗಿ ವೀನಸ್‌ ತಂಡ ಕೇವಲ 8 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ತಂಡದ ಆರಂಭಿಕ ಬ್ಯಾಟರ್‌ ಕೆ.ಅಖಿಲ್‌ ಅಜೇಯ 24 ರನ್‌ ಗಳಿಸಿದರು.

ಸೆಮಿಯಲ್ಲೂ ಜೋಡಿಯ ಮೋಡಿ:

ಗುರುವಾರ ತುಮಕೂರಿನ ಆಕೇಷನ್ಸ್‌ ತಂಡದ ವಿರುದ್ಧ ನಡೆದಿದ್ದ ಸೆಮಿಫೈನಲ್‌ ಪಂದ್ಯದಲ್ಲೂ ಅಕ್ರಂ ಮತ್ತು ವೀರೇಶ್‌ ಜೋಡಿ ಉತ್ತಮ ಬೌಲಿಂಗ್‌ ಮಾಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿ ಕೇವಲ 126 ರನ್‌ಗಳಿಗೆ ಎಲ್ಲ ವಿಕೆಟ್‌ ಕಳೆದುಕೊಂಡು ಸೋಲಿನ ಭೀತಿಯಲ್ಲಿದ್ದ ದಾವಣಗೆರೆಯ ವೀನಸ್‌ ಕ್ರಿಕೆಟ್‌ ಕ್ಲಬ್‌ ತಂಡಕ್ಕೆ ವೀರೇಶ್‌ (11ಕ್ಕೆ 5) ಅವರ ಬೌಲಿಂಗ್‌ ವರದಾನವಾಗಿತ್ತು. ಅಕ್ರಂ ಆ ಪಂದ್ಯದಲ್ಲೂ 2 ವಿಕೆಟ್‌ ಗಳಿಸಿ ಗಮನ ಸೆಳೆದಿದ್ದರು. ತುಮಕೂರು ತಂಡವನ್ನು 91ಕ್ಕೆ ನಿಯಂತ್ರಿಸುವ ಮೂಲಕ ವೀನಸ್‌ ತಂಡ ಫೈನಲ್‌ಗೆ ಅರ್ಹತೆ ಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT