ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ| ಬೆಳೆಗೆ ಬೆಂಕಿ; ಇರಲಿ ಮುಂಜಾಗ್ರತೆ

ಒಂದೂವರೆ ತಿಂಗಳಲ್ಲಿ ಜಿಲ್ಲೆಯಲ್ಲಿ 35 ಕಡೆ ಹುಲ್ಲಿನ ಬಣವೆಗಳಿಗೆ ಬೆಂಕಿ
Last Updated 13 ಫೆಬ್ರುವರಿ 2023, 6:21 IST
ಅಕ್ಷರ ಗಾತ್ರ

ದಾವಣಗೆರೆ: ನ್ಯಾಮತಿ ತಾಲ್ಲೂಕಿನ ಮುಸ್ಸೇನಾಳ್ ಗ್ರಾಮದಲ್ಲಿ ಈಚೆಗೆ ಆಕಸ್ಮಿಕ ಬೆಂಕಿ ತಗುಲಿ ಹತ್ತಾರು ಎಕರೆಯಲ್ಲಿ ಕೊಯ್ಲಿಗೆ ಬಂದಿದ್ದ ಮೆಕ್ಕೆಜೋಳ ಭಸ್ಮವಾಯಿತು. ಶಿವಮೊಗ್ಗ ಜಿಲ್ಲೆ ಕೆಂಚವೀರಪ್ಪನ ಮಟ್ಟಿ (ಹರಮಘಟ್ಟ) ಅರಣ್ಯ ಪ್ರದೇಶದಿಂದ ಕಾಣಿಸಿಕೊಂಡ ಬೆಂಕಿ ದಾವಣಗೆರೆ ಜಿಲ್ಲೆ ಗಡಿ ಭಾಗದಲ್ಲಿರುವ ಈ ಗ್ರಾಮದ ಜಮೀನಿಗೆ ಆವರಿಸಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ತಣಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.

*

ದಾವಣಗೆರೆ ತಾಲ್ಲೂಕಿನ ಕುಕ್ಕವಾಡ ಗ್ರಾಮದ ಜಮೀನೊಂದರಲ್ಲಿ ಬೆಳೆದಿದ್ದ ಕಬ್ಬು ಬೆಳೆಗೆ ಈಚೆಗೆ ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದಾಗಿ ಬೆಂಕಿ ಬಿದ್ದಿತ್ತು. ಕ್ಷಣಮಾತ್ರದಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಜಮೀನನ್ನು ಆವರಿಸಿ ಕೊಯ್ಲಿಗೆ ಬಂದಿದ್ದ ಕಬ್ಬನ್ನು ಆಹುತಿ ಪಡೆದಿತ್ತು. ಆಳೆತ್ತರಕ್ಕೆ ಬೆಳೆದ ಕಬ್ಬಿನ ಸೂಲಂಗಿ ವಿದ್ಯುತ್ ಲೈನ್‍ಗೆ ತಾಕಿ ಬೆಂಕಿ ಹೊತ್ತಿಕೊಂಡಿತ್ತು.

*

ಬೇಸಿಗೆ ಆರಂಭವಾಗುತ್ತಿದ್ದಂತೆ ನಿತ್ಯ ಇಂತಹ ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಹುಲ್ಲಿನ ಬಣವೆಗೆ ಬೆಂಕಿ, ಮೆಕ್ಕೆಜೋಳದ ರಾಶಿಗೆ ಬೆಂಕಿ, ಅಡಿಕೆ ತೋಟಕ್ಕೆ ಬೆಂಕಿ... ಹೀಗೆ ಹಲವು ಅವಘಡಗಳು ವರದಿಯಾಗುತ್ತಲೇ ಇರುತ್ತವೆ. ಬಿಸಿಲಿನ ತಾಪ ಏರಿಕೆಯಾಗುತ್ತಿದ್ದಂತೆ ಅಗ್ನಿ ಅವಘಡಗಳ ಪ್ರಮಾಣವೂ ಹೆಚ್ಚಾಗುತ್ತದೆ. ಇದರಿಂದಾಗಿ ರೈತರು ಜತನದಿಂದ ಬೆಳೆದ ಬೆಳೆ ಕ್ಷಣಮಾತ್ರದಲ್ಲಿ ಬೆಂಕಿಗೆ ಆಹುತಿಯಾಗಿ ನಷ್ಟ ಅನುಭವಿಸುತ್ತಾರೆ.

ಬೇಸಿಗೆಯಲ್ಲಿ ಕಬ್ಬು, ಮೆಕ್ಕೆಜೋಳದ ರವದಿ, ಭತ್ತ, ಹುಲ್ಲಿನ ಬಣವೆ, ತೊಗರಿ ಬಣವೆ ಹಾಗೂ ಅಡಿಕೆ, ತೆಂಗು, ಮಾವಿನ ತೋಟಗಳಿಗೆ ಸಾಮಾನ್ಯವಾಗಿ ಬೆಂಕಿ ತಗಲುತ್ತದೆ. ಮಳೆಗಾಲದಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಬೆಳೆ ಕೆಳೆದುಕೊಂಡರೆ ಬೇಸಿಗೆಯಲ್ಲಿ ಬೆಂಕಿ ಅನಾಹುತದಿಂದ ಬೆಳೆ ನಷ್ಟ ಅನುಭವಿಸುತ್ತಾರೆ. ಈ ಅನಾಹುತದಿಂದ ಪಾರಾಗಲು ರೈತರೇ ಮುಂಜಾಗ್ರತೆ ವಹಿಸಬೇಕು ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ಪ್ರಸಕ್ತ ವರ್ಷದ ಆರಂಭದಿಂದ ಈವರೆಗೆ ಜಿಲ್ಲೆಯಲ್ಲಿ ಒಟ್ಟು 35 ಕಡೆ ಭತ್ತದ ಹುಲ್ಲಿನ ಬಣವೆಗಳಿಗೆ ಬೆಂಕಿ ಬಿದ್ದಿದೆ. ಮೆಕ್ಕೆಜೋಳದ ರವದಿ, ರಾಗಿ ಹುಲ್ಲಿನ ಬಣವೆ, ಅಡಿಕೆ, ತೆಂಗಿನ ತೋಟ, ತೊಗರಿ ಬಣವೆ, ಕಬ್ಬಿನ ಗದ್ದೆ ಸೇರಿ ಇತರ ಬೆಳೆಗಳಿಗೆ ಒಟ್ಟು 72 ಕಡೆ ಆಕಸ್ಮಿಕ ಬೆಂಕಿ ತಗುಲಿ ಬೆಳೆ, ಬಣವೆಗಳು ಬೆಂಕಿಗೆ ಆಹುತಿಯಾಗಿವೆ.

ಕಬ್ಬು ಬೆಳೆ ಹೆಚ್ಚು ಆಹುತಿ: ಕಬ್ಬು ಬೆಳೆಗೆ ಬೆಂಕಿ ತಗಲುವ ಪ್ರಮಾಣ ಹೆಚ್ಚು. ಕಬ್ಬಿನ ಸೂಲಂಗಿ ವಿದ್ಯುತ್‍ ಲೈನ್‍ಗೆ ತಗುಲಿ ಬೆಂಕಿ ಅವಘಡಗಳು ಉಂಟಾಗುತ್ತವೆ. ಸಾಮಾನ್ಯವಾಗಿ ವಿದ್ಯುತ್ ಲೈನ್‍ಗಳನ್ನು 20 ಅಡಿ ಎತ್ತರದಲ್ಲಿ ಹಾಕಲಾಗಿರುತ್ತದೆ. ಆದರೆ, ಕಬ್ಬಿನ ಸೂಲಂಗಿ 22 ಅಡಿಗೂ ಹೆಚ್ಚು ಎತ್ತರಕ್ಕೆ ಬೆಳೆಯುತ್ತದೆ. ಅವು ವಿದ್ಯುತ್‍ ಲೈನ್‍ಗೆ ತಗುಲಿ ಶಾರ್ಟ್ ಸರ್ಕಿಟ್ ಉಂಟಾಗುತ್ತದೆ. ಗಾಳಿಯಲ್ಲಿ ಅಲುಗಾಡಿ ಲೈನ್‍ಗೆ ತಾಕಿದರೆ ಸಾಕು ಬೆಂಕಿ ಕಾಣಿಸಿಕೊಳ್ಳುತ್ತದೆ.

ದಾವಣಗೆರೆ ತಾಲ್ಲೂಕಿನ ಕುಕ್ಕವಾಡ ಸೇರಿ ಸುತ್ತಮುತ್ತಲ ಹಳ್ಳಿಗಳಲ್ಲಿ ಹೆಚ್ಚಾಗಿ ಕಬ್ಬು ಬೆಳೆಯಲಾಗುತ್ತದೆ. ಎರಡು ತಿಂಗಳಲ್ಲಿ 9 ಕಡೆ ಕಬ್ಬಿನ ಬೆಳೆಗೆ ಬೆಂಕಿ ಹೊತ್ತಿಕೊಂಡಿದೆ. ಕುಕ್ಕವಾಡ, ಗೋಣಿವಾಡ, ಕೊಳೇನಹಳ್ಳಿ, ಹೊಸಕೋಳೇನಹಳ್ಳಿ, 7ನೇ ಮೈಲಿ, ಮುದಹದಡಿ ಗ್ರಾಮಗಳಲ್ಲಿ ಕಬ್ಬು ಬೆಂಕಿಗೆ ಆಹುತಿಯಾಗಿದೆ.

ತೋಟದಲ್ಲಿ ಒಣಗಿದ ತರಗೆಲೆಗಳಿಗೆ ಬೆಂಕಿ ಹತ್ತಿದರೆ, ಹೈಟೆನ್ಶನ್ ವಿದ್ಯುತ್ ತಂತಿ ಮರಗಳಿಗೆ ತಗುಲಿದರೆ ಬೆಂಕಿ ಅವಘಡಗಳು ಸಂಭವಿಸುತ್ತವೆ. ಇನ್ನು ಜನರು ಸಂಚರಿಸುವ ಜಾಗದಲ್ಲಿ ವಿವಿಧ ಕಾರಣಗಳಿಂದ ಬೆಂಕಿ ಹೊತ್ತಿಕೊಳ್ಳುತ್ತದೆ. ಧೂಮಪಾನಿಗಳು ಉರಿಸಿ ಬಿಸಾಡಿದ ಬೆಂಕಿ ಕಡ್ಡಿ, ಬೀಡಿ, ಸಿಗರೇಟ್‍ನಿಂದಲೂ ಒಣ ಹುಲ್ಲಿಗೆ ಬೆಂಕಿ ಹೊತ್ತಿಕೊಳ್ಳುತ್ತದೆ. ಅದು ಜಮೀನಿಗೆ ವ್ಯಾಪಿಸುತ್ತದೆ. ಅಲ್ಲದೆ ಕೆಲವೆಡೆ ವಿದ್ಯುತ್ ಲೈನ್‍ಗಳು ಜಮೀನಿನ ಒಳಗೇ ಹಾದುಹೋಗಿರುತ್ತವೆ. ಆಗ ಅಗ್ನಿ ಅವಘಡಗಳ ಸಂಭವ ಹೆಚ್ಚಿರುತ್ತದೆ.

ಮುಂಜಾಗ್ರತೆ ಹೀಗೆ ವಹಿಸಿ

ರೈತರು ತಮ್ಮ ಬೆಳೆ ರಕ್ಷಣೆ ಮಾಡಿಕೊಳ್ಳಲು ವಿವಿಧ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಅಗತ್ಯ. ಬೆಂಕಿ ರೇಖೆ ಇದಕ್ಕೊಂದು ಪರಿಹಾರ. ರಸ್ತೆ ಬದಿಯಲ್ಲಿ ತೋಟವಿದ್ದರೆ ರೈತರು ಬೆಂಕಿ ರೇಖೆ ನಿರ್ಮಿಸಿಕೊಳ್ಳುವುದು ಒಳಿತು. ರಸ್ತೆ ಬದಿಯಲ್ಲಿರುವ ಒಣ ಹುಲ್ಲು, ಕಸಕಡ್ಡಿಗಳನ್ನು ಒಟ್ಟು ಸೇರಿಸಿ ಬೆಂಕಿ ಹಚ್ಚಿ ಸುಟ್ಟುಹಾಕುವ ಮೂಲಕ ಅಲ್ಲಿ ದಹ್ಯ ವಸ್ತುಗಳು ಇಲ್ಲದಂತೆ ಮಾಡಬೇಕು. ಬೆಂಕಿ ಹೊತ್ತಿಕೊಳ್ಳಲು ಉರುವಲುಗಳೇ ಇಲ್ಲದಿರುವಾಗ ಬೆಂಕಿ ಹೊತ್ತಿಕೊಳ್ಳುವ ಅಪಾಯವೇ ಇರುವುದಿಲ್ಲ. ಅರಣ್ಯಕ್ಕೆ ಬೀಳುವ ಬೆಂಕಿಯನ್ನು ತಡೆಗಟ್ಟಲು ಅರಣ್ಯ ಇಲಾಖೆ ಈ ಕ್ರಮವನ್ನು ಅನುಸರಿಸುತ್ತದೆ. ಇದೇ ತಂತ್ರವನ್ನು ರೈತರು ತಮ್ಮ ಜಮೀನಿನ ಬಳಿ ಅನುಸರಿಸಬಹುದು. ಗಿಡಗಳ ಸುತ್ತಲೂ ಬೆಳೆದು ಒಣಗಿಹೋದ ಉಲ್ಲು, ಕಳೆಗಿಡಗಳನ್ನು ಸುಡಬೇಕು. ಇದರಿಂದ ಬೆಂಕಿ ಪಸರಿಸುವುದನ್ನು ತಡೆಗಟ್ಟಬಹುದು.

ಬಣವೆಗೆ ಬೆಂಕಿ: ಹೀಗಿರಲಿ ಮುಂಜಾಗ್ರತೆ

* ದೊಡ್ಡ ಬಣವೆಗಳನ್ನು ಹಾಕುವ ಬದಲು ಸಣ್ಣ ಸಣ್ಣ ಬಣವೆಗಳನ್ನು ಹಾಕಬೇಕು.

* ಬಣವೆಗಳ ಮಧ್ಯೆ ಅಂತರವಿರಲಿ. 5ರಿಂದ 6 ಅಡಿ ಅಂತರದಲ್ಲಿ ಬಣವೆಗಳನ್ನು ಹಾಕಿದರೆ ಆಕಸ್ಮಿಕವಾಗಿ ಒಂದು ಬಣವೆಗೆ ಬೆಂಕಿ ಬಿದ್ದರೆ ಇನ್ನೊಂದಕ್ಕೆ ಪಸರಿಸುವುದನ್ನು ತಡೆಯಬಹುದು.

* ರಸ್ತೆ ಪಕ್ಕ, ತಿಪ್ಪೆ ಪಕ್ಕ ಬಣವೆಗಳನ್ನು ಹಾಕಬಾರದು.

* ರಸ್ತೆ ಮೇಲೆ ಬೆಳೆಗಳನ್ನು ಹಾಕಿ ಒಣಗಿಸಬಾರದು. ಬೆಳೆಯ ಮೇಲೆ ವಾಹನ ಚಲಿಸಿದರೆ ಬೆಂಕಿ ಹತ್ತಿಕೊಳ್ಳುವ ಸಂಭವ ಇರುತ್ತದೆ.

* ವಿದ್ಯುತ್ ಲೈನ್ ಕೆಳಗೆ ಬಣವೆಗಳನ್ನು ಹಾಕಬಾರದು.

ಅಡಿಕೆ ತೋಟಗಳಿಗೆ ಪ್ರಮಾಣ ಕಡಿಮೆ

ಎಚ್.ವಿ. ನಟರಾಜ್

ಚನ್ನಗಿರಿ: ತಾಲ್ಲೂಕು ಅಡಿಕೆ ನಾಡೆಂದು ಪ್ರಸಿದ್ಧಿ ಪಡೆದಿದೆ. ತಾಲ್ಲೂಕಿನಲ್ಲಿ ಪ್ರಸ್ತುತ 35,000 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತದೆ.

ಸಾಮಾನ್ಯವಾಗಿ ಅಡಿಕೆ ತೋಟಗಳಿಗೆ ಬೇಸಿಗೆ ಸಮಯದಲ್ಲಿ ಬೆಂಕಿ ಬಿದ್ದು, ಮರಗಳು ಸುಟ್ಟು ಹೋಗುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿವೆ. ಆದರೆ, ತಾಲ್ಲೂಕಿನಲ್ಲಿ ಇಂತಹ ಅವಘಡಗಳ ಪ್ರಮಾಣ ವಿರಳ.

ಒಂದು ವೇಳೆ ಅಡಿಕೆ ತೋಟಗಳಿಗೆ ಬೆಂಕಿ ಬಿದ್ದು ನಷ್ಟ ಉಂಟಾದರೆ ಪ್ರಕೃತಿ ವಿಕೋಪ ಪರಿಹಾರ ಯೋಜನೆ ಅಡಿ ಬೆಳೆಗಾರರಿಗೆ ಕಂದಾಯ ಇಲಾಖೆ ಪರಿಹಾರ ನೀಡುತ್ತದೆ.

‘ಅಡಿಕೆ ತೋಟಗಳಿಗೆ ಬೆಂಕಿ ಬಿದ್ದ ಕುರಿತು ತೋಟಗಾರಿಕೆ ಇಲಾಖೆಯಿಂದ ಕಂದಾಯ ಇಲಾಖೆಗೆ ವರದಿ ನೀಡಲಾಗುತ್ತದೆ. ಅಲ್ಲದೇ ಅಡಿಕೆ ಬೆಳೆಗಾರರಿಗೆ ಬೆಂಕಿಯಿಂದ ಯಾವ ರೀತಿ ರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ತೋಟಗಾರಿಕೆ ಇಲಾಖೆಯಿಂದ ಮಾಹಿತಿಯನ್ನು ನೀಡಲಾಗುತ್ತದೆ’ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಎಂ.ವಿ. ರೋಹಿತ್ ಮಾಹಿತಿ ನೀಡಿದರು.

‘ಸಾಮಾನ್ಯವಾಗಿ ಕಾಡಿನಂಚಿನಲ್ಲಿ ಇರುವ ಹಳ್ಳಿಗಳ ತೋಟಗಳಿಗೆ ಬೆಂಕಿ ಬೀಳುತ್ತದೆ. ಹಾಗಾಗಿ ಆ ಗ್ರಾಮಗಳ ಅಡಿಕೆ ಬೆಳೆಗಾರರು ತಮ್ಮ ತೋಟಗಳ ಒಂದಷ್ಟು ಭಾಗವನ್ನು ತಾವೇ ಬೆಂಕಿ ಹಾಕಿ ಹುಲ್ಲು ಇರದಂತೆ ಸುಟ್ಟು ಹಾಕಬೇಕು. ಹೀಗೆ ಮಾಡುವುದರಿಂದ ಬೇಸಿಗೆ ಸಮಯದಲ್ಲಿ ಆಕಸ್ಮಿಕವಾಗಿ ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದಾಗ ಅದು ತೋಟಗಳಿಗೆ ಹರಡುವುದನ್ನು ತಪ್ಪಿಸಬಹುದಾಗಿದೆ’ ಎಂದು ರೈತರಿಗೆ ಸಲಹೆ ನೀಡಿದರು.

ಮುಂಜಾಗ್ರತೆ ವಹಿಸಿದರೆ ಅಗ್ನಿ ಅನಾಹುತ ತಪ್ಪಿಸಬಹುದು

ಇನಾಯತ್‌ ಉಲ್ಲಾ ಟಿ.

ಹರಿಹರ: ಅಗ್ನಿ ಅನಾಹುತಗಳು ತಾಲ್ಲೂಕಿನಲ್ಲಿ ಆಗಿಂದಾಗ್ಗೆ ನಡೆಯುತ್ತಿದ್ದು, ರೈತರು ತಮ್ಮ ಬೆಳೆ, ದನ, ಕರುಗಳಿಗೆಂದು ಶೇಖರಿಸಿದ ಮೇವು ನಾಶವಾಗುತ್ತಿವೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಗಾದೆ ಮಾತಿನಂತೆ ಹಲವು ರೈತರು ನಷ್ಟಕ್ಕೀಡಾಗುತ್ತಿದ್ದಾರೆ. 2022ನೇ ಸಾಲಿನಲ್ಲಿ ಭತ್ತದ ಹುಲ್ಲಿನ ಬಣವೆಗಳು ಬೆಂಕಿಗೆ ಈಡಾಗಿರುವ 34 ಪ್ರಕರಣಗಳು ನಡೆದಿವೆ.

ಹುಲ್ಲಿನ ಬಣವೆ ಜತೆಗೆ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದ 2 ಪ್ರಕರಣಗಳು, ತೆಂಗಿನ ತೋಟದ 3, ಅಡಿಕೆ ತೋಟಕ್ಕೆ ಬೆಂಕಿ ಬಿದ್ದ 1 ಪ್ರಕರಣ ನಡೆದಿವೆ. ಬೇಸಿಗೆಯ ಬಿರು ಬಿಸಿಲಿಗೆ ಶೇಖರಿಸಿಟ್ಟ ಹಾಗೂ ಸಾಗಣೆ ಮಾಡುವ ಮೇವು, ಜಮೀನುಗಳಲ್ಲಿ ಒಣಗಿದ ಬೆಳೆಯನ್ನು ಬೆಂಕಿ ಅನಾಹುತದಿಂದ ರೈತರು ರಕ್ಷಿಸಿಕೊಳ್ಳಲು ಕಾಳಜಿ ವಹಿಸಬೇಕಿದೆ. ಸ್ವಲ್ಪ ನಿಷ್ಕಾಳಜಿ ತೋರಿದರೂ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ, ಮೇವು ಸುಟ್ಟು ಬೂದಿಯಾಗುವ ಅಪಾಯವಿರುತ್ತದೆ.

‘ತಾಲ್ಲೂಕಿನಲ್ಲಿ ಭತ್ತವೇ ಪ್ರಧಾನ ಬೆಳೆಯಾಗಿದೆ. ದನಕರುಗಳಿಗೆ ಮೇವಾಗಿ ಭತ್ತದ ಹುಲ್ಲಿನ ಶೇಖರಣೆ ಹಾಗೂ ಸಾಗಣೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಕಣಗಳಲ್ಲಿ ಹುಲ್ಲಿನ ಬಣವೆಗಳನ್ನು ಮಾಡುವಾಗ ರೈತರು ವಿದ್ಯುತ್ ಲೈನ್ ಬಿಟ್ಟು ಮಾಡಬೇಕು ಅಥವಾ ವಿದ್ಯುತ್ ಲೈನ್‌ಗಳಿಗೆ ಪ್ಲಾಸ್ಟಿಕ್ ಪೈಪ್ ಅಳವಡಿಸಿದರೆ ಬೆಂಕಿಯ ಕಿಡಿ ಸಿಡಿಯುವ ಸಾಧ್ಯತೆ ತಪ್ಪುತ್ತದೆ’ ಎಂದು ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾಧಿಕಾರಿ ಆರ್.ಸಂಜೀವ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬಣವೆಗಳನ್ನು ಆದಷ್ಟು ವಸತಿ ಪ್ರದೇಶದಿಂದ ದೂರದಲ್ಲಿ ಹಾಕಬೇಕು. ಬಣವೆಗಳಿರುವ ಪ್ರದೇಶದಲ್ಲಿ ಕಸ, ಕಡ್ಡಿ ಸೇರದಂತೆ ಸದಾ ಸ್ವಚ್ಛತೆ ಕಾಪಾಡಬೇಕು. ಹುಲ್ಲು ಸಾಗಣೆ ಮಾಡುವಾಗ ವಾಹನಗಳಲ್ಲಿ ಅತಿ ಎತ್ತರಕ್ಕೆ ಲೋಡ್ ಮಾಡಬಾರದು’ ಎಂದು ಅವರು ರೈತರಿಗೆ ಸಲಹೆ ನೀಡಿದರು.

ಬೇಸಿಗೆಯಲ್ಲಿ ಬೆಳೆ, ಹುಲ್ಲಿನ ಬಣವೆಗಳ ರಕ್ಷಣೆಗೆ ರೈತರು ಒಂದಷ್ಟು ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು. ಫಸಲು ನಾಶವಾದ ಮೇಲೆ ಯಾರನ್ನೂ ದೂರಿ ಪ್ರಯೋಜನವಿಲ್ಲ.

-ಬಸವಪ್ರಭು ಶರ್ಮ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ

ಕಬ್ಬಿನ ಸೂಲಂಗಿ ಎತ್ತರಕ್ಕೆ ಬೆಳೆಯದಂತೆ ಆಗಾಗ ಕತ್ತರಿಲು ರೈತರಿಗೆ ನೋಟಿಸ್ ಕೊಡುತ್ತೇವೆ. ಆದರೆ, ರೈತರು ಅದನ್ನು ನಿರ್ಲಕ್ಷಿಸುತ್ತಾರೆ. ಬೆಂಕಿ ಕಾಣಿಸಿಕೊಂಡರೆ ಬೆಳೆ ನಷ್ಟ ಅನುಭವಿಸುತ್ತಾರೆ.

-ಸುಧೀರ್‌ಕುಮಾರ್ ಡಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಗ್ರಾಮೀಣ ಉಪವಿಭಾಗ, ಬೆಸ್ಕಾಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT