ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ಗೆ ಅದ್ದೂರಿ ಸ್ವಾಗತ

Published 4 ಜೂನ್ 2023, 4:20 IST
Last Updated 4 ಜೂನ್ 2023, 4:20 IST
ಅಕ್ಷರ ಗಾತ್ರ

ದಾವಣಗೆರೆ: ಮೂರನೇ ಬಾರಿಗೆ ಸಚಿವರಾಗಿ ಜಿಲ್ಲೆಗೆ ಆಗಮಿಸಿದ ಗಣಿ, ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು.

ಕಳೆದ ಸರ್ಕಾರದ ಅವಧಿಯಲ್ಲಿ ದಾವಣಗೆರೆ ಜಿಲ್ಲೆಯವರಿಗೆ ಉಸ್ತುವಾರಿ ಸಚಿವ ಸ್ಥಾನ ಸಿಕ್ಕಿರಲಿಲ್ಲ. 5 ವರ್ಷಗಳ ಬಳಿಕ ಜಿಲ್ಲೆಯವರೇ ಆದ ಮಲ್ಲಿಕಾರ್ಜುನ್ ಅವರಿಗೆ ಸಚಿವ ಸ್ಥಾನ ದೊರೆಕಿದ್ದು, ಕಾಂಗ್ರೆಸ್ ಕಾರ್ಯಕರ್ತರಿಗೆ ಸಂಭ್ರಮ ಹೆಚ್ಚಿತ್ತು.

ನಗರದ ಹೊರವಲಯದ ಜಿಲ್ಲಾ ಪಂಚಾಯಿತಿ ಎದುರು ಎಸ್‌.ಎಸ್. ಮಲ್ಲಿಕಾರ್ಜುನ್ ಅವರು ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು. ಅವರ ಮೇಲೆ ಹೂವಿನ ಮಳೆಗೆರೆದರು. ಅವರನ್ನು ಬಣ್ಣಿಸುವ ಸಿನಿಮಾ ಹಾಡುಗಳನ್ನು ಪ್ರಸಾರ ಮಾಡಲಾಯಿತು. ನಗರದೆಲ್ಲೆಡೆ ಅವರಿಗೆ ಶುಭ ಕೋರುವ ಫ್ಲೆಕ್ಸ್, ಬ್ಯಾನರ್‌ಗಳು ರಾರಾಜಿಸಿದವು.

ನಗರಕ್ಕೆ ಬರುತ್ತಿದ್ದಂತೆಯೇ ಶಾಮನೂರಿನ ಆಂಜನೇಯ ಸ್ವಾಮಿ ದೇವಾಲಯಕ್ಕೆ ಪೂಜೆ ಸಲ್ಲಿಸಿ ಬಳಿಕ ಜಿಲ್ಲಾ ಪಂಚಾಯಿತಿ ಆವರಣಕ್ಕೆ ಬಂದು ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದರು.

ಆನಂತರ ತೆರೆದ ವಾಹನದಲ್ಲಿ ಮೆರವಣಿಗೆ ಸಾಗಿತು. ಹದಡಿ ರಸ್ತೆ, ಗಣೇಶ ದೇವಸ್ಥಾನ ಹದಡಿ ರಸ್ತೆ, ಐ.ಟಿ.ಐ. ಕಾಲೇಜು ಮುಂಭಾಗದಿಂದ 60 ಅಡಿ ರಸ್ತೆಯ ಮೂಲಕ ನಿಟುವಳ್ಳಿ ದುರ್ಗಾಂಬಿಕಾ ಸರ್ಕಲ್, ಆರ್.ಎಸ್. ಶೇಖರಪ್ಪನವರ ಮನೆ ಮುಂಭಾಗ ಬಂದಿತು. ನಂತರ ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗದಿಂದ ಮುಂದೆ ಬಂದು ಹದಡಿ ರಸ್ತೆಯ ಮೂಲಕ ವಿದ್ಯಾರ್ಥಿ ಭವನ ಸರ್ಕಲ್, ಅಂಬೇಡ್ಕರ್ ಸರ್ಕಲ್ ಮೂಲಕ ಜಯದೇವ ವೃತ್ತದಲ್ಲಿ ಮೆರವಣಿಗೆ ಅಂತ್ಯವಾಯಿತು. ಮೆರವಣಿಗೆ ಹಳೇ ದಾವಣಗೆರೆ ಭಾಗಕ್ಕೂ ಸಂಚರಿಸಬೇಕಿತ್ತು. ಸಮಯದ ಅಭಾವದಿಂದ ಜಯದೇವ ವೃತ್ತಕ್ಕೆ ಅಂತ್ಯಗೊಳಿಸಲಾಯಿತು.

ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಚನ್ನಗಿರಿಯ ಶಿವಗಂಗಾ ಬಸವರಾಜ್, ಹೊನ್ನಾಳಿಯ ಡಿ.ಜಿ. ಶಾಂತನಗೌಡ, ಜಗಳೂರು ಶಾಸಕ ದೇವೇಂದ್ರಪ್ಪ, ಹರಪನಹಳ್ಳಿಯ ಶಾಸಕಿ ಲತಾ ಮಲ್ಲಿಕಾರ್ಜುನ್, ಮಾಜಿ ಶಾಸಕರಾದ ಎಸ್.ರಾಮಪ್ಪ, ಮುಖಂಡ ನಂದಿಗಾವಿ ಶ್ರೀನಿವಾಸ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಬಿ.ಮಂಜಪ್ಪ ಹಾಗೂ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಇದ್ದರು.

ಗಣಿ ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾಗಿ ಜಿಲ್ಲೆಗೆ ಆಗಮಿಸಿದ ಎಸ್. ಎಸ್.ಮಲ್ಲಿಕಾರ್ಜುನ್ ಅವರನ್ನು ಸ್ವಾಗತಿಸಲಾಯಿತು.
ಗಣಿ ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾಗಿ ಜಿಲ್ಲೆಗೆ ಆಗಮಿಸಿದ ಎಸ್. ಎಸ್.ಮಲ್ಲಿಕಾರ್ಜುನ್ ಅವರನ್ನು ಸ್ವಾಗತಿಸಲಾಯಿತು.

‘ನುಡಿದಂತೆ ನಡೆವ ಸರ್ಕಾರವೆಂದರೆ ಕಾಂಗ್ರೆಸ್‌’ ದಾವಣಗೆರೆ: ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ಘೋಷಿಸಿದಂತೆ 5 ಗ್ಯಾರಂಟಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದು ನುಡಿದಂತೆ ನಡೆಯುವ ಸರ್ಕಾರ ಎಂದರೆ ಅದು ಕಾಂಗ್ರೆಸ್‌ ಮಾತ್ರ’ ಎಂದು ಸಚಿವ ಎಸ್.ಎಸ್‌. ಮಲ್ಲಿಕಾರ್ಜುನ್ ಹೇಳಿದರು. ‘ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಕಾರಣ. ಆ ಕೆಲಸವನ್ನು ಉತ್ಸುಕರಾಗಿ ಮಾಡಿದ್ದೀರಿ. ಜನರು ಪ್ರತಿ ಬಾಗಿಲಿನಿಂದ ಬಂದು ನನಗೆ ಆಶೀರ್ವಾದ ಮಾಡಿದ್ದಾರೆ. ಅಧಿಕಾರ ಇರುತ್ತದೆ ಹೋಗುತ್ತದೆ. ಆದರೆ ವಿಶ್ವಾಸ ಮುಖ್ಯ. ಅದನ್ನು ಹೀಗೆಯೇ ಮುಂದುವರಿಸಿಕೊಂಡು ಹೋಗೋಣ’ ಎಂದು ಮೆರವಣಿಗೆ ಬಳಿಕ ಪತ್ರಕರ್ತರಿಗೆ ತಿಳಿಸಿದರು. ‘ದಾವಣಗೆರೆಯಲ್ಲಿ 5 ವರ್ಷ ಯಾವ ರೀತಿ ಲೂಟಿ ಹೊಡೆದಿರುವುದನ್ನು ಜನರು ಈಗಾಗಲೇ ನೋಡಿದ್ದಾರೆ. ಈಗ ನಾವು ಪ್ರಾಮಾಣಿಕವಾಗಿ ಜನ ಸೇವೆ ಮಾಡೋಣ. ಜನರ ವಿಶ್ವಾಸಗಳಿಸೋಣ. ಏಕೆಂದರೆ ಮುಂದೆ ಲೋಕಸಭೆ ಚುನಾವಣೆ ಬರಲಿದ್ದು ಒಳ್ಳೆಯ ಕಾರ್ಯಕ್ರಮಗಳನ್ನು ಹಾಕಿಕೊಂಡು ಇದೇ ರೀತಿ ಹೋರಾಟ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು’ ಎಂದು ಸಲಹೆ ನೀಡಿದರು. ‘ಮಹಾನಗರ ಪಾಲಿಕೆ ಧೂಡಾ ಸೇರಿ ಎಲ್ಲಾ ಕಡೆ ಕಾಂಗ್ರೆಸ್‌ ಪ್ರಾಬಲ್ಯವಿದ್ದರೂ ಬಿಜೆಪಿ ಅಧಿಕಾರ ದುರುಪಯೋಗಪಡಿಸಿಕೊಂಡಿತು. ನಮ್ಮ ಕಾಂಗ್ರೆಸ್ ಅಭಿವೃದ್ಧಿ ಪಥದತ್ತ ಸಾಗಲಿದೆ. ನಿಮ್ಮೆಲ್ಲರ ಸಹಕಾರ ಇರಲಿ‌’ ಎಂದು ಕೋರಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT