ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಕಾಲೇಜು ಮಂಜೂರಿಗೆ ಸಿಎಂಗೆ ಮನವಿ

ಕೋವಿಡ್‌–19, ವೃದ್ಧರ ಆರೈಕೆ ಕೇಂದ್ರ ಉದ್ಘಾಟನೆ
Last Updated 12 ಜೂನ್ 2020, 11:53 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಗತ್ಯವಿದ್ದು, ಮುಂದಿನ ಬಜೆಟ್‌ನಲ್ಲಿ ಕಾಲೇಜು ಮಂಜೂರು ಮಾಡಿ ಹಣ ಮೀಸಲಿಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜು ಭರವಸೆ ನೀಡಿದರು.

‘ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್-19 ಪರೀಕ್ಷಾ ಲ್ಯಾಬ್ ಉದ್ಘಾಟನೆ ಹಾಗೂ ₹1 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವೃದ್ಧರ ಆರೈಕೆ ಕೇಂದ್ರ (ಜಿರಿಯಾಟ್ರಿಕ್ ವಾರ್ಡ್‌)ಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಬಹುದಿನಗಳಿಂದ ಬೇಡಿಕೆ ಇದ್ದು, ಕಾಲೇಜು ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ತಿಳಿಸಿದರು.

‘ನಾನು ಉಸ್ತುವಾರಿ ಸಚಿವರಾದ ನಂತರ ಎಸ್‌ಎಸ್‌ ಆಸ್ಪತ್ರೆ, ಜೆಜೆಎಂ ಮೆಡಿಕಲ್ ಕಾಲೇಜು ಹಾಗೂ ಸಿಜಿ ಆಸ್ಪತ್ರೆಗಳಲ್ಲಿ ಲ್ಯಾಬ್ ಉದ್ಘಾಟನೆಯಾಗಿವೆ. ಪ್ರತಿ ದಿವಸ ಮೂರು ಪಾಳಿಯಂತೆ 200 ಕೋವಿಡ್‌–19 ಪರೀಕ್ಷೆ ಮಾಡಬಹುದು. ಜಿಲ್ಲೆಗೆ 15ನೇ ಬಾರಿ ಬಂದಿದ್ದೇನೆ. ಜಿಲ್ಲಾಧಿಕಾರಿ, ಸಂಸದರು ಹಾಗೂ ಶಾಸಕರು ಪ್ರತಿನಿತ್ಯ ಸಂಪರ್ಕದಲ್ಲಿದ್ದೇನೆ’ ಎಂದು ಹೇಳಿದರು.

ಆಸ್ಪತ್ರೆ ಮೇಲ್ದರ್ಜೆಗೆ ₹100 ಕೋಟಿಗೆ ಮನವಿ

ಚಿಗಟೇರಿ ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ₹100 ಕೋಟಿ ನೀಡುವಂತೆ ಮುಖ್ಯಮಂತ್ರಿ ಜೊತೆ ಚರ್ಚಿಸಿದ್ದೇನೆ. ಸಂಸದರು ಹಾಗೂ ಶಾಸಕರು ಇದಕ್ಕೆ ಸಹಮತ ಸೂಚಿಸಿದ್ದಾರೆ. ಎಂದು ಬೈರತಿ ಬಸವರಾಜು ತಿಳಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಹಿರಿಯ ನಾಗರಿಕರ ವಾರ್ಡ್‌ಗೆ ಭೂಮಿಪೂಜೆ ನೆರವೇರಿಸಲಾಗಿದೆ. ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯ ಕಲ್ಪಿಸುವ ವಿಶೇಷ ವಾರ್ಡ್‌ ಇದು. ಶೀಘ್ರ ಕಾಮಗಾರಿ ಮುಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಹಂತಹಂತವಾಗಿ ಸೌಲಭ್ಯ ನೀಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯ ರೈತರಿಂದ ಭತ್ತ ಖರೀದಿ ಕೇಂದ್ರ ಆರಂಭಿಸಲು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು. ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಯ ಜೂನ್ 30ರವರೆಗೆ ಗಡುವು ನೀಡಲಾಗಿದೆ. ಸಮಸ್ಯೆ ಉಲ್ಬಣವಾಗುತ್ತಿಲ್ಲ. ಸಮಸ್ಯೆಯಾದರೆ ಪರಿಹರಿಸುತ್ತೇನೆ ಎಂದು ಭರವಸೆ ನೀಡಿದರು.

10 ಬೆಡ್‌ಗಳ ವಾರ್ಡ್‌

ದಾವಣಗೆರೆ: ಹಿರಿಯ ನಾಗರಿಕರಿಗಾಗಿ ₹1ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವೃದ್ಧರ ಆರೈಕೆ ಕೇಂದ್ರ (ಜೆರಿಯಾಟ್ರಿಕ್ ವಾರ್ಡ್)ದಲ್ಲಿ 10 ಬೆಡ್‌ಗಳು ಇರಲಿವೆ. ಇವುಗಳಲ್ಲಿ ಪುರುಷರಿಗೆ 5 ಹಾಗೂ ಮಹಿಳೆಯರಿಗೆ 5 ವಾರ್ಡ್‌ಗಳನ್ನು ಮೀಸಲಿರಿಸಲಾಗಿದೆ.

ಈ ವಾರ್ಡ್‌ನಲ್ಲಿ ಹಿರಿಯ ನಾಗರಿಕರಿಗೆ, ಪರೀಕ್ಷೆ ಹಾಗೂ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಜಿಲ್ಲಾ ಸರ್ಜನ್ ಡಾ.ನಾಗರಾಜು ತಿಳಿಸಿದರು.

ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್‌.ಎ.ರವೀಂದ್ರನಾಥ್‌, ಎಂ.ಪಿ.ರೇಣುಕಾಚಾರ್ಯ, ಪ್ರೊ.ಲಿಂಗಣ್ಣ, ಮಾಡಾಳು ವಿರೂಪಾಕ್ಷಪ್ಪ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ, ಮೇಯರ್ ಬಿ.ಜೆ.ಅಜಯ್‌ಕುಮಾರ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀಪಾ ಜಗದೀಶ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಪೂರ್ವವಲಯ ಐಜಿಪಿ ಎಸ್‌.ರವಿ, ಎಸ್‌ಪಿ ಹನುಮಂತರಾಯ, ಎಎಸ್‌ಪಿ ರಾಜೀವ್, ಜಿಲ್ಲಾ ಸರ್ಜನ್, ನಾಗರಾಜು, ಜಿಲ್ಲಾ ಆರೋಗ್ಯಾಧಿಕಾರಿ ಆರ್‌. ರಾಘವೇಂದ್ರಸ್ವಾಮಿ, ಸರ್ವೇಕ್ಷಣಾಧಿಕಾರಿ ಜಿ.ಡಿ.ರಾಘವನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT