ಮಂಗಳವಾರ, ಜನವರಿ 21, 2020
19 °C
ಸ್ಮಶಾನಗಳಲ್ಲಿ ಎದ್ದು ಕಾಣುತ್ತಿದೆ ನಿರ್ವಹಣೆ ಕೊರತೆ

ಸ್ಮಶಾನ...ಇಲ್ಲಿ ಎಲ್ಲವೂ ಅಧ್ವಾನ...

ರಾಕೇಶ ಎಂ. Updated:

ಅಕ್ಷರ ಗಾತ್ರ : | |

ದಾವಣಗೆರೆ: ಬೀಡಾಡಿ ದನಗಳ ಹಾವಳಿ, ಎಲ್ಲೆಂದರಲ್ಲಿ ಕಸ ಸುಡುವುದು, ಅನೈತಿಕ ಚಟುವಟಿಕೆಗಳ ತಾಣ, ಎರಡು ಆಳೆತ್ತರಕ್ಕೆ ಬೆಳೆದ ಬಳ್ಳಾರಿ ಜಾಲಿ, ಅವಕಾಶ ಇಲ್ಲದಿದ್ದರೂ ಸಿಮೆಂಟ್ ಗೋರಿ ನಿರ್ಮಾಣ... ನಗರದ ಸ್ಮಶಾನಕ್ಕೆ ತೆರಳಿದರೆ ನಿರ್ವಹಣೆಯ ಕೊರತೆ ಎದ್ದುಕಾಣುತ್ತಿದೆ. ಪಾಳು ಭೂಮಿಯಂತೆ ಕಾಣುವ ಇವುಗಳಲ್ಲಿ ಕಳೆ ಸಸ್ಯಗಳು ಬೆಳೆದುನಿಂತಿವೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 9 ಸ್ಮಶಾನಗಳಿವೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಧರ್ಮಿಯರಿಗೆ ನಗರದಲ್ಲಿ ಪ್ರತ್ಯೇಕ ಸ್ಮಶಾನಗಳಿವೆ. ಬಹುತೇಕ ಸ್ಮಶಾನಗಳಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು, ಒಡೆದ ಗಾಜಿನ ಲೋಟ, ಪ್ಲಾಸ್ಟಿಕ್‌, ಬೀಡಿ ಹಾಗೂ ಸಿಗರೇಟುಗಳು ಕಣ್ಣಿಗೆ ರಾಚುತ್ತಿವೆ. ಪುಂಡರು ಮದ್ಯ ಹಾಗೂ ಮಾದಕ ವಸ್ತುಗಳ ಸೇವನೆಗೆ ಈ ಸ್ಥಳವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ರಾತ್ರಿಯಾದ ಬಳಿಕ ಸ್ಮಶಾನದತ್ತ ಜನರ ದೃಷ್ಟಿ ಹಾಯುವುದು ಕಡಿಮೆ ಎಂಬ ಕಾರಣಕ್ಕೆ ಈ ಕೃತ್ಯ ಎಗ್ಗಿಲ್ಲದೇ ನಡೆಯುತ್ತಿದೆ.

ಆವರಗೆರೆ ಸ್ಮಶಾನದ ಸುತ್ತ ಬೇಲಿಯೇ ಇಲ್ಲ. ಮೃತ ವ್ಯಕ್ತಿಯ ಅಂತಿಮ ವಿಧಿ–ವಿಧಾನಗಳು ಬಯಲಲ್ಲೇ ನಡೆಯುತ್ತವೆ. ರಸ್ತೆಯಲ್ಲಿ ಸಾಗುವ ಜನರ ಎದುರೇ ಕಾರ್ಯಗಳು ನೆರವೇರುತ್ತವೆ.

ದನ, ನಾಯಿ, ಹಂದಿ ಸೇರಿ ಬಹುತೇಕ ಪ್ರಾಣಿಗಳಿಗೆ ಸ್ಮಶಾನದಲ್ಲಿ ಮುಕ್ತ ಪ್ರವೇಶವಿದೆ. ಸ್ಮಶಾನದಲ್ಲಿ ಜಾನುವಾರು ಬಿಟ್ಟು ಮೇಯಿಸಲಾಗುತ್ತದೆ. ಅಂತ್ಯ ಸಂಸ್ಕಾರ ನೆರವೇರಿದ ಸ್ಥಳದಲ್ಲಿ ನಿರ್ಮಿಸಿದ ಗೋರಿಗಳಿಗೆ ಧಕ್ಕೆಯುಂಟಾಗುತ್ತಿದೆ. ಕೆಲವು ಹಾಳಾಗಿ ಹೋಗುತ್ತಿವೆ. ಪೂಜೆಗೆ ಬಳಸಿದ ಹಣ್ಣು–ಕಾಯಿ, ಅಕ್ಕಿ ಸೇರಿ ಇತರ ಪದಾರ್ಥಗಳು ಹಂದಿ–ನಾಯಿಗಳ ಪಾಲಾಗುತ್ತಿವೆ. ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಇವುಗಳನ್ನು ಸಂರಕ್ಷಿಸಿಕೊಳ್ಳುವುದು ಹರಸಾಹಸವಾಗಿದೆ.

ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳಿಗೆ ಸ್ಮಶಾನಗಳ ಅಭಿವೃದ್ಧಿ ಆದ್ಯತೆಯ ವಿಷಯವಾಗಿ ಉಳಿದಿಲ್ಲ. ಮೃತ ವ್ಯಕ್ತಿಯ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡು ಈ ಸ್ಥಳ ನೋಡಿದವರಿಗೆ ಮಾತ್ರ ಸ್ಮಶಾನಗಳ ಬಗ್ಗೆ ಕಾಳಜಿ ಮೂಡುತ್ತದೆ.

ಪಡ್ಡೆ ಹುಡುಗರ ಅಡ್ಡೆ: ‘ಗಾಂಧಿನಗರದಲ್ಲಿರುವ ಸ್ಮಶಾನವು ಅನೈತಿಕ ಚಟುವಟಿಕೆ ತಾಣವಾಗಿದೆ. ಗಿಡಗಂಟಿಗಳು, ಆಳೆತ್ತರಕ್ಕೆ ಜಾಲಿ ಬೆಳೆದಿರುವುದರಿಂದ ಇಸ್ಪೀಟ್, ಧೂಮಪಾನ, ಮದ್ಯ, ಮಾದಕ ದ್ರವ್ಯ ಸೇವನೆಗೆ ಈ ಜಾಗವನ್ನು ಪಡ್ಡೆ ಹುಡುಗರು ಬಳಸುತ್ತಿದ್ದಾರೆ. ಇವರನ್ನು ಹೇಳುವವರು ಕೇಳುವವರು ಯಾರೂ ಇಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸ್ಥಳೀಯರು.

‘2012ರ ನಂತರ ಗೋರಿ ನಿರ್ಮಿಸುವುದನ್ನು ಸ್ಥಗಿತಗೊಳಿಸಲಾಗಿದೆ. ಆದರೂ ಪ್ರಭಾವಿಗಳ ಒತ್ತಡಕ್ಕೆ ಮಣಿದು ಗಾಂಧಿ ನಗರದ ಸ್ಮಶಾನಲ್ಲಿ ಗೋರಿ ನಿರ್ಮಿಸಲಾಗುತ್ತಿದೆ’ ಎನ್ನುತ್ತಾರೆ ಇಲ್ಲಿನ ನಿವಾಸಿ ದುರುಗಪ್ಪ.

‘ಈ ಸ್ಮಶಾನದಲ್ಲಿ ಮೃತದೇಹ ದಫನ್‌ ಮಾಡುವವರು ಮನಬಂದಂತೆ ಗೋರಿಗಳನ್ನು ನಿರ್ಮಿಸುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಕ್ರಮೇಣ ಇಲ್ಲಿ ಮೃತದೇಹಗಳ ದಫನ್‌ಗೆ ಜಾಗವೇ ಇರುವುದಿಲ್ಲ. ಅಕ್ರಮವಾಗಿ ನಿರ್ಮಿಸಿರುವ ಇಂಥ ಗೋರಿಗಳನ್ನು ಪಾಲಿಕೆ ತೆರವುಗೊಳಿಸಬೇಕು. ಇಲ್ಲಿರುವ ದೇವಸ್ಥಾನಕ್ಕೆ ಟೈಲ್ಸ್‌ಗಳನ್ನು ಹಾಕಿದ್ದಾರೆ. ಬಹುತೇಕ ಟೈಲ್ಸ್‌ಗಳು ಕಿತ್ತು ಹೋಗಿವೆ. ಹೀಗಾಗಿ ಇಲ್ಲಿ ಪೂಜೆ ನಡೆಯುತ್ತಿಲ್ಲ’ ಎಂದು ಅವರು ಹೇಳಿದರು.

‘ಗಾಂಧಿ ನಗರದಲ್ಲಿರುವ ಹಿಂದೂ ರುದ್ರಭೂಮಿ ಸುಮಾರು 48 ಎಕರೆ ವಿಸ್ತಾರ ಇದೆ. ಆದರೆ, ಈ ಸ್ಮಶಾನವನ್ನು ಇಬ್ಬರು ನಿರ್ವಹಣೆ ಮಾಡುತ್ತಿದ್ದಾರೆ. ಇಲ್ಲಿಯೇ 12 ವರ್ಷಗಳಿಂದ ಕೆಲಸ ಮಾಡುತ್ತಿರುವ ನಮ್ಮನ್ನು ನೇಮಕ ಮಾಡಿ ಎಂದು ಪಾಲಿಕೆ, ಜಿಲ್ಲಾಧಿಕಾರಿ, ಸಮಾಜಕಲ್ಯಾಣ ಇಲಾಖೆ ಸಚಿವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದ್ದೇವೆ. ಆದರೆ, ನೇಮಕ ಮಾತ್ರ ಮಾಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು ಮೈಲಪ್ಪ, ಮಹಾಂತೇಶ, ಗರೀಶ್, ಹನುಮಂತ ಮತ್ತು ಮಂಜಪ್ಪ.

‘ಗಾಂಧಿ ನಗರ ಸ್ಮಶಾನದ ಒಂದು ಗೇಟ್ ಗಟ್ಟಿಮುಟ್ಟಾಗಿತ್ತು. ಇನ್ನೊಂದು ಹಾಳಾಗಿತ್ತು. ಹಾಳಾಗಿರುವುದರ ಜೊತೆಗೆ ಚೆನ್ನಾಗಿರುವ ಗೇಟನ್ನು ತೆಗೆದು ಹೊಸ ಗೇಟ್ ಹಾಕಿದ್ದಾರೆ. ಟ್ಯಾಂಕರ್‌ಗೆ ಪ್ಲಾಸ್ಟಿಕ್‌ ನಲ್ಲಿಗಳನ್ನು ಅಳವಡಿಸಿ ಸ್ವಲ್ಪ ದಿನಗಳಲ್ಲಿ ಮುರಿದು ಹೋಗಿವೆ. ಇದರ ಬಗ್ಗೆ ಅಧಿಕಾರಿಗಳು ಗಮನಹರಿಸಿಲ್ಲ. ಅಲ್ಲದೇ ಹಲವು ದಿನಗಳಿಂದ ಪೈಪ್‌ನಿಂದ ನೀರು ಸೋರಿಕೆಯಾಗುತ್ತಿದೆ. ಆದರೂ ಇದನ್ನು ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸ್ಥಳೀಯರು.

‘ಚಾನೆಲ್ ಪಕ್ಕದಲ್ಲಿಯೇ ಶವಸಂಸ್ಕಾರ’: ‘ಆಂಜನೇಯ ಮಿಲ್ ಬಡಾವಣೆ ಜನರು ಚಾನೆಲ್ ಪಕ್ಕದಲ್ಲಿಯೇ ಶವಸಂಸ್ಕಾರ ಮಾಡುತ್ತಾರೆ. ಇಲ್ಲಿ ಸರ್ಕಾರಿ ಜಾಗದಲ್ಲಿ ಒಂದು ಸ್ಮಶಾನ ಮಾಡುವ ಅಗತ್ಯ ಇದೆ. ಆವರಗೆರೆ ಸ್ಮಶಾನದಲ್ಲಿ ಪ್ರಮುಖವಾಗಿ ನೀರಿನ ಸಮಸ್ಯೆ ಇದೆ. ಕಾಂಪೌಂಡ್ ನಿರ್ಮಿಸಿಲ್ಲ. ಇದ್ದ ಬೇಲಿ ಸಂಪೂರ್ಣ ಕಿತ್ತು ಹೋಗಿದೆ. ಕಾಂಪೌಂಡ್‌ ನಿರ್ಮಾಣಕ್ಕೆ ಅನುದಾನ ಬಂದಿತ್ತು. ಆದರೆ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ಅನುದಾನ ವಾಪಾಸ್ ಹೋಗಿದೆ’ ಎನ್ನುತ್ತಾರೆ ಸಿಪಿಐ ತಾಲೂಕು ಕಾರ್ಯದರ್ಶಿ ಆವರಗೆರೆ ವಾಸು.

ಆವರಗೆರೆ ಹಳೇ ಊರಿನವರು ರಸ್ತೆಗಾಗಿ ಜನರು ಪರದಾಡುವಂತಾಗಿದೆ ಎರಡು ವರ್ಷಗಳ ಹಿಂದೆ ರೈತರು ರಸ್ತೆಯನ್ನು ತಮ್ಮದೆಂದು ಉಳುಮೆ ಮಾಡುತ್ತಿದ್ದಾರೆ. ಹೀಗಾಗಿ ಜನರಿಗೆ ತೊಂದರೆ ಉಂಟಾಗುತ್ತಿದೆ. ಊರಿನವರು ಸುತ್ತು ಬಳಸಿ ಸ್ಮಶಾನಕ್ಕೆ ಬರುವಂತಾಗಿದೆ. ಇಲ್ಲಿಗೆ ಒಬ್ಬ ಕಾವಲುಗಾರ, ಕಾಂಪೌಂಡ್, ನೀರಿನ ವ್ಯವಸ್ಥೆ ಮತ್ತು ವಿದ್ಯುತ್ ಚಿತಾಗಾರ ಅವಶ್ಯಕತೆ ಇದೆ. ಎಲ್ಲಾ ಸ್ಮಶಾನಗಳನ್ನು ಸ್ವಚ್ಛಗೊಳಿಸಿ ಹೂವು ಹಾಗೂ ಹಣ್ಣಿನ ಗಿಡ–ಮರಗಳನ್ನು ಬೆಳೆಸಬೇಕು. ಇದರಿಂದ ಇಲ್ಲಿನ ಪರಿಸರದ ಅಂದವೂ ಹೆಚ್ಚಲಿದೆ ಎನ್ನುತ್ತಾರೆ ಆವರಗೆರೆ ವಾಸು.

‘ಪಿ.ಬಿ ರಸ್ತೆ  ವಿಸ್ತರಣೆ ಮಾಡುವಾಗ ಇಲ್ಲಿನ ಖಬರಸ್ಥಾನಕ್ಕೆ ಪಾಲಿಕೆಯಿಂದ ನೀಡಲಾಗಿದ್ದ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಯಿತು. ನಂತರ ಎರಡು ಮೂರು ವರ್ಷ ಕಳೆದರೂ ನೀರಿನ ಸಂಪರ್ಕ ಕಲ್ಪಿಸಿಲ್ಲ. ಇಲ್ಲಿ ಕೊಳವೆಬಾವಿ ಇರುವುದರಿಂದ ನೀರಿನ ಸಮಸ್ಯೆ ಉಂಟಾಗಿಲ್ಲ. ಕೊಳವೆಬಾವಿಯಲ್ಲಿ ನೀರು ಖಾಲಿಯಾದರೆ ಸಮಸ್ಯೆ ಎದುರಾಗಲಿದೆ’ ಎನ್ನುತ್ತಾರೆ ತೈಯಬಲಿ ಸಾಬ್.

‘ಪಾಲಿಕೆಯವರು ಕಸ ತೆಗೆದುಕೊಂಡು ಹೋಗಲು ಬರುವುದೇ ಕಡಿಮೆ. ಹಲವು ದಿನಗಳಿಂದ ಇಲ್ಲಿನ ಕಸ ತೆಗೆದುಕೊಂಡು ಹೋಗಲು ಬಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು ದಾವುಲ್.

‘ಸ್ಮಶಾನಗಳ ಸಮಸ್ಯೆಗಳ ಬಗ್ಗೆ ಯಾರೂ ದೂರು ನೀಡಿಲ್ಲ. ಒಂದು ವೇಳೆ ಸಮಸ್ಯೆ ಇದ್ದಲ್ಲಿ ಬಗೆಹರಿಸುತ್ತೇನೆ. ಶವವನ್ನು ಸ್ಮಶಾನಕ್ಕೆ ಕೊಂಡೊಯ್ಯಲು ಪಾಲಿಕೆಯ ಒಂದು ವಾಹನ ಇದೆ. ಅಲ್ಲದೇ ವಿವಿಧ ಸಮುದಾಯದವರು ವಾಹನಗಳನ್ನು ಹೊಂದಿದ್ದಾರೆ. ಸಾರ್ವಜನಿಕರಿಂದ ಮತ್ತೊಂದು ವಾಹನದ ಬೇಡಿಕೆ ಬಂದರೆ ವಾಹನ ವ್ಯವಸ್ಥೆ ಕಲ್ಪಿಸಲಾಗುವುದು’ ಎನ್ನುತ್ತಾರೆ ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ.

‘ಸ್ಮಶಾನಗಳಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಪೊಲೀಸ್ ಇಲಾಖೆಯೊಂದಿಗೆ ಸೇರಿ ಕ್ರಮ ಕೈಗೊಳ್ಳಲಾಗುವುದು. ಕಸವನ್ನು ಪ್ರತಿ ವಾರ ತೆಗೆದುಕೊಂಡು ಹೋಗಲಾಗುವುದು’ ಎಂದು ಅವರು ಹೇಳಿದರು.

‘ಸ್ಮಾರ್ಟ್‌ ಸಿಟಿ ಯೋಜನೆಯಡಿ ಶಾಮನೂರಿನಲ್ಲಿರುವ ಹಿಂದೂ ರುದ್ರಭೂಮಿಯನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಇಲ್ಲಿ ವಿದ್ಯುತ್ ಶವಾಗಾರವನ್ನು ನಿರ್ಮಿಸಲಾಗುತ್ತಿದೆ. ಯೋಜನೆಯ ಪ್ರಕಾರ 2020 ಮಾರ್ಚ್ ವೇಳೆಗೆ ಕಾಮಗಾರಿ ಮುಗಿಯಬೇಕಿತ್ತು. ಆದರೆ, ಇನ್ನೂ ಪಿಲ್ಲರ್‌ ಕೂಡಾ ಹಾಕಿಲ್ಲ. ಕಟ್ಟಡ ಕಾಮಗಾರಿ ಆಮೆ ವೇಗದಲ್ಲಿ ನಡೆಯುತ್ತಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸ್ಥಳೀಯರು.

‘ವಿದ್ಯುತ್ ಶವಾಗಾರ ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ ನಿಜ. ಆದರೆ ಮುಂಗಾರು ಮಳೆ ಬಿಡುವು ಕೊಡದ ಕಾರಣ ತಡವಾಗಿದೆ. ಜೊತೆಗೆ ಕುಂದವಾಡ ಕೆರೆ ನೀರು ಬಸಿಯುತ್ತಲೇ ಇದೆ. ಎಷ್ಟು ನೀರು ಹೊರಗೆ ಹಾಕಿದರೂ ಮತ್ತೆ ನೀರು ಬರುತ್ತಲೇ ಇದೆ. ಇದು ಕಾಮಗಾರಿ ತಡವಾಗಲು ಮತ್ತೊಂದು ಕಾರಣ’ ಎನ್ನುತ್ತಾರೆ ಸ್ಮಾರ್ಟ್‌ಸಿಟಿ ಕಾರ್ಯಪಾಲಕ ಎಂಜಿನಿಯರ್ ಗುರುಪಾದಯ್ಯ ಕೆ.ಎಂ.

ಶಾಮನೂರಿನಲ್ಲಿರುವ ಸ್ಮಶಾನದ ಒಳಗೆ ಹಾದು ಹೋಗುವ ಚರಂಡಿಯಲ್ಲಿ ಒಳ ಚರಂಡಿ ನೀರು ಬರುತ್ತಿದ್ದರಿಂದ ಗಬ್ಬು ನಾರುತ್ತಿತ್ತು. ಇರದಿಂದ ಎಚ್ಚೆತ್ತುಕೊಂಡ ಪಾಲಿಕೆ ನೀರು ಬರುವುದನ್ನು ನಿಲ್ಲಿಸಿದೆ. ಆದರೂ ಅಲ್ಲಿ ದುರ್ನಾತ ಬೀರುತ್ತಲೇ ಇದೆ.

ರಾಮನಗರದಲ್ಲಿರುವ ಸ್ಮಶಾನಗಳಲ್ಲಿಯೂ ನೀರಿನ ಸೌಲಭ್ಯ, ಕಾಂಪೌಂಡ್ ಇದೆ. ಇಲ್ಲಿಯೂ ಹಂದಿ, ಬಿಡಾಡಿ ದನಗಳ ಹಾವಳಿ ಇದೆ. ಕಸ ಸುಡುವುದೂ ನಿರಂತರವಾಗಿ ನಡೆಯುತ್ತಿದೆ. ಈ ಎಲ್ಲಾ ಸಮಸ್ಯೆಗಳು ಎಂದು ಮುಕ್ತಿ ಪಡೆಯುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು