ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹರಿಹರ | ಪರಸ್ಪರ ಸಹಕಾರದಿಂದ ಅಭಿವೃದ್ಧಿಗೆ ಗಮನಹರಿಸಿ: ಜಿಲ್ಲಾಧಿಕಾರಿ ಸೂಚನೆ

Published 3 ಆಗಸ್ಟ್ 2024, 14:07 IST
Last Updated 3 ಆಗಸ್ಟ್ 2024, 14:07 IST
ಅಕ್ಷರ ಗಾತ್ರ

ಹರಿಹರ: ಸರ್ಕಾರದ ಸೌಲಭ್ಯಗಳನ್ನು ತಳಮಟ್ಟದ ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರಕ್ಕೆ ಶನಿವಾರ ಅನಿರೀಕ್ಷಿತ ಭೇಟಿ ನೀಡಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕಿನ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ‘ಸರ್ಕಾರ ಮತ್ತು ಜನರ ನಡುವೆ ಕೊಂಡಿಯಾಗಿ ಸರ್ಕಾರದ ನೌಕರರು ಕೆಲಸ ಮಾಡಬೇಕಿದೆ. ಸರ್ಕಾರದ ಸವಲತ್ತು, ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ ಅವರ ಅಭಿವೃದ್ಧಿಗೆ ಗಮನಹರಿಸಬೇಕು’ ಎಂದರು.

ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಒಂದು ಇಲಾಖೆಯವರು ಇನ್ನೊಂದು ಇಲಾಖೆಯ ಕಡೆ ಬೊಟ್ಟು ಮಾಡುವುದನ್ನು ಬಿಟ್ಟು ತಾಲ್ಲೂಕಿನ ಎಲ್ಲಾ ಇಲಾಖಾಧಿಕಾರಿಗಳು ಒಂದು ತಂಡವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

‘ಡೆಂಗಿ ತಡೆಗೆ ಆರೋಗ್ಯ ಹಾಗೂ ಸ್ಥಳೀಯ ಸಂಸ್ಥೆಗಳು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು, ಸ್ವಚ್ಚತೆಗೆ ಆದ್ಯತೆ ನೀಡಬೇಕು. ಇತ್ತೀಚೆಗೆ ಗುತ್ತೂರು ಗ್ರಾಮದಲ್ಲಿ ಪರಿಶಿಷ್ಟರಿಗೆ  ರುದ್ರಭೂಮಿ ಇಲ್ಲದ ಕಾರಣಕ್ಕೆ ನದಿಯಲ್ಲಿಯೇ ಶವ ಸಂಸ್ಕಾರ ಮಾಡಿದ್ದನ್ನು ಪತ್ರಿಕೆಗಳಲ್ಲಿ ಗಮನಿಸಿದ್ದೇನೆ. ಆದಷ್ಟು ಬೇಗ ಆ ಗ್ರಾಮಕ್ಕೆ ರುದ್ರಭೂಮಿ ಸೌಲಭ್ಯ ದೊರಕಿಸಬೇಕು ಎಂದು ತಾಕೀತು ಮಾಡಿದರು. 

ಪ್ರಸ್ತುತ ಹಂಗಾಮಿನಲ್ಲಿ ಮಳೆ ಹೆಚ್ಚಾಗುತ್ತಿದೆ. ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಜನ, ಜಾನುವಾರು, ಕೃಷಿ ಬೆಳೆಗಳಿಗೆ ನಷ್ಟವಾಗದಂತೆ ಎಚ್ಚರ  ವಹಿಸಬೇಕು, ಆಸ್ತಿ ಪಾಸ್ತಿ, ಬೆಳೆಗಳಿಗೆ ನಷ್ಟವಾಗಿದ್ದರೆ ವರದಿ ಕಳಿಸಿ. ಅಗತ್ಯ ಇರುವೆಡೆ ಕಾಳಜಿ ಕೇಂದ್ರ ಆರಂಭಿಸಿರಿ ಎಂದು ಸಲಹೆ ನೀಡಿದರು. 

ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ಎಂ.ಗುರುಬಸವರಾಜ್, ಪೌರಾಯುಕ್ತ ಕೆ.ಸುಬ್ರಹ್ಮಣ್ಯ ಶ್ರೇಷ್ಠಿ, ತೋಟಗಾರಿಕೆ ಇಲಾಖೆ ಎಡಿ ಶಶಿಧರ ಸ್ವಾಮಿ, ಕೃಷಿ ಇಲಾಖೆ ಎಡಿ ಎ.ನಾರನಗೌಡ, ಪಶು ಸಂಗೋಪನ ಇಲಾಖೆ ಎಡಿ ಟಿ.ಕೆ.ಸಿದ್ದೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ದುರುಗಪ್ಪ, ಸಿಡಿಪಿಒ ಎಂ.ಪೂರ್ಣಿಮಾ, ಗ್ರಾಮಾಂತರ ಪಿಎಸ್‌ಐ ಮಂಜುನಾಥ ಕುಪ್ಪೇಲೂರ್, ನಗರ ಠಾಣೆ ಪಿಎಸ್‌ಐ ಶ್ರೀಪತಿ ಗಿನ್ನಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಬ್ದುಲ್ ಖಾದರ್, ಎಪಿಎಂಸಿ ಕಾರ್ಯದರ್ಶಿ ವಿದ್ಯಾಶ್ರೀ, ಕೆಆರ್‌ಐಡಿಎಲ್ ಎಇಇ ಶಂಕರ್ ನಾಯಕ್, ಗ್ರಂಥಪಾಲಕ ರವಿಕುಮಾರ್ ಗಣಪೂರ್ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT