ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಜಿಲ್ಲಾ ಆಸ್ಪತ್ರೆಯೇ ರೋಗಗ್ರಸ್ಥ!

Published 8 ಜೂನ್ 2023, 5:48 IST
Last Updated 8 ಜೂನ್ 2023, 5:48 IST
ಅಕ್ಷರ ಗಾತ್ರ

ರಾಮಮೂರ್ತಿ ಪಿ.

ದಾವಣಗೆರೆ: ಚಿಕಿತ್ಸೆ ಅರಸಿ ದೂರದ ಊರುಗಳಿಂದ ನಿತ್ಯ ನೂರಾರು ಸಂಖ್ಯೆಯಲ್ಲಿ ಬರುವ ರೋಗಿಗಳ ಪಾಲಿಗೆ ಸಂಜೀವಿನಿಯಾಗಬೇಕಿದ್ದ ಆಸ್ಪತ್ರೆಯೇ ಈಗ ರೋಗಗ್ರಸ್ಥವಾಗಿದೆ!

ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯು ಅವ್ಯವಸ್ಥೆಯ ಆಗರವಾಗಿದೆ. ಶೌಚಾಲಯಗಳು ಸ್ವಚ್ಛತೆ ಕಾಣದೆ ನಾರುತ್ತಿವೆ. ರೋಗಿಗಳು ಹಾಗೂ ಅವರ ಆರೈಕೆಯಲ್ಲಿ ತೊಡಗಿರುವವರು ಕೈತೊಳೆಯಬೇಕೆಂದರೆ ನೀರಿಲ್ಲ. ಕಟ್ಟಡವೂ ಶಿಥಿಲಾವಸ್ಥೆಯಲ್ಲಿದ್ದು, ಅಲ್ಲಲ್ಲಿ ಗೋಡೆಗಳೂ ಬಿರುಕು ಬಿಟ್ಟಿವೆ.

ಹೊರ ರೋಗಿ ಚೀಟಿ ಪಡೆಯಲು ಪ್ರತಿ ದಿನವೂ ಜನ ಸಾಲುಗಟ್ಟಿ ನಿಲ್ಲುವುದು, ಎಕ್ಸ್‌–ರೇ, ಸ್ಕ್ಯಾನಿಂಗ್‌ ಕೊಠಡಿಗಳ ಮುಂದೆ ನಾಮುಂದು– ತಾಮುಂದು ಎಂದು ರೋಗಿಗಳು ವಾಗ್ವಾದ ನಡೆಸುವುದು ಸಾಮಾನ್ಯವಾಗಿಬಿಟ್ಟಿದೆ.

ನಗರ ಹಾಗೂ ಜಿಲ್ಲೆಯ ಗ್ರಾಮೀಣ ಭಾಗದವರು ಮಾತ್ರವಲ್ಲದೇ ಹಾವೇರಿ, ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದಲೂ ಈ ಆಸ್ಪತ್ರೆಗೆ ರೋಗಿಗಳು ಬರುತ್ತಾರೆ.

ಹೊರ ರೋಗಿಗಳ ವಿಭಾಗದಲ್ಲಿ ದಿನವೊಂದಕ್ಕೆ 1,000 ದಿಂದ 1,200 ಮಂದಿ ಚಿಕಿತ್ಸೆ ಪಡೆಯುತ್ತಾರೆ. ವೈದ್ಯರು ಹಾಗೂ ಶುಶ್ರೂಷಕರ ಕೊರತೆಯಿಂದಾಗಿ ಗುಣಮಟ್ಟದ ಚಿಕಿತ್ಸೆಯು ದೂರದ ಮಾತಾಗಿದೆ.

1976ರಲ್ಲಿ ನಿರ್ಮಾಣಗೊಂಡಿದ್ದ ಆಸ್ಪತ್ರೆಯ ಕಟ್ಟಡವು ಶಿಥಿಲಾವಸ್ಥೆಯಲ್ಲಿದೆ. ಸೆಂಟ್ರಲ್‌ ಬ್ಲಾಕ್‌, ಓ.ಟಿ ಬ್ಲಾಕ್, ಉತ್ತರ ಬ್ಲಾಕ್‌ನ ಚಾವಣಿ ಹಾಗೂ ಗೋಡೆಗಳಲ್ಲಿ ಕೆಲವೆಡೆ ಕಬ್ಬಿಣದ ಸರಳುಗಳು ಹೊರಕಾಣುತ್ತಿವೆ.

‘ಆಸ್ಪತ್ರೆಯಲ್ಲಿನ ಒಳಚರಂಡಿಯು ಆಗಾಗ ಕಟ್ಟಿಕೊಳ್ಳುವುದರಿಂದ ಇಲ್ಲಿನ ವೈದ್ಯರು ಹಾಗೂ ರೋಗಿಗಳು ದುರ್ವಾಸನೆ ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಆಸ್ಪತ್ರೆಯ ಶೌಚಾಲಯಗಳಲ್ಲಿ ಅಳವಡಿಸಲಾಗಿರುವ ಕೈತೊಳೆಯುವ ಬೇಸಿನ್‌ಗಳಿಗೆ ನೀರಿನ ಸೌಲಭ್ಯ ಕಲ್ಪಿಸಿಲ್ಲ. ತೊಟ್ಟಿಯೊಂದರಲ್ಲಿ ನೀರನ್ನು ಶೇಖರಿಸಿಟ್ಟಿದ್ದು, ರೋಗಿಗಳು ಅದರಲ್ಲೇ ಕೈತೊಳೆಯುವ ಸ್ಥಿತಿ ಇದೆ.

ಆಸ್ಪತ್ರೆಯಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳ ಕೊರತೆ ಇದೆ. ಎಕ್ಸ್‌–ರೇ ಹಾಗೂ ಎಂಆರ್‌ಐ ಸ್ಕ್ಯಾನಿಂಗ್‌ ಯಂತ್ರಗಳು ಒಂದೊಂದು ಮಾತ್ರ ಇವೆ. ಹೀಗಾಗಿ ಎಕ್ಸ್‌–ರೇ, ಸ್ಕ್ಯಾನಿಂಗ್‌ ವಿಭಾಗಗಳ ಮುಂದೆ ವಿಪರೀತ ಜನದಟ್ಟಣೆ ಉಂಟಾಗುತ್ತಿದೆ.

‘ಮೂರ್ನಾಲ್ಕು ತಾಸು ಸಾಲಿನಲ್ಲಿ ನಿಲ್ಲಬೇಕಾದ ಸ್ಥಿತಿ ಇರುವುದರಿಂದ ದೂರದ ಊರುಗಳಿಂದ ಬರುವ ರೋಗಿಗಳಿಗೆ ಸಮಸ್ಯೆ ಆಗುತ್ತಿದೆ. ಬೆಳಿಗ್ಗೆ ಬಂದು ನಿಂತವರು ಮಧ್ಯಾಹ್ನ ಕಳೆದರೂ ಎಕ್ಸ್‌–ರೇ ಮಾಡಿಸಲು ಆಗುತ್ತಿಲ್ಲ’ ಎಂದು ದಾವಣಗೆರೆಯ ಮಹಮ್ಮದ್ ಆರಿಫ್ ಹಾಗೂ ಕೋಲ್ಕುಂಟೆಯ ರತ್ನಮ್ಮ ದೂರಿದರು.

‘ಕೈ ಮೇಲೆ ಗಡ್ಡೆಯಾಗಿದ್ದು, ಸ್ಕ್ಯಾನಿಂಗ್ ಮಾಡಿಸಲು ಬಂದಿದ್ದೇನೆ. ಇಂದು ಹೆಸರು ನೋಂದಾಯಿಸಿದರೆ ಮತ್ತೊಂದು ದಿನ ಬರಲು ಹೇಳುತ್ತಾರೆ. ಮತ್ತೆ ಬಂದು ಸ್ಕ್ಯಾನಿಂಗ್ ಮಾಡಿಸಿಕೊಳ್ಳಬೇಕಿದೆ’ ಎಂದು ಬೇಸರದಿಂದಲೇ ಹೇಳಿದರು ಹುಲಿಕಟ್ಟೆಯ ಚಂದ್ರಪ್ಪ.

ಆಸ್ಪತ್ರೆ ಆವರಣದಲ್ಲಿರುವ ಓವರ್‌ಹೆಡ್‌ ಟ್ಯಾಂಕ್‌ ಶಿಥಿಲಗೊಂಡಿದ್ದು, ಬೀಳುವ ಸ್ಥಿತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT