ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ವೀರಶೈವ–ಲಿಂಗಾಯತ ಮಹಾ ಅಧಿವೇಶನಕ್ಕೆ ದೇವನಗರಿ ಸಿಂಗಾರ

Published 23 ಡಿಸೆಂಬರ್ 2023, 6:31 IST
Last Updated 23 ಡಿಸೆಂಬರ್ 2023, 6:31 IST
ಅಕ್ಷರ ಗಾತ್ರ

ದಾವಣಗೆರೆ: ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನ ಡಿ.23 ಹಾಗೂ 24ರಂದು ಎಂಬಿಎ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಮಧ್ಯ ಕರ್ನಾಟಕದ ಭಾಗದ ದಾವಣಗೆರೆ ಸಜ್ಜುಗೊಂಡಿದೆ.

ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಹಾ ಅಧಿವೇಶನಕ್ಕೆ ಶುಭ ಕೋರುವ ಫ್ಲೆಕ್ಸ್ ಹಾಗೂ ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ. ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ನೆರೆಯ ಮಹಾರಾಷ್ಟ್ರ, ಕೇರಳ ಹಾಗೂ ಆಂಧ್ರಪ್ರದೇಶಗಳಿಂದಲೂ ಜನರು ಆಗಮಿಸುವ ನಿರೀಕ್ಷೆ ಇದೆ.

ಬೃಹತ್ ಪೆಂಡಾಲ್:

400 ಮೀಟರ್ ಉದ್ದ ಹಾಗೂ 220 ಅಡಿ ಅಗಲದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದ್ದು, ಎಸ್‌. ನಿಜಲಿಂಗಪ್ಪ ಪ್ರಧಾನ ವೇದಿಕೆಯಲ್ಲಿ 60 ಅಡಿ ಉದ್ದ ಹಾಗೂ 100 ಅಡಿ ಅಗಲ ಗಣ್ಯರು ಕುಳಿತುಕೊಳ್ಳಲು ಮೀಸಲಿಡಲಾಗಿದೆ. ಈ ವೇದಿಕೆಯಲ್ಲಿ 3 ಭಾಗಗಳು ಇರಲಿದ್ದು, ಮಠಾಧೀಶರು, ಗಣ್ಯರು, ಸಚಿವರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಜೆ.ಎಚ್. ಪಟೇಲ್ ಹೆಸರಿನಲ್ಲಿ ಮತ್ತೊಂದು ವೇದಿಕೆ ಸಿದ್ಧಪಡಿಸಿದ್ದು, ಇಲ್ಲಿ ಗೋಷ್ಠಿಗಳು ನಡೆಯಲಿವೆ. ಎರಡು ಕಡೆ ಸೇರಿ ಸುಮಾರು 40 ಸಾವಿರ ಜನರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ವೇದಿಕೆಯ ಹೊರಗಡೆ 10 ಕಡೆ ಎಲ್‌ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿದೆ.

120 ಮಳಿಗೆಗಳಲ್ಲಿ ಪ್ರದರ್ಶನ:

ಮಹಾ ಅಧಿವೇಶನದ ಅಂಗವಾಗಿ ಬೃಹತ್ ಪೆಂಡಾಲ್ ತುದಿಯಲ್ಲಿ 120 ಮಳಿಗೆಳನ್ನು ಹಾಕಲಾಗಿದ್ದು, ಕೃಷಿ, ಕೈಗಾರಿಕೆ ಸಂಬಂಧಪಟ್ಟ, ಶರಣ ಹಾಗೂ ರೇಣುಕಾ ಪರಂಪರೆಯನ್ನು ಬಿಂಬಿಸುವ ಚಿತ್ರಗಳು, ಪುಸ್ತಕಗಳ ಪ್ರದರ್ಶನ ನಡೆಯಲಿದೆ.

ಅಧಿವೇಶನಕ್ಕೆ ವಿವಿಧ ಬಗೆಯ ಭೋಜನ:

‘ಅಧಿವೇಶನದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಾಯಂಕಾಲ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಗೋದಿ ಪಾಯಸ, ಲಡ್ಡು, ರೊಟ್ಟಿ, ಚಟ್ನಿ, ಅನ್ನ ಸಾಂಬಾರ್, ಬಜ್ಜಿ, ಪಲ್ಯ, ಚಿತ್ರಾನ್ನ ಇರಲಿದೆ. ಬೆಳಿಗ್ಗೆಯ ಉಪಾಹಾರಕ್ಕೆ ಉಪ್ಪಿಟ್ಟು ಹಾಗೂ ಕೇಸರಿಬಾತ್‌ಗಳನ್ನು ನೀಡಲಾಗುವುದು’ ಎಂದು ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನೆ ಶಿವಕುಮಾರ್ ತಿಳಿಸಿದರು.

ಹೊರ ಜಿಲ್ಲೆಗಳಿಂದ ಬರುವ ಜನರಿಗೆ ಕಲ್ಯಾಣ ಮಂಟಪ, ಖಾಸಗಿ ಶಾಲಾ–ಕಾಲೇಜು, ಹಾಸ್ಟೆಲ್‌ಗಳು, ಸಮುದಾಯ ಭವನ, ಕಲ್ಯಾಣ ಮಂಟಪಗಳು, ವಸತಿ ಗೃಹಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ಮಹಾ ಅಧಿವೇಶನ, ಅಧ್ಯಕ್ಷರ ಸೇವಾವಧಿ ವಿವರ

ಅಧಿವೇಶನ ಸಂಖ್ಯೆ;ಅಧ್ಯಕ್ಷರ ಹೆಸರು;ಅಧಿವೇಶನ ನಡೆದ ಸ್ಥಳ; ಅವಧಿ

1;ಶಿರಸಂಗಿ ಲಿಂಗರಾಜ;ಧಾರವಾಡ;1904–1905

2;ಶಿರಸಂಗಿ ಲಿಂಗರಾಜ;ಬೆಂಗಳೂರು;1905–1906

3;ಕೆ.ಪಿ.ಪುಟ್ಟಣ್ಣ ಚೆಟ್ಟಿ;ಸೊಲ್ಲಾಪುರ;1906–1907

4;ರಾಜಾಲಖಮನಗೌಡ;ಬಾಗಲಕೋಟೆ;1907–1909

5;ವಾರದ ಮಲ್ಲಪ್ಪ;ಬಳ್ಳಾರಿ;1909–1910

6;ಮಾಮಲೆ ದೇಸಾಯಿ;ಬೆಳಗಾವಿ;1910–1911

7;ಅರಟಾಳ ರುದ್ರಗೌಡ;ನಿಪ್ಪಾಣಿ;1911–1917

8;ಕೆ.ಪಿ.ಪುಟ್ಟಣ್ಣ ಚೆಟ್ಟಿ;ದಾವಣಗೆರೆ;1917–1920

9;ಶಾಂತವೀರಪ್ಪ ಮೆಣಸಿನಕಾಯಿ;ಬೀರೂರು;1920–1927

10;ಸಿದ್ಧಪ್ಪ ಕಂಬಳಿ;ಬೆಂಗಳೂರು;1927–1933

11;ಡಾ.ಫಕ್ಕೀರಪ್ಪ ಗುರುಬಸಪ್ಪ ಹಳಕಟ್ಟಿ;ಧಾರವಾಡ;1933–1937

12;ಸಿದ್ದಪ್ಪ ಕಂಬಳಿ;ರಾಯಚೂರು;1937–1938

13;ಎಸ್.ಎಸ್.ಬಸವನಾಳ್‌;ಹುಬ್ಬಳ್ಳಿ;1938–1940

14;ಎಂ.ಎಸ್.ಸರದಾರ್;ಕುಂಭಕೋಣಂ;1940–1945

15;ಸಿ.ಸಿ.ಹುಲಕೋಟಿ;ತುಮಕೂರು;1945–1955

16;ಬಂಥನಾಳ ಸಂಗನಬಸವ ಸ್ವಾಮೀಜಿ;ಬಸವಕಲ್ಯಾಣ;1955–1960

17;ಡಾ.ಡಿ.ಸಿ. ಪಾವಟಿ;ಶಿವಯೋಗ ಮಂದಿರ;1960–1969

18;ಡಾ.ಶಿವಕುಮಾರ ಸ್ವಾಮೀಜಿ;ಮುಂಬೈ;1969–1973

19;ಜೆ.ಬಿ.ಮಲ್ಲಾರಾಧ್ಯ;ಬೆಂಗಳೂರು;1973–1982

20;ಈಶ್ವರ ಮಲ್ಲಪ್ಪ ಮುಗ್ದುಂ;ಮೈಸೂರು;1983–1992

21;ಶರಣಬಸವಪ್ಪ ಅಪ್ಪಾ; ಬೆಳಗಾವಿ;1992–1999

22: ಭೀಮಣ್ಣ ಖಂಡ್ರೆ;ಮೈಸೂರು;1999–2011

23;ಶಾಮನೂರು ಶಿವಶಂಕರಪ್ಪ;ಶ್ರೀಶೈಲ (ಆಂಧ್ರಪ್ರದೇಶ);2012

24;ಶಾಮನೂರು ಶಿವಶಂಕರಪ್ಪ;ದಾವಣಗೆರೆ;2023

ಅಧಿವೇಶನದ ಲೋಗೊ
ಅಧಿವೇಶನದ ಲೋಗೊ
ಅಡುಗೆ ತಯಾರಿಸಲು 300–400 ಜನ ಬಾಣಸಿಗರು ಇದ್ದು ಊಟಕ್ಕಾಗಿ 100 ಕೌಂಟರ್‌ಗಳನ್ನು ತೆರೆಯಲಾಗಿದೆ. ಊಟ ಮಾಡಲು ವಿಶಾಲ ಜಾಗವಿದೆ
ಅಣಬೇರು ರಾಜಣ್ಣ ಮಹಾಸಭಾದ ಉಪಾಧ್ಯಕ್ಷ
106 ವರ್ಷಗಳ ಬಳಿಕ ದಾವರಣಗೆರೆಯಲ್ಲಿ ವೀರಶೈವ–ಲಿಂಗಾಯತ ಮಹಾ ಅಧಿವೇಶನ ನಡೆಯುತ್ತಿದ್ದು ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ. 2 ಸಾವಿರ ಸ್ವಯಂ ಸೇವಕರು ಕೆಲಸ ನಿರ್ವಹಿಸುತ್ತಿದ್ದಾರೆ.
ದೇವರಮನೆ ಶಿವಕುಮಾರ್ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ
106 ವರ್ಷಗಳ ಬಳಿಕ ದಾವಣಗೆರೆಯಲ್ಲಿ ಅಧಿವೇಶನ
ದಾವಣಗೆರೆಯಲ್ಲಿ 106 ವರ್ಷಗಳ ಬಳಿಕ ವೀರಶೈವ –ಲಿಂಗಾಯತ ಮಹಾ ಅಧಿವೇಶನ ನಡೆಯುತ್ತಿದೆ. ಈ ಹಿಂದೆ 1917ರಲ್ಲಿ ಕೆ.ಪಿ.ಪುಟ್ಟಣ ಚೆಟ್ಟಿ ಅಧ್ಯಕ್ಷತೆಯಲ್ಲಿ ನಡೆದಿತ್ತು. 1904ರಲ್ಲಿ ಶಿರಸಂಗಿ ಲಿಂಗರಾಜ ಅವರ ಅಧ್ಯಕ್ಷತೆಯಲ್ಲಿ ಧಾರವಾಡದಲ್ಲಿ ಮೊದಲ ಅಧಿವೇಶನ ನಡೆದಿತ್ತು. ಈಗ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ.
ಬೆಣ್ಣೆ ದೋಸೆಗೆ ಹೆಚ್ಚಿನ ದರ: ಆಕ್ಷೇಪ
ದಾವಣಗೆರೆ: ದಾವಣಗೆರೆ ಬೆಣ್ಣೆದೋಸೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬ್ರಾಂಡಿಂಗ್ ಮಾಡುವ ಉದ್ದೇಶದಿಂದ ಆರಂಭಿಸುವ ದೋಸೆ ಉತ್ಸವದಲ್ಲಿ ಒಂದು ಬೆಣ್ಣೆಗೆ ₹60 ದರ ವಿಧಿಸಿರುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಬ್ರಾಂಡಿಂಗ್ ಮಾಡುವಾಗ ಕಡಿಮೆ ದರಕ್ಕೆ ನೀಡಬೇಕು. ಈಗಾಗಲೇ ಹೋಟೆಲ್‌ಗಳಲ್ಲಿ ಒಂದು ಬೆಣ್ಣೆ ದೋಸೆಗೆ ₹ 50 ದರವಿದೆ. ಆದರೆ ಇಲ್ಲಿ ₹60 ದರ ವಿಧಿಸಲಾಗಿದೆ. ಜಿಲ್ಲೆಯ ಬೇರೆ ಬೇರೆ ಭಾಗಗಳಿಂದ ಬರುವ ಜನರಿಗೆ ಬೆಣ್ಣೆದೋಸೆ ದುಬಾರಿ ಎಂಬ ಸಂದೇಶ ರವಾನೆಯಾಗುತ್ತದೆ. ₹ 50ಕ್ಕೆ ಒಂದು ಬೆಣ್ಣೆದೋಸೆ ನೀಡಬೇಕು’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶಿವಕುಮಾರ ಕಣಸೋಗಿ ಆಗ್ರಹಿಸಿದ್ದಾರೆ. ದೋಸೆ ಉತ್ಸವಕ್ಕೆ ಡಿ.23ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಚಾಲನೆ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT