ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ನೇತ್ರದಾನಕ್ಕೆ ಮುಂದಾದ ವೈದ್ಯ ವಿದ್ಯಾರ್ಥಿಗಳು

ಬಾರದ ಶಿಷ್ಯವೇತನ: ನಾಲ್ಕನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ
Last Updated 2 ಜುಲೈ 2020, 9:22 IST
ಅಕ್ಷರ ಗಾತ್ರ

ದಾವಣಗೆರೆ: ಹದಿನಾರು ತಿಂಗಳಿಂದ ಬಾಕಿ ಇರುವ ಶಿಷ್ಯವೇತನ ಬಿಡುಗಡೆಗೆ ಒತ್ತಾಯಿಸಿ ನಗರದ ಜಯದೇವ ವೃತ್ತದಲ್ಲಿ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಗುರುವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆಯ ಭಾಗವಾಗಿ ವೈದ್ಯ ವಿದ್ಯಾರ್ಥಿಗಳು ಈ ದಿನ ನೇತ್ರದಾನ ಶಿಬಿರವನ್ನು ಸ್ಥಳದಲ್ಲೇ ಆಯೋಜಿಸಿದ್ದರು. ಬೆಳಿಗ್ಗೆ ಜಯದೇವ ವೃತ್ತಕ್ಕೆ ಬಂದು ಪ್ರತಿಭಟನೆ ಆರಂಭಿಸಿದ ವಿದ್ಯಾರ್ಥಿಗಳು, ಒಬ್ಬಬ್ಬರಾಗಿ ನೇತ್ರದಾನ ಮಾಡುವುದಾಗಿ ವಾಗ್ದಾನ ಮಾಡಿ ಅರ್ಜಿ ಭರ್ತಿ ಮಾಡುತ್ತಿರುವುದು ಕಂಡುಬಂತು. 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮರಣದ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡುವುದಾಗಿ ವಾಗ್ದಾನ ಮಾಡುವ ಮೂಲಕ ಅಂಧರಿಗೆ ಬೆಳಕಾಗಲು ಮುಂದೆ ಬಂದರು.

‘ನೇತ್ರದಾನ ಶ್ರೇಷ್ಠ ದಾನ’, ‘ಸತ್ತ ಮೇಲೂ ಜಗವ ನೋಡಿ, ನೇತ್ರದಾನ ಮಾಡಿ’ ಎಂಬಿತ್ಯಾದಿ ಘೋಷಣೆಗಳಿರುವ ಫಲಕಗಳನ್ನು ಹಿಡಿದು ನೇತ್ರದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಿದರು. ‘ಜೀವ ಉಳಿಸುವ ವೈದ್ಯರ ಜೀವ ಹಿಂಡುವ ಸರ್ಕಾರ’ ಎಂಬ ಘೋಷಣೆ ಇರುವ ಫಲಕಗಳನ್ನು ಹಿಡಿದು ಆಡಳಿತಶಾಹಿಗಳ ವಿರುದ್ಧ ಆಕ್ರೋಶವನ್ನೂ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ವೈದ್ಯ ವಿದ್ಯಾರ್ಥಿ ಡಾ. ಜಿ.ಎ. ಸುಧಾಕರ, ‘ನಾಲ್ಕು ದಿನಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಹಾಗೂ ಅಧಿಕಾರಿಗಳು ನಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ನಾಲ್ಕೈದು ದಿನಗಳಲ್ಲಿ ಸಮಸ್ಯೆ ಪರಿಹರಿಸುತ್ತೇವೆ ಎಂದು ಬರಿ ಮೌಖಿಕವಾಗಿ ಭರವಸೆಯನ್ನು ನೀಡುತ್ತಿದ್ದಾರೆಯೇ ಹೊರತು ಪರಿಹಾರ ಕಂಡುಕೊಳ್ಳುತ್ತಿಲ್ಲ. ಲಿಖಿತವಾಗಿ ಭರವಸೆ ನೀಡದೇ ಇರುವುದರಿಂದ ಪ್ರತಿಭಟನೆ ಮುಂದುವರಿಸಿದ್ದೇವೆ’ ಎಂದು ತಿಳಿಸಿದರು.

ಸಿಎಂ ನೇತೃತ್ವದಲ್ಲಿ ಸಭೆ: ಬುಧವಾರ ಸಂಜೆ 6 ಗಂಟೆಯೊಳಗೆ ಮುಷ್ಕರವನ್ನು ಹಿಂದಕ್ಕೆ ಪಡೆದುಕೊಳ್ಳದಿದ್ದರೆ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕ್ರಮ ಕೈಗೊಳ್ಳುವುದುವಾಗಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಎರಡನೇ ಎಚ್ಚರಿಕೆ ಪತ್ರವನ್ನು ನೀಡಿದ್ದರಿಂದ ವಿದ್ಯಾರ್ಥಿಗಳು ಬಂಧನದ ಭೀತಿಯಲ್ಲಿದ್ದರು.

ಮಧ್ಯಾಹ್ನದ ಹೊತ್ತಿಗೆ ಸ್ಥಳಕ್ಕೆ ಬಂದ ನಗರ ಉಪವಿಭಾಗದ ಡಿವೈಎಸ್‌ಪಿ ನಾಗೇಶ್‌ ಐತಾಳ, ‘ಶಿಷ್ಯವೇತನ ಸಮಸ್ಯೆ ಕುರಿತು ಚರ್ಚಿಸಲು ಸೋಮವಾರ (ಜುಲೈ 6) ಬೆಂಗಳೂರಿನಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂಬ ಸಂದೇಶ ರಾಜ್ಯ ಸರ್ಕಾರದಿಂದ ಜಿಲ್ಲಾಡಳಿತಕ್ಕೆ ಬಂದಿದೆ. ಈ ಬಗ್ಗೆ ನಿಮಗೆ ಸಂದೇಶ ಮುಟ್ಟಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೂಚಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ. ಶೀಘ್ರದಲ್ಲೇ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಇದೆ’ ಎಂದು ವಿದ್ಯಾರ್ಥಿ ಮುಖಂಡರಿಗೆ ತಿಳಿಸಿದರು.

‘ಕೋವಿಡ್‌ ಆಸ್ಪತ್ರೆಯಲ್ಲಿನ ವೈದ್ಯಕೀಯ ಸೇವೆಗೆ ತೊಂದರೆಯಾಗದಂತೆ ನಾವು ಪಾಳಿ ಪ್ರಕಾರ ಪ್ರತಿಭಟನೆ ನಡೆಸುತ್ತಿದ್ದೇವೆ. ಬಿಸಿಲಿನಿಂದ ಬಳಲಿ ಕೆಲ ವಿದ್ಯಾರ್ಥಿಗಳು ತಲೆ ಸುತ್ತು ಬೀಳುತ್ತಿದ್ದಾರೆ. ನೆರಳಿನ ವ್ಯವಸ್ಥೆ ಮಾಡಿಕೊಳ್ಳಲು ಶಾಮಿಯಾನ ಹಾಕಲು ಪರವಾನಗಿ ನೀಡಿ’ ಎಂದು ವಿದ್ಯಾರ್ಥಿ ಮುಖಂಡರು ಕೋರಿದಾಗ ಪೊಲೀಸ್‌ ಅಧಿಕಾರಿಗಳು ಮೌಖಿಕವಾಗಿ ಒಪ್ಪಿಗೆ ಸೂಚಿಸಿದರು. ಇದರಿಂದ ಹರ್ಷಗೊಂಡ ವಿದ್ಯಾರ್ಥಿಗಳು ಪೊಲೀಸರ ಪರ ಘೋಷಣೆಗಳನ್ನು ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT