ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ಬಿಜೆಪಿ ನನ್ನ ನಡುವೆ ಸ್ಪರ್ಧೆ: ಜಿ.ಬಿ.ವಿನಯ್‌ಕುಮಾರ್

Published 23 ಏಪ್ರಿಲ್ 2024, 14:43 IST
Last Updated 23 ಏಪ್ರಿಲ್ 2024, 14:43 IST
ಅಕ್ಷರ ಗಾತ್ರ

ದಾವಣಗೆರೆ: ‘ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧೆ ಲೆಕ್ಕಕ್ಕಿಲ್ಲ. ಹೀಗಾಗಿ ಈ ಬಾರಿ ಬಿಜೆಪಿ ಹಾಗೂ ಪಕ್ಷೇತರ ನನ್ನ ನಡುವೆ ನೇರ ಸ್ಪರ್ಧೆ ನಡೆಯಲಿದೆ’ ಎಂದು ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್‌ಕುಮಾರ್ ಹೇಳಿದರು.

‘ಕಾಂಗ್ರೆಸ್ ಅಭ್ಯರ್ಥಿ ಕುಟುಂಬದಲ್ಲಿ ಈಗಾಗಲೇ ಒಬ್ಬರು ಸಚಿವ, ಒಬ್ಬ ಶಾಸಕರು ಇದ್ದಾರೆ. ಈಗ ಮೊತ್ತೊಬ್ಬರು ಸಂಸದರಾಗಲು ಹೊರಟಿದ್ದಾರೆ. ಇದಕ್ಕೆ ಜನರ ವಿರೋಧವಿದೆ. ಪಕ್ಷೇತರನಾಗಿ ನಾನು ಗೆಲ್ಲಲು ಸಾಧ್ಯವೇ, ಅದೂ ಲೋಕಸಭೆ ಚುನಾವಣೆಯಲ್ಲಿ ಹೇಗೆ ಸಾಧ್ಯ ಎಂದು ಕೆಲ ಮುಖಂಡರು ಮಾತನಾಡುತ್ತಿದ್ದಾರೆ. ಆದರೆ, ಕುಟುಂಬ ರಾಜಕಾರಣ ಇರುವ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವ ಗೆಲ್ಲಿಸುವ ಪ್ರಯತ್ನ ನನ್ನದು. ಗೆಲ್ಲಿಸುವ ಜವಾಬ್ದಾರಿ ಕ್ಷೇತ್ರದ ಮತದಾರರ ಮೇಲಿದೆ’ ಎಂದು ಕಾರ್ಯಕರ್ತರ ಸಭೆಗೂ ಮುನ್ನ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ದಾವಣಗೆರೆ ಲೋಕಸಭೆ ಕ್ಷೇತ್ರದ ಕಣದಲ್ಲಿರುವುದು ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಲ್ಲ, ಶಾಮನೂರು ಮತ್ತು ಸಿದ್ದೇಶ್ವರ ಕುಟುಂಬದ ಅಭ್ಯರ್ಥಿಗಳು. ಎರಡೂ ಕುಟುಂಬದವರು ಪಕ್ಷವನ್ನು ಕೇವಲ ತೋರಿಕೆಗೆ ಇರಿಸಿಕೊಂಡಿದ್ದಾರೆ. ಹೀಗಾಗಿ ಅವರಿಬ್ಬರೂ ಪಕ್ಷದ ಅಭ್ಯರ್ಥಿಗಳು ಎನ್ನುವುದಕ್ಕಿಂತ ಕುಟುಂಬದ ಅಭ್ಯರ್ಥಿಗಳು ಎನ್ನುವುದು ಸೂಕ್ತ. ಈ ಕುಟುಂಬದ ಅಭ್ಯರ್ಥಿಗಳ ವಿರುದ್ಧ ನಾನು ಗೆದ್ದೇ ಗೆಲ್ಲುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಾನು ನಾಮಪತ್ರ ಸಲ್ಲಿಸುವ ವೇಳೆ ನಡೆದ ರ‍್ಯಾಲಿಯಲ್ಲಿದ್ದ ಬೆಂಬಲಿಗರ ಸಂಖ್ಯೆ ಕಂಡು ಎರಡೂ ಪಕ್ಷದವರು ಆತಂಕಗೊಂಡಿದ್ದಾರೆ. ಇದೇ ಉದ್ದೇಶದಿಂದ ನಾಮಪತ್ರ ಹಿಂಪಡೆಯುವಂತೆ ಮನವೊಲಿಸಲು ಬಿಜೆಪಿಯವರು ವಿಫಲ ಯತ್ನ ನಡೆಸಿದರು. ಇನ್ನು ಕಾಂಗ್ರೆಸಿಗರು ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರೆ. ನನ್ನ ಜತೆ ಪ್ರಚಾರದಲ್ಲಿ ತೊಡಗುವ ಸಭೆಯಲ್ಲಿ ಪಾಲ್ಗೊಳ್ಳುವ ಯುವಕರನ್ನು ಗುರುತಿಸಿ, ಅವರಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ನಾನು ಗೆಲ್ಲುತ್ತೇನೆ ಎಂಬ ಸತ್ಯ ಅವರಿಗೆ ಅರಿವಾಗಿದೆ. ಅದಕ್ಕೇ ನನ್ನ ಬಲ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ನನಗೆ ಚುನಾವಣಾ ಆಯೋಗದಿಂದ ಸಿಲಿಂಡರ್ ಚಿಹ್ನೆ ನೀಡಲಾಗಿದೆ. ಏ.28ರಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ನನ್ನ ಪರವಾಗಿ ಪ್ರಚಾರ ಮಾಡುತ್ತಾರೆ. ಸಿದ್ದರಾಮಯ್ಯ ಅವರ ಅನ್ನಭಾಗ್ಯ ಯೋಜನೆಯಡಿ ಅನ್ನ ಮಾಡಲು ಸಿಲಿಂಡರ್ ಬೇಕು. ನರೇಂದ್ರ ಮೋದಿ ಅವರು ಬಂದರೆ ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ನೀಡಿದ್ದೇವೆ ಎಂದು ಹೇಳಿ ಮತ ಕೇಳುತ್ತಾರೆ. ಯಾರೂ ಮಾತನಾಡಿದರೂ ಗ್ಯಾಸ್ ಸಿಲಿಂಡರ್ ಬಗ್ಗೆಯೇ ಮಾತನಾಡುತ್ತಾರೆ. ಸಿಲಿಂಡರ್ ಈ ಚುನಾವಣೆಯಲ್ಲಿ ಗೆಲ್ಲುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈಗಾಗಲೇ ನನ್ನ ಪ್ರಣಾಳಿಕೆ ಸಿದ್ಧವಾಗಿದೆ. ಅದರ ಪ್ರಮುಖ ಅಂಶಗಳನ್ನು ಬಿಡುಗಡೆ ಮಾಡಲಿದ್ದು ಕ್ರಮ ಸಂಖ್ಯೆ ಬಂದ ಬಳಿಕ ಪೂರ್ಣ ಪ್ರಮಾಣದ ಪ್ರಣಾಳಿಕೆ ಬಿಡುಗಡೆ ಮಾಡುತ್ತೇನೆ
- ಜಿ.ಬಿ. ವಿನಯ್‌ಕುಮಾರ್ ಪಕ್ಷೇತರ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT