ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘನತ್ಯಾಜ್ಯ ನಿರ್ವಹಣಾ ಘಟಕ: ಜಮೀನು ಸ್ವಾಧೀನಕ್ಕೆ ರೈತರ ವಿರೋಧ

Published 10 ಆಗಸ್ಟ್ 2023, 15:21 IST
Last Updated 10 ಆಗಸ್ಟ್ 2023, 15:21 IST
ಅಕ್ಷರ ಗಾತ್ರ

ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯ ಕೊಮಾರನಹಳ್ಳಿ ಗ್ರಾಮದ ಸರ್ವೇ ನಂ. 59ರಲ್ಲಿ 2 ಎಕರೆ 20 ಗುಂಟೆ ಜಮೀನನ್ನು ಹದ್ದುಬಸ್ತು ಮಾಡಲು ಬಂದಿದ್ದ ತಹಶೀಲ್ದಾರ್ ಪೃಥ್ವಿ ಸಾನಿಕಂ ಹಾಗೂ ಸಿಬ್ಬಂದಿ ಜೊತೆ ರೈತರು, ಬೋವಿ ಸಮುದಾಯದ ಮುಖಂಡರು ಹಾಗೂ ಗ್ರಾಮಸ್ಥರು ವಾಗ್ವಾದ ನಡೆಸಿದರು. ಸ್ಥಳೀಯರ ವಿರೋಧದ ನಡುವೆಯೇ ನಾಮಫಲಕ ಅಳವಡಿಸಲಾಯಿತು. 

ಜಿಲ್ಲಾಧಿಕಾರಿಗಳು ಘನತ್ಯಾಜ್ಯ ನಿರ್ವಹಣೆ ಉದ್ದೇಶಕ್ಕೆ ಜಮೀನು ಮಂಜೂರು ಮಾಡಿದ್ದರು. ಆದರೆ ಪಕ್ಕದಲ್ಲಿ ಇದೇ ಸರ್ವೇ ನಂಬರಿನ ಖಾಲಿ ಜಮೀನು ಇದ್ದು, ಅದನ್ನು ಏಕೆ ಈ ಉದ್ದೇಶಕ್ಕೆ ಬಳಸಬಾರದು ಎಂದು ಸ್ಥಳೀಯರು ಪ್ರಶ್ನಿಸಿದರು. ಸರ್ಕಾರ ಗುರುತಿಸಿರುವ ಜಮೀನು ದಲಿತ ಸಮುದಾಯದ ರೈತನಿಗೆ ಸೇರಿದ್ದು, ಅದರಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಜಮೀನಿನಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡುವುದರ ಹಿಂದೆ ದುರುದ್ದೇಶವಿದೆ ಎಂದು ಆರೋಪಿಸಿದ ರೈತರು ಜೆಸಿಬಿ ಯಂತ್ರಕ್ಕೆ ಅಡ್ಡ ಕುಳಿತರು. ಅಡ್ಡಿಪಡಿಸಿದವರನ್ನು ಪೋಲಿಸರು ವಶಕ್ಕೆ ಪಡೆದರು. 

ಈಗಾಗಲೆ ಜಮೀನು ಸರ್ವೇ ಮಾಡಿದ್ದು, ಜಮೀನನ್ನು ವಶಕ್ಕೆ ನೀಡುವಂತೆ ತಹಶೀಲ್ದಾರ್ ಅವರಿಗೆ ಪುರಸಭೆ ಮುಖ್ಯಾಧಿಕಾರಿ ಎ. ಸುರೇಶ್ ಮನವಿ ಮಾಡಿದರು. ಜಮೀನಿನಲ್ಲಿ ಬಿತ್ತನೆ ಮಾಡಬೇಡಿ ಎಂದು ಕಳೆದ ತಿಂಗಳೇ ತಿಳಿಸಲಾಗಿತ್ತು. ಆದರೂ ಮೆಕ್ಕೆಜೋಳ ಬಿತ್ತನೆ ಮಾಡಿದ್ದೀರಿ ಎಂದು ಕಂದಾಯ ಇಲಾಖೆಯ ದಾಖಲೆಯನ್ನು ಅವರು ತೋರಿಸಿದರು.

ರೈತರ ವಿರೋಧದ ನಡುವೆ ನಾಮಫಲಕ ಅಳವಡಿಸಿ, ಜೆಸಿಬಿ ಯಂತ್ರ ಬಳಸಿ ಗಡಿ ಗುರುತಿಗೆ ಗುಂಡಿ ತೋಡಲಾಯಿತು. 

ತ್ಯಾಜ್ಯ ವಿಲೇವಾರಿಗೆ ಗುರುತಿಸಿರುವ ಪ್ರದೇಶವು ಹೆಳವನಕಟ್ಟೆ ಕೆರೆ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿದ್ದು, ಆಗಸನಹಳ್ಳ ಜಲಧಾರೆ ಇಲ್ಲಿದೆ. ಘಟಕ ಸ್ಥಾಪನೆಯಿಂದ ಪರಿಸರ ಮಾಲಿನ್ಯ ಉಂಟಾಗಿ, ಪ್ರಾಣಿ, ಪಕ್ಷಿ ಸಂಕುಲಕ್ಕೆ ಹಾನಿಯಾಗುವುದು ನಿಶ್ಚಿತ. ಹೀಗಾಗಿ ಘಟಕ ಸ್ಥಾಪನೆಯನ್ನು ವಿರೋಧಿಸಿ ಜಿಲ್ಲಾಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಲಾಗಿದೆ ಎಂದು ರೈತರು ಹೇಳಿದ್ದಾರೆ. 

ಪರಿಶಿಷ್ಟರ ಸಮುದಾಯದ ರೈತರ ಜಮೀನು ವಶಪಡಿಸಿಕೊಳ್ಳುವವರ ವಿರುದ್ಧ ಹೋರಾಟ ನಡೆಸುವುದಾಗಿ ಬೋವಿ ಸಮುದಾಯದ ಮುಖಂಡರಾದ ವಿಜಯಕುಮಾರ್, ಬೋವಿ ಕುಮಾರ್ ಹಾಗೂ ಜಿ.ಪಂ. ಮಾಜಿ ಸದಸ್ಯ ಆದಾಪುರದ ವೀರಭದ್ರಪ್ಪ ತಿಳಿಸಿದರು.

ಉಪತಹಸೀಲ್ದಾರ್ ಆರ್. ರವಿ, ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಆಡಳಿತ ಅಧಿಕಾರಿ ಅಣ್ಣಪ್ಪ, ಸಿಪಿಐ ಸುರೇಶ್ ಸಗರಿ, ಪಿಎಸ್ಐ ಪ್ರಭುಕೆಳಗಿನ ಮನೆ, ಜೆಇ ಹಾಲೇಶಪ್ಪ, ಕಂದಾಯಾಧಿಕಾರಿ ಪ್ರಭು, ಆರೋಗ್ನಯ ನಿರೀಕ್ಷಕ, ನ್ ಕಟ್ಟೀಮನಿ ಗ್ರಾಮ ಸಹಾಯಕ ಮಾರುತಿ, ಬಸವರಾಜ್ ರೈತರು ಇದ್ದರು. ಸ್ಥಳದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಮಲೇಬೆನ್ನೂರು ಪಟ್ಟಣದ ಕಸವನ್ನು ನಮ್ಮೂರಿನ ಗುಡ್ಡದಲ್ಲಿ ತಂದು ಹಾಕಬೇಡಿ. ನಿಮ್ಮ ಊರಿನಲ್ಲಿ ಗೋಮಾಳ ಇಲ್ಲವೇ
ರಂಗನಾಥ್ ಕೊಮಾರನಹಳ್ಳಿ ಗ್ರಾಮಸ್ಥ
ತಹಶೀಲ್ದಾರ್ ಸ್ಪಷ್ಟನೆ
ಸರ್ವೇ ಸಂಖ್ಯೆ 59ರಲ್ಲಿರುವ 107.24 ಎಕರೆ ಜಮೀನಿನ ಪೈಕಿ 42.31 ಎಕರೆಯು ರೈತರಿಗೆ ಮಂಜೂರಾಗಿದೆ. 18 ಜನರು ಬಗರ್ ಹುಕುಂ ಪಹಣಿ ನೀಡಲು ಅರ್ಜಿ ಸಲ್ಲಿಸಿದ್ದರು. ಎಲ್ಲ ಅರ್ಜಿ ವಜಾ ಆಗಿವೆ. ಜಿಲ್ಲಾಧಿಕಾರಿಗಳ ಆದೇಶದಂತೆ 2 ಎಕರೆ 20 ಗುಂಟೆ ಜಮೀನನ್ನು ಮಲೇಬೆನ್ನೂರು ಪುರಸಭೆ ಹೆಸರಿಗೆ ಮಾಡಲಾಗಿದೆ ಎಂದು ತಹಶೀಲ್ದಾರ್ ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT