ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಹಳೇ ಮಾರ್ಗಗಳಿಗೆ ಮತ್ತೆ ಬಸ್‌ ಸಂಚಾರ

ಕೆಎಸ್‌ಆರ್‌ಟಿಸಿ ನೂತನ ಬಸ್ ನಿಲ್ದಾಣ ಉದ್ಘಾಟಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಭರವಸೆ
Published 10 ಮಾರ್ಚ್ 2024, 5:58 IST
Last Updated 10 ಮಾರ್ಚ್ 2024, 5:58 IST
ಅಕ್ಷರ ಗಾತ್ರ

ದಾವಣಗೆರೆ: ‘ಕೋವಿಡ್‌ ಸಮಯದಲ್ಲಿ ರದ್ದುಗೊಳಿಸಿದ್ದ 3,800 ಮಾರ್ಗಗಳಲ್ಲಿ ಬಸ್‌ ಸಂಚಾರ ಪುನರಾರಂಭಿಸಲಾಗುವುದು’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಶನಿವಾರ ಭರವಸೆ ನೀಡಿದರು.

ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣಗೊಂಡಿರುವ ದಾವಣಗೆರೆ ಮುಖ್ಯ ಬಸ್ ನಿಲ್ದಾಣ ಹಾಗೂ ಬೇತೂರು ರಸ್ತೆಯಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ನೂತನ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಿದ ಅವರು ಮುಖ್ಯ ಬಸ್ ನಿಲ್ದಾಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದರು.

‘ನಾಲ್ಕು ವರ್ಷಗಳಿಂದ ಒಂದೂ ಬಸ್‌ ಖರೀದಿ ಮಾಡಿರಲಿಲ್ಲ. ಈಗ ವಿವಿಧ ಸಾರಿಗೆ ನಿಗಮಗಳಿಗಾಗಿ ಸುಮಾರು 5,800 ಹೊಸ ಬಸ್‍ಗಳನ್ನು ಖರೀದಿ ಮಾಡಲಾಗುತ್ತಿದೆ. ಈಗಾಗಲೇ ಅರ್ಧಕ್ಕೂ ಹೆಚ್ಚು ಹೊಸ ಬಸ್‍ಗಳು ಬಂದಿವೆ. ಉಳಿದ ಬಸ್‍ಗಳು ಬರಬೇಕಾಗಿದೆ’ ಎಂದರು.

‘2016ರಿಂದ ಸಾರಿಗೆ ನಿಗಮದಲ್ಲಿ ಸಿಬ್ಬಂದಿ ನೇಮಕಾತಿ ನಡೆದಿಲ್ಲ. ಆದ್ದರಿಂದ ಹೊಸ ಬಸ್ ಖರೀದಿಸಿದರೂ ಸಿಬ್ಬಂದಿ ಕೊರತೆಯಾಗುತ್ತಿತ್ತು. ಇದನ್ನು ಮನಗಂಡು 9 ಸಾವಿರ ನೌಕರರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಕಲ್ಯಾಣ ಕರ್ನಾಟಕ ವಲಯಕ್ಕೆ ನೇಮಕಗೊಂಡಿರುವ 1,619 ಸಿಬ್ಬಂದಿಗೆ ಈಗಾಗಲೇ ನೇಮಕಾತಿ ಆದೇಶ ನೀಡಲಾಗಿದೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿದ ತಕ್ಷಣವೇ ಕೋವಿಡ್‌ ಸಂದರ್ಭ ಸ್ಥಗಿತಗೊಳಿಸಿದ್ದ ಹಳೆ ಮಾರ್ಗ ಮತ್ತು ಪ್ರಯಾಣಿಕರ ದಟ್ಟಣೆ ಇರುವ ಹೊಸ ಮಾರ್ಗಗಳಲ್ಲಿ ಬಸ್ ಓಡಿಸಲಾಗುತ್ತದೆ’ ಎಂದು ತಿಳಿಸಿದರು. 

ಮಲ್ಟಿಫ್ಲೆಕ್ಸ್ ಹೊಂದಿದ ಮೊದಲ ನಿಲ್ದಾಣ:

‘ದಾವಣಗೆರೆಯ ನೂತನ  ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಲವು ಆಧುನಿಕ ಸೌಕರ್ಯಗಳನ್ನು ಹೊಂದಿದೆ. ಮಲ್ಟಿಪ್ಲೆಕ್ಸ್ ಸಿನಿಮಾ ಹಾಲ್‍ಗಳ ಜೊತೆಗೆ ಪ್ರಯಾಣಿಕರಿಗೆ ಬೇಕಾದ ಮೂಲಸೌಕರ್ಯಗಳನ್ನು ಒಳಗೊಂಡಿರುವ ರಾಜ್ಯದ ಮೊದಲ ಬಸ್ ನಿಲ್ದಾಣ ಇದಾಗಿದೆ’ ಎಂದು ರಾಮಲಿಂಗಾ ರೆಡ್ಡಿ ಹೇಳಿದರು. 

‘ಶಕ್ತಿ’ ಯೋಜನೆಯಿಂದ ಮಹಿಳೆಯರಿಗೆ ಶಕ್ತಿ: ‘ಚುನಾವಣೆಗೂ ಮುಂಚೆ ನೀಡಿದ ಭರವಸೆಯಂತೆ ಸರ್ಕಾರ ಬಂದು 15 ದಿನಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಿಕ್ಕೆ ‘ಶಕ್ತಿ’ ಯೋಜನೆ ಜಾರಿಗೆ ತರಲಾಯಿತು. ಈ ಯೋಜನೆ ಜಾರಿಯಿಂದ ಮುಂದಿನ ದಿನಗಳಲ್ಲಿ ನಿಗಮದ ಬಸ್‍ಗಳಿಗೆ ಇಂಧನ ಭರಿಸಲೂ ಹಣವಿಲ್ಲದಂತಾಗುತ್ತದೆ ಎಂದು ಹಲವರು ಟೀಕಿಸಿದ್ದರು. ಅದನ್ನೆಲ್ಲಾ ಮೆಟ್ಟಿ ನಿಗಮವನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಹೋಗಲಾಗುತ್ತಿದೆ. ಶಕ್ತಿ ಯೋಜನೆ ಅನುಷ್ಠಾನಗೊಂಡ ದಿನದಿಂದ ಈವರೆಗೂ ರಾಜ್ಯದಲ್ಲಿ ಮಹಿಳೆಯರು 160 ಕೋಟಿಗಿಂತಲೂ ಹೆಚ್ಚು ಬಾರಿ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣ ಕೈಗೊಂಡಿದ್ದಾರೆ’ ಎಂದು ಹೇಳಿದರು.

‘ಗೃಹಲಕ್ಷ್ಮಿ’ ಯೋಜನೆಯಡಿ ಪ್ರತಿ ಮಹಿಳೆಗೂ ಹಣ ತಲುಪಿದ್ದು, ಬಡವರ ಪರವಾಗಿ ಕೆಲಸ ಮಾಡುವ ಏಕೈಕ ಪಕ್ಷ ಕಾಂಗ್ರೆಸ್‌. ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರು ಶೇ 100ರಷ್ಟು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮನವಿ ಮಾಡಿದರು. 

‘ಸ್ಮಾರ್ಟ್ ಸಿಟಿ ಯೋಜನೆಯಡಿ ದಾವಣಗೆರೆಯಲ್ಲಿ ವಿವಿಧ ಕೆಲಸಗಳು ಆಗಿವೆ. ಅದೆಲ್ಲ ಆಗಿದ್ದು ಕಾಂಗ್ರೆಸ್‌ನಿಂದ. ಆದರೆ ಬಿಜೆಪಿಯವರು 6 ತಿಂಗಳ ಹಿಂದೆ ತರಾತುರಿಯಲ್ಲಿ ಉದ್ಘಾಟನೆ ಮಾಡಿದರು. ಹಳೆಯ ಬಸ್ ನಿಲ್ದಾಣ ಹಾಳು ಮಾಡಿದ್ದು ಬಿಜೆಪಿಯವರು. ಅದನ್ನು ಮುಂದಿನ ದಿನದಲ್ಲಿ ಸರಿಪಡಿಸುತ್ತೇವೆ’ ಎಂದು ಹೇಳಿದರು.

‘ಅಪಘಾತರಹಿತವಾಗಿ ಬಸ್‌ ಚಾಲನೆ ಮಾಡಿರುವ ಚಾಲಕರು ಇತರೆ ಸಿಬ್ಬಂದಿಗೆ ಪ್ರೇರಣೆಯಾಗಬೇಕು. ದಾವಣಗೆರೆ ಮುಖ್ಯ ಬಸ್ ನಿಲ್ದಾಣದ ನಿರ್ಮಾಣದಲ್ಲಿ ಮಾಜಿ ಶಾಸಕ ಪಂಪಾಪತಿಯವರ ಶ್ರಮ ಹೆಚ್ಚಿದೆ. ಬೇತೂರು ರಸ್ತೆಯ ಬಸ್ ನಿಲ್ದಾಣ ನಿರ್ಮಾಣದ ಈ ಸಂದರ್ಭದಲ್ಲಿ ಅಂಬರ್‍ಕರ್ ಕುಟುಂಬವನ್ನು ಸ್ಮರಿಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಈ ಹಿಂದೆ ದಾವಣಗೆರೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸ್ವಚ್ಛತೆಯ ಟೆಂಡರ್ ಪಡೆದು ಸತತ 20 ವರ್ಷಗಳ ಕಾಲ ನಾನೇ ನಿರ್ವಹಣೆ ಮಾಡಿದ್ದೆ. ಈಗ ಶಾಸಕನಾಗಿ ನಿಲ್ದಾಣದ ಉದ್ಘಾಟನೆಯಲ್ಲಿ ಪಾಲ್ಗೊಂಡಿರುವುದು ಖುಷಿ ನೀಡಿದೆ’ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ
ಹೇಳಿದರು. 

‘ಮಾಯಕೊಂಡದಲ್ಲಿ ₹10 ಕೋಟಿ ವೆಚ್ಚದಲ್ಲಿ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಿಸಲು ಸಾರಿಗೆ ಸಚಿವರು ಒಪ್ಪಿಗೆ ನೀಡಿದ್ದಾರೆ.  ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ದಾವಣಗೆರೆಗೆ ಸ್ಮಾರ್ಟ್‌ಸಿಟಿ ಬರಲು ಎಸ್‌.ಎಸ್.ಮಲ್ಲಿಕಾರ್ಜುನ್ ಕಾರಣ’ ಎಂದು ಹೇಇದರು.

ವಿಧಾನಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಮಾತನಾಡಿದರು. ಮೇಯರ್ ವಿನಾಯಕ್ ಬಿ.ಎಚ್, ಕೆಎಸ್‍ಆರ್‌ಟಿಸಿ ನಿಗಮದ ಸಿಬ್ಬಂದಿ ಮತ್ತು ಜಾಗೃತ ವಿಭಾಗದ ನಿರ್ದೇಶಕಿ ಕೆ.ನಂದಿನಿ ದೇವಿ, ಪಾಲಿಕೆ ಸದಸ್ಯರಾದ ಚಮನ್‍ಸಾಬ್, ಹೆಚ್ಚುವರಿ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಬಾನು ಎಸ್.ಬಳ್ಳಾರಿ, ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್‍ಕುಮಾರ್, ಎಲೆಬೇತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರೇವಣಸಿದ್ದಪ್ಪ ಇದ್ದರು. ಕೆಎಸ್‍ಆರ್‌ಟಿಸಿ ವಿಭಾಗೀಯ ನಿಯಂತ್ರಕ ಶ್ರೀನಿವಾಸ್‍ ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಫಕೃದ್ದೀನ್.ಡಿ ಸ್ವಾಗತಿಸಿದರು. ಪತ್ರಕರ್ತ ಎಚ್.ಬಿ.ಮಂಜುನಾಥ್ ನಿರೂಪಿಸಿದರು.

ಬೆಳ್ಳಿ ಪದಕ ವಿಜೇತ ಚಾಲಕರು

ಕೆಎಸ್‍ಆರ್‌ಟಿಸಿಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಕೆ.ಜಿ.ಮಂಜುನಾಥ್, ರವಿಕುಮಾರ್.ಆರ್, ಚಂದ್ರನಾಯ್ಕ, ಮೊಹಮ್ಮದ್ ಅಕ್ರಂ ಅಲಿ ಅವರು ಸತತ 7 ವರ್ಷಗಳ ಕಾಲ ಅಪರಾಧ ಮತ್ತು ಅಪಘಾತ ರಹಿತವಾಗಿ ಬಸ್‌ ಚಾಲನೆ ಮಾಡಿದ್ದು,  ಇವರಿಗೆ ಬೆಳ್ಳಿ ಪದಕ ಮತ್ತು ನಗದು ಬಹುಮಾನ ವಿತರಿಸಿ ಗೌರವಿಸಲಾಯಿತು. 

ಪಂಪಾಪತಿ ಹೆಸರು ಪರಿಶೀಲನೆ

‘ದಾವಣಗೆರೆ ಬಸ್ ನಿಲ್ದಾಣಕ್ಕಾಗಿ ಶ್ರಮಿಸಿದ ಮಾಜಿ ಶಾಸಕ ಪಂಪಾಪತಿಯವರ ಹೆಸರನ್ನು ನಿಲ್ದಾಣಕ್ಕೆ ಇಡಬೇಕು ಎಂಬ ಆಗ್ರಹ ಇದೆ. ಈ ಬಗ್ಗೆ ನಿಗಮದ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಿದೆ. ಈ ವಿಚಾರವನ್ನು ನಿಗಮದ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಡುತ್ತೇನೆ’ ಎಂದು ಭರವಸೆ ನೀಡಿದರು.

ಕಾರ್ಯಾಚರಣೆಗೆ ಬೇಕು ತಿಂಗಳು

‘ಕೆಎಸ್‌ಆರ್‌ಟಿಸಿ ಬಸ್ ಟರ್ಮಿನಲ್ ಉದ್ಘಾಟನೆಗೊಂಡಿದ್ದರೂ, ಹೊಸ ಬಸ್ ಟರ್ಮಿನಲ್‌ನಿಂದ ಬಸ್‌ಗಳು ಕಾರ್ಯಾಚರಣೆ ನಡೆಸಲು ಇನ್ನೂ ಒಂದು ತಿಂಗಳು ಕಾಯಬೇಕಾಗುತ್ತದೆ. ಸ್ಮಾರ್ಟ್‌ ಸಿಟಿಯವರು ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕೆಎಸ್‌ಆರ್‌ಟಿಸಿಗೆ ಟರ್ಮಿನಲ್‌ ಹಸ್ತಾಂತರಿಸಬೇಕಿದೆ’ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT