ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಸಾವು: ಲಾಕಪ್ ಡೆತ್ ಆರೋಪ

ಠಾಣೆಗೆ ನುಗ್ಗಿ ಹಾನಿಗೊಳಿಸಿದ ಸಂಬಂಧಿಕರು
Published 24 ಮೇ 2024, 20:28 IST
Last Updated 24 ಮೇ 2024, 20:28 IST
ಅಕ್ಷರ ಗಾತ್ರ

ದಾವಣಗೆರೆ: ಮಟ್ಕಾ ಜೂಜು ಆಡಿಸುತ್ತಿದ್ದ ದೂರಿನ ಮೇರೆಗೆ ಜಿಲ್ಲೆಯ ಚನ್ನಗಿರಿ ಪೊಲೀಸರು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದ ಸಂದರ್ಭದಲ್ಲಿ ಸ್ಥಳೀಯ ನಿವಾಸಿ ಆದಿಲ್‌ ಖಲಿಂ ಉಲ್ಲಾ (32) ಎಂಬವರು ಮೃತಪಟ್ಟಿದ್ದು, ಇದೊಂದು ‘ಲಾಕಪ್‌ ಡೆತ್‌’ ಎಂದು ಸಂಬಂಧಿಗಳು ದೂರಿದ್ದರಿಂದ ನ್ಯಾಯಾಧೀಶರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

‘ಆದಿಲ್‌ ಅವರದ್ದು ಸಹಜ ಸಾವಲ್ಲ. ಬದಲಿಗೆ, ಲಾಕಪ್‌ ಡೆತ್‌’ ಎಂದು ಆರೋಪಿಸಿ ಮೃತನ ಕುಟುಂಬ ಸದಸ್ಯರು, ಸಂಬಂಧಿಕರು ಹಾಗೂ ನೆರೆಹೊರೆಯವರು ಶುಕ್ರವಾರ ತಡರಾತ್ರಿ ಚನ್ನಗಿರಿ ಪೊಲೀಸ್‌ ಠಾಣೆ ಎದುರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಉದ್ರಿಕ್ತರ ಗುಂಪು ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೇ, ಠಾಣೆ ಎದುರು ನಿಲ್ಲಿಸಿದ್ದ 5 ಪೊಲೀಸ್ ವಾಹನಗಳನ್ನು ಜಖಂಗೊಳಿಸಿದರು. 

ಈ ಸಂದರ್ಭ ಸ್ಥಳದಲ್ಲಿದ್ದ 11 ಜನ ಪೊಲೀಸ್‌ ಸಿಬ್ಬಂದಿ ಗಾಯಗೊಂಡಿದ್ದಾರೆ. ಪೊಲೀಸರು ಉದ್ರಿಕ್ತರನ್ನು ಚದುರಿಸಲು ಲಾಠಿಪ್ರಹಾರ ನಡೆಸಿದರು. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ್ದರಿಂದ ಅಶ್ರುವಾಯು ಸಿಡಿಸಿದರು.

ಪ್ರಕರಣ ಗಂಭೀರ ಸ್ವರೂಪ ಪಡೆದಿದ್ದರಿಂದ ಚನ್ನಗಿರಿ ಆಸ್ಪತ್ರೆಯ ಬದಲಿಗೆ, ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ
ಶನಿವಾರ ಮಧ್ಯಾಹ್ನ ಆದಿಲ್‌ ಅವರ ಮರಣೋತ್ತರ ಪರೀಕ್ಷೆ ನಡೆಸಲು ಸೂಚಿಸಲಾಯಿತು.

ಸಿವಿಲ್ ನ್ಯಾಯಾಧೀಶ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಪ್ರಶಾಂತ್‌ ಜಿ.ಸಿ. ಹಾಗೂ ಆದಿಲ್‌ ಅವರ ಕುಟುಂಬದವರ ಸಮ್ಮುಖದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಮೃತದೇಹವನ್ನು ಆಂಬುಲೆನ್ಸ್‌ನಲ್ಲಿ ತೆಗೆದುಕೊಂಡು ಹೋಗಿ ಚನ್ನಗಿರಿಯಲ್ಲಿ
ಭಾರಿ ಪೊಲೀಸ್‌ ಭದ್ರತೆಯ ನಡುವೆ ಅಂತ್ಯಕ್ರಿಯೆ ನಡೆಸಲಾಯಿತು.

‌ಅಂತ್ಯಕ್ರಿಯೆ ವೇಳೆ ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದಲ್ಲಿ 600ಕ್ಕೂ ಅಧಿಕ ಸಂಖ್ಯೆಯ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಸೂಕ್ತ ತನಿಖೆ– ಎಸ್‌.ಪಿ: ‘ಆದಿಲ್‌ ಅವರದ್ದು ಲಾಕಪ್ ಡೆತ್ ಎಂದು ಕೆಲವರು ದೂರಿದ್ದಾರೆ‌. ಠಾಣೆಯಲ್ಲಿ ಸಿ.ಸಿ‌.ಟಿ.ವಿ. ಕ್ಯಾಮೆರಾಗಳಿವೆ. ಅವುಗಳಲ್ಲಿನ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಸೂಕ್ತ ತನಿಖೆ ನಡೆಸಲಾಗುವುದು’ ಎಂದು ಚನ್ನಗಿರಿ ಠಾಣೆಗೆ ಶನಿವಾರ ಬೆಳಿಗ್ಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.

‘ಮಟ್ಕಾ ದೂರಿನ ಹಿನ್ನೆಲೆಯಲ್ಲಿ ಆದಿಲ್‌ ಅವರನ್ನು ಸಿಬ್ಬಂದಿಯು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತಂದ ಆರೇಳು ನಿಮಿಷಗಳ ಅಂತರದಲ್ಲೇ ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಪರಿಶೀಲಿಸಿದ ಬಳಿಕ ಮೃತಪಟ್ಟಿದ್ದಾಗಿ ಗೊತ್ತಾಗಿದೆ’ ಎಂದು ಹೇಳಿದರು.

‘ಉದ್ರಿಕ್ತ ಗುಂಪು ಠಾಣೆ ಮೇಲೆ, ಪೊಲೀಸ್‌ ಸಿಬ್ಬಂದಿ ಮೇಲೆ ದಾಳಿ ನಡೆಸಿದ ಬಗ್ಗೆ ಹಾಗೂ ಪೊಲೀಸ್‌ ವಾಹನಗಳನ್ನು ಜಖಂಗೊಳಿಸಿದ ಬಗ್ಗೆ ಪ್ರತ್ಯೇಕವಾಗಿ 6 ಪ್ರಕರಣಗಳು ಹಾಗೂ ಆದಿಲ್‌ ಅವರ ತಂದೆ ಖಲೀಂ ಉಲ್ಲಾ ಅವರು ನೀಡಿದ ದೂರು ಆಧರಿಸಿ ‘ಅಸಹಜ ಸಾವು’ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ’ ಎಂದರು.

ಸೂಕ್ತ ತನಿಖೆ: ಎಸ್‌.ಪಿ

‘ಆದಿಲ್‌ ಅವರದ್ದು ಲಾಕಪ್ ಡೆತ್ ಎಂದು ಕೆಲವರು ದೂರಿದ್ದಾರೆ‌. ಠಾಣೆಯಲ್ಲಿ ಸಿ.ಸಿ‌.ಟಿ.ವಿ. ಕ್ಯಾಮೆರಾಗಳಿವೆ. ಅವುಗಳಲ್ಲಿನ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಸೂಕ್ತ ತನಿಖೆ ನಡೆಸಲಾಗುವುದು’ ಎಂದು ಚನ್ನಗಿರಿ ಠಾಣೆಗೆ ಶನಿವಾರ ಬೆಳಿಗ್ಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.

‘ಮಟ್ಕಾ ದೂರಿನ ಹಿನ್ನೆಲೆಯಲ್ಲಿ ಆದಿಲ್‌ ಅವರನ್ನು ಸಿಬ್ಬಂದಿಯು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತಂದ ಆರೇಳು ನಿಮಿಷಗಳ ಅಂತರದಲ್ಲೇ ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಪರಿಶೀಲಿಸಿದ ಬಳಿಕ ಮೃತಪಟ್ಟಿದ್ದಾಗಿ ಗೊತ್ತಾಗಿದೆ’ ಎಂದು ಹೇಳಿದರು.

‘ಉದ್ರಿಕ್ತ ಗುಂಪು ಠಾಣೆ ಮೇಲೆ, ಪೊಲೀಸ್‌ ಸಿಬ್ಬಂದಿ ಮೇಲೆ ದಾಳಿ ನಡೆಸಿದ ಬಗ್ಗೆ ಹಾಗೂ ಪೊಲೀಸ್‌ ವಾಹನಗಳನ್ನು ಜಖಂಗೊಳಿಸಿದ ಬಗ್ಗೆ ಪ್ರತ್ಯೇಕವಾಗಿ 6 ಪ್ರಕರಣಗಳು ಹಾಗೂ ಆದಿಲ್‌ ಅವರ ತಂದೆ ಖಲೀಂ ಉಲ್ಲಾ ಅವರು ನೀಡಿದ ದೂರು ಆಧರಿಸಿ ‘ಅಸಹಜ ಸಾವು’ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ’ ಎಂದರು.

ತುಷ್ಟೀಕರಣದ ಪರಿಣಾಮ: ವಿಜಯೇಂದ್ರ

ಚಿತ್ರದುರ್ಗ: ‘ಕಾಂಗ್ರೆಸ್‌ ಪಕ್ಷವು ಅಲ್ಪಸಂಖ್ಯಾತರ ತುಷ್ಟೀಕರಣ ರಾಜಕಾರಣ ಮಾಡುತ್ತಿರುವ ಪರಿಣಾಮವಾಗಿ ಚನ್ನಗಿರಿ ಪೊಲೀಸ್‌ ಠಾಣೆ ಮೇಲೆ ದಾಳಿ ನಡೆಸಲಾಗಿದೆ. ಪೊಲೀಸ್‌ ವ್ಯವಸ್ಥೆ ಕುಸಿದು ಬಿದ್ದಿದ್ದು, ರಾಜ್ಯವನ್ನು ಭಗವಂತನೇ ಕಾಪಾಡಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

‘ಸಾವಿರಾರು ಜನರು ಪೊಲೀಸ್ ಠಾಣೆಗೆ ನುಗ್ಗಿ ದಾಂದಲೆ ಮಾಡಿರುವುದನ್ನು ಗಮನಿಸಿದರೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪೊಲೀಸರಿಗೇ ರಕ್ಷಣೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಚುನಾಯಿತ ಸರ್ಕಾರ ಹಾಗೂ ಗೃಹ ಸಚಿವರು ಇದ್ದಾರೆಯೇ ಎದಂಬ ಸಂಶಯ ಮೂಡಿದೆ’ ಎಂದು ಶನಿವಾರ ಇಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ಪೊಲೀಸ್‌ ವ್ಯವಸ್ಥೆಯ ಕುರಿತು ಯಾರೊಬ್ಬರಿಗೂ ಭಯ ಇಲ್ಲದಂತಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಲಾಲು ಪ್ರಸಾದ್‌ ಆಡಳಿತದ ಸಂದರ್ಭ ಇದ್ದ ಬಿಹಾರದಂತೆ ಕರ್ನಾಟಕ ಪರಿವರ್ತನೆಯಾಗುತ್ತಿದೆ. ಕಾಂಗ್ರೆಸ್‌ ಸರ್ಕಾರದ ಅವಧಿಯ ಡಿ.ಜೆ. ಹಳ್ಳಿ ಪ್ರಕರಣವನ್ನು ಈ ಪ್ರಕರಣ ನೆನಪಿಸಿದೆ’ ಎಂದು ಕುಟುಕಿದರು.

ಆದಿಲ್ ಕಡಿಮೆ ರಕ್ತದ ಒತ್ತಡದಿಂದ ಬಳಲುತ್ತಿದ್ದುದು ನಿಜ. ಆದರೆ, ಠಾಣೆಯಲ್ಲಿ ಏನಾಗಿದೆಯೋ ಗೊತ್ತಾಗಿಲ್ಲ. ಮಗನ ದೇಹದ ಮೇಲೆ ಗಾಯಗಳು ಕಂಡುಬಂದಿಲ್ಲ ,
ಖಲೀಮುಲ್ಲಾ ಮೃತ,ಲ್‌ ತಂದೆ
ಕಾಂಗ್ರೆಸ್‌ ಅಲ್ಪಸಂಖ್ಯಾತರ ತುಷ್ಟೀಕರಣ ರಾಜಕಾರಣ ಮಾಡುತ್ತಿರುವ ಪರಿಣಾಮ ಚನ್ನಗಿರಿ ಪೊಲೀಸ್‌ ಠಾಣೆ ಮೇಲೆ ದಾಳಿ ನಡೆಸಲಾಗಿದೆ.
ಬಿ.ವೈ. ವಿಜಯೇಂದ್ರಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT