ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸ್ವಾಗತಕ್ಕೆ ದಾವಣಗೆರೆ ಸಜ್ಜು

Last Updated 25 ಮಾರ್ಚ್ 2023, 6:07 IST
ಅಕ್ಷರ ಗಾತ್ರ

ದಾವಣಗೆರೆ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭ ‘ಮಹಾಸಂಗಮ’ಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ದಾವಣಗೆರೆ ಸಜ್ಜಾಗಿದೆ. ಎಲ್ಲೆಡೆ ಕೇಸರಿ ಧ್ವಜ, ಬಿಜೆಪಿ ಧ್ವಜ, ಪ್ರಧಾನಿಗೆ ಸ್ವಾಗತ ಕೋರುವ ಬ್ಯಾನರ್‌ಗಳು ರಾರಾಜಿಸುತ್ತಿವೆ.

ಹೆಲಿಪ್ಯಾಡ್‌, ಜಿಎಂಐಟಿ, ಸಮಾವೇಶದ ಮೈದಾನ, ರಸ್ತೆಗಳ ತುಂಬೆಲ್ಲ ಪೊಲೀಸರು, ಮೀಸಲು ಪೊಲೀಸರು, ಅರೆಸೇನಾ ತುಕಡಿಗಳು ಹೀಗೇ ಬಂದೋಬಸ್ತ್‌ಗೆ ನಿಯೋಜಿಸಿರುವ ಪಡೆಗಳು ತುಂಬಿ ಹೋಗಿವೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಪ್ರಧಾನ ಕಾರ್ಯದರ್ಶಿ ಮಹೇಶ್‌ ಟೆಂಗಿನಕಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದರಾದ ಜಿ.ಎಂ. ಸಿದ್ದೇಶ್ವರ, ಪ್ರತಾಪ ಸಿಂಹ ಸಹಿತ ಅನೇಕ ನಾಯಕರು ಶುಕ್ರವಾರ ಸಮಾವೇಶ ನಡೆಯುವ ಸ್ಥಳವನ್ನು ಪರಿಶೀಲನೆ ನಡೆಸಿದರು. ಬಾಂಬ್‌ ಪತ್ತೆದಳವು ಎಲ್ಲ ಕಡೆ ತಪಾಸಣೆ ನಡೆಸಿತು. 40 ಮಾಜಿ ಸೈನಿಕರನ್ನು ಹಲವು ಕಾರ್ಯಗಳಿಗೆ ಬಳಸಿಕೊಳ್ಳಲಾಯಿತು.

ಸಮಾವೇಶ ಸ್ಥಳದ ಸುತ್ತಮುತ್ತಲಿನ ರಸ್ತೆಗಳ ಬದಿಯಲ್ಲಿ ಇದ್ದ ಎಲ್ಲ ಅಂಗಡಿಗಳನ್ನು ಬಂದ್‌ ಮಾಡಲಾಗಿದೆ. ವಲಸೆ ಬಂದು ವಾಸಿಸುತ್ತಿದ್ದವರನ್ನು ಸ್ಥಳಾಂತರಿಸಲಾಗಿದೆ.

ಪ್ರಧಾನಿ ಜತೆಗೆ 31 ಮಂದಿ: ಮಹಾಸಂಗಮ ಕಾರ್ಯಕ್ರಮದಲ್ಲಿ ಮೂರು ವೇದಿಕೆಗಳಿರಲಿವೆ. ಪ್ರಮುಖ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆಗೆ 31-32 ಮಂದಿಗೆ ಆಸನ ವ್ಯವಸ್ಥೆ ಇರುತ್ತದೆ. ಹಾಲಿ ಶಾಸಕರು, ಸಂಸದರು ಸಹಿತ ಪ್ರಮುಖರು ಎರಡನೇ ವೇದಿಕೆಯಲ್ಲಿ ಇರುತ್ತಾರೆ. ಮಾಜಿ ಶಾಸಕರು, ಪಕ್ಷದ ಪ್ರಮುಖ ಪದಾಧಿಕಾರಿಗಳು ಮೂರನೇ ವೇದಿಕೆಯಲ್ಲಿರುತ್ತಾರೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್‌ ಟೆಂಗಿನ ಕಾಯಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

ಸಮಾವೇಶದಿಂದ ಮೂರು ಕಿಲೋಮೀಟರ್‌ ವ್ಯಾಪ್ತಿಯ ಒಳಗೆ ಪಾರ್ಕಿಂಗ್‍ಗೆ 44 ಜಾಗಗಳನ್ನು ಗುರುತಿಸಲಾಗಿದೆ. ಕಾರ್ಯಾಲಯ, ಸ್ವಚ್ಛತೆ ಸೇರಿ ಹಲವು 45 ತಂಡಗಳನ್ನು ನಿಯೋಜಿಸಿದ್ದೇವೆ. 5 ಸಾವಿರ ಪ್ರಬಂಧಕರು ಇರಲಿದ್ದಾರೆ ಎಂದು ವಿವರ ನೀಡಿದರು.

ಸಮಾವೇಶದ ಪೆಂಡಾಲ್‌ ಒಳಗೆ ನರೇಂದ್ರ ಮೋದಿ ಅವರು ರೋಡ್‌ಶೋ ಮಾಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಎಸ್.ಎ. ರವೀಂದ್ರನಾಥ್‌, ಪ್ರೊ. ಎನ್‌. ಲಿಂಗಣ್ಣ, ಎಂ.ಪಿ. ರೇಣುಕಾಚಾರ್ಯ, ಕೆ.ಎಸ್‌. ನವೀನ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ, ಮುಖಂಡರಾದ ಬಸವರಾಜ ನಾಯ್ಕ್‌, ಡಿ.ಎಸ್‌. ಶಿವಶಂಕರ್‌, ಯಶವಂತರಾವ್‌ ಜಾಧವ್‌, ಅನಿತ್‌ ಕುಮಾರ್‌, ರಾಜನಹಳ್ಳಿ ಶಿವಕುಮಾರ್‌, ಕೊಳೇನಹಳ್ಳಿ ಸತೀಶ್‌, ಬಾತಿ ಚಂದ್ರಶೇಖರ್‌, ಲೋಕಿಕೆರೆ ನಾಗರಾಜ್‌ ಮತ್ತಿತರರಿದ್ದರು.

ಪಾರ್ಕಿಂಗ್‌ ವಿವರ

ರಾಜ್ಯದ ವಿವಿಧ ಕಡೆಗಳಿಂದ ಬರುವ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿ ಪೊಲೀಸ್‌ ಇಲಾಖೆ ಪ್ರಕಟಣೆ ನೀಡಿದೆ.

ಚಿಕ್ಕಮಗಳೂರು, ಶಿವಮೊಗ್ಗ, ಭದ್ರಾವತಿ, ಬೀರೂರು, ಕಡೂರು, ಬೆಂಗಳೂರು, ಕೋಲಾರ, ತುಮಕೂರು, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಮಂಗಳೂರು ಕಡೆಯಿಂದ ಬಾಡಾ ಕ್ರಾಸ್‌ ಮೂಲಕ ಪ್ರವೇಶ ಪಡೆಯುವ ವಾಹನಗಳು ಎಪಿಎಂಸಿ ಮತ್ತು ಚಿಕ್ಕನಹಳ್ಳಿಗಳಲ್ಲಿ ಪಾರ್ಕಿಂಗ್‌ ಮಾಡಬೇಕು.

ಹದಡಿ ರಸ್ತೆ ಮೂಲಕ ಬರುವ ವಾಹನಗಳು ಡಿಆರ್‌ಎಂ ಸೈನ್ಸ್‌ ಕಾಲೇಜು, ಹೈಸ್ಕೂಲ್‌ ಮೈದಾನ, ಯುಬಿಡಿಟಿ ಎಂಜಿನಿಯರಿಂಗ್‌ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್‌ ಮಾಡಬೇಕು.

ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಹರಿಹರ ಕಡೆಯಿಂದ ಹಳೇ ಕುಂದವಾಡ ಮೂಲಕ ಬರುವ ವಾಹನಗಳು ಕುಂದವಾಡ ಕೆರೆಯ ಬಳಿ ಪಾರ್ಕಿಂಗ್ ಮಾಡಬೇಕು.

ಹರಪನಹಳ್ಳಿ, ಬಳ್ಳಾರಿ, ವಿಜಯನಗರ, ಕೊಪ್ಪಳ, ವಿಜಯಪುರ, ರಾಯಚೂರು, ಬೀದರ್‌, ಕಲಬುರಗಿ, ಗದಗ, ಯಾದಗಿರಿ, ಹೊಸಪೇಟೆಯಿಂದ ಬರುವ ವಾಹನಗಳು ಕೇಂದ್ರಿಯ ವಿದ್ಯಾಲಯದ ಜಾಗದಲ್ಲಿ ನಿಲ್ಲಬೇಕು.

ಬಸ್‌ ನಿಲ್ದಾಣ ತಾತ್ಕಾಲಿಕ ಸ್ಥಳಾಂತರ

ದಾವಣಗೆರೆ ನಗರದಲ್ಲಿ ಇರುವ ಖಾಸಗಿ, ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಗಳನ್ನು ತಾತ್ಕಾಲಿಕವಾಗಿ ನಗರದ ಹೊರವಲಯಕ್ಕೆ ಸ್ಥಳಾಂತರಿಸಲಾಗಿದೆ. ನಗರದಲ್ಲಿ ಶನಿವಾರ ಎಲ್ಲ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ನಡೆಯುವ ಸ್ಥಳದಿಂದ 2 ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಡ್ರೋನ್‌ ಹಾರಾಟವನ್ನು ನಿಷೇಧಿಸಲಾಗಿದೆ. ಸಮಾವೇಶ ಸ್ಥಳದ ಸುತ್ತಮುತ್ತ ಎಲ್ಲ ವಾಹನಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT