ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಪಾಲಿಕೆ ಗದ್ದುಗೆ ಹಿಡಿದ ಕಾಂಗ್ರೆಸ್‌

Published : 27 ಸೆಪ್ಟೆಂಬರ್ 2024, 14:10 IST
Last Updated : 27 ಸೆಪ್ಟೆಂಬರ್ 2024, 14:10 IST
ಫಾಲೋ ಮಾಡಿ
Comments

ದಾವಣಗೆರೆ: ಇಲ್ಲಿನ ಮಹಾನಗರ ಪಾಲಿಕೆಯ ಗದ್ದುಗೆ ಹಿಡಿಯುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದ್ದು, ಮೇಯರ್ ಆಗಿ ಕೆ. ಚಮನ್ ಸಾಬ್, ಉಪಮೇಯರ್ ಆಗಿ ಸೋಗಿ ಶಾಂತಕುಮಾರ್ ಆಯ್ಕೆಯಾದರು.

ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ 14ನೇ ವಾರ್ಡ್‌ನ ಚಮನ್‌ ಸಾಬ್‌, 18ನೇ ವಾರ್ಡ್‌ನ ಸೋಗಿ ಶಾಂತಕುಮಾರ್‌ ಆಯ್ಕೆಯಾಗುವ ಮೂಲಕ ಗೆಲುವಿನ ನಗೆ ಬೀರಿದರು.

ಚಮನ್ ಸಾಬ್‌ ಮೇಯರ್‌ ಆಗುವ ಮೂಲಕ ನಗರಸಭೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿದ ನಂತರ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸದಸ್ಯರೊಬ್ಬರಿಗೆ ಪಟ್ಟ ಒಲಿದಿದೆ.

ಮೇಯರ್‌ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಚಮನ್ ಸಾಬ್, ಬಿಜೆಪಿಯಿಂದ ವಾರ್ಡ್‌ 24ರ ಸದಸ್ಯ ಕೆ. ಪ್ರಸನ್ನಕುಮಾರ್‌ ನಾಮಪತ್ರ ಸಲ್ಲಿಸಿದ್ದರು. ಪ್ರಸನ್ನಕುಮಾರ್‌ 17 ಮತಗಳನ್ನು ಪಡೆದರೆ ಚಮನ್ ಸಾಬ್‌ 30 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದರು.

ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ವಾರ್ಡ್‌ 25ರ ಸದಸ್ಯ ಎಸ್.ಟಿ. ವೀರೇಶ್ ಹಾಗೂ ಕಾಂಗ್ರೆಸ್‌ನಿಂದ 18ನೇ ವಾರ್ಡ್‌ನ ಸೋಗಿ ಶಾಂತಕುಮಾರ್‌ ನಾಮಪತ್ರ ಸಲ್ಲಿಸಿದ್ದರು. ಸೋಗಿ ಶಾಂತಕುಮಾರ್‌ 30 ಮತ, ವೀರೇಶ್‌ 17 ಮತಗಳನ್ನು ಪಡೆದರು.

ಚುನಾವಣಾಧಿಕಾರಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಮೇಯರ್, ಉಪ ಮೇಯರ್ ಆಯ್ಕೆ ಘೋಷಿಸಿದರು.

ಮೇಯರ್‌ ಸ್ಥಾನವು ಹಿಂದುಳಿದ ವರ್ಗಗಳ ಪ್ರವರ್ಗ ‘ಎ’ ಹಾಗೂ ಉಪ ಮೇಯರ್‌ ಸ್ಥಾನ  ಹಿಂದುಳಿದ ವರ್ಗಗಳ ಪ್ರವರ್ಗ ‘ಬಿ’ಗೆ ನಿಗದಿಯಾಗಿತ್ತು. 45 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಒಬ್ಬ ಸದಸ್ಯರ ನಿಧನದಿಂದ 44 ಸದಸ್ಯ ಬಲಕ್ಕೆ ಕುಸಿದಿತ್ತು.

44 ಪಾಲಿಕೆ ಸದಸ್ಯರು ಸೇರಿದಂತೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್‌, ಇಬ್ಬರು ಶಾಸಕರಾದ ಶಾಮನೂರು ಶಿವಶಂಕರಪ್ಪ, ಎಸ್‌.ಎಸ್‌. ಮಲ್ಲಿಕಾರ್ಜುನ್‌ ಹಾಗೂ ವಿಧಾನಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್‌ ಒಳಗೊಂಡು ಒಟ್ಟು 48 ಜನ ಮತದಾರರು ಮತ ಚಲಾಯಿಸಿದರು.

ಕಾಂಗ್ರೆಸ್‌ನ ಚಮನ್ ಸಾಬ್‌ ದ್ವಿಪ್ರತಿಯಲ್ಲಿ ನಾಮಪತ್ರ ಸಲ್ಲಿಸಿದರು. ಅವರ ಹೆಸರನ್ನು ರಹೀಂ ಸಾಬ್‌ ಹಾಗೂ ಜೆ.ಎನ್‌. ಶ್ರೀನಿವಾಸ್‌ ಸೂಚಿಸಿದರು. ಎ. ನಾಗರಾಜ್‌, ಗಡಿಗುಡಾಳ್‌ ಮಂಜುನಾಥ್‌ ಅನುಮೋದಿಸಿದರು. 

ಉಪ ಮೇಯರ್‌ ಸ್ಥಾನದ ಸೋಗಿ ಶಾಂತಕುಮಾರ್‌ ಅವರೂ ದ್ವಿಪ್ರತಿಯಲ್ಲಿ ನಾಮಪತ್ರ ಸಲ್ಲಿಸಿದರು. ಅವರ ಹೆಸರನ್ನು ಪಾಮೇನಹಳ್ಳಿ ನಾಗರಾಜ್‌, ಸುಧಾ ಇಟ್ಟಿಗುಡಿ ಮಂಜುನಾಥ್ ಸೂಚಿಸಿದರು. ಅಬ್ದುಲ್‌ ಲತೀಫ್ ಸಾಬ್‌, ಮೀನಾಕ್ಷಿ ಜಗದೀಶ್‌ ಅನುಮೋದಿಸಿದರು.

ಮೇಯರ್ ಸ್ಥಾನಕ್ಕೆ ಬಿಜೆಪಿಯ ಪ್ರಸನ್ನಕುಮಾರ್‌ ದ್ವಿಪ್ರತಿಯಲ್ಲಿ ನಾಮಪತ್ರ ಸಲ್ಲಿಸಿದರು. ಆರ್‌. ಶಿವಾನಂದ, ಶಿಲ್ಪಾ ಜಯಪ್ರಕಾಶ್‌ ಸೂಚಕರಾದರು. ಕೆ.ಎಂ. ವೀರೇಶ್‌, ಆರ್‌.ಎಲ್. ಜಯಪ್ರಕಾಶ್‌ ಅನುಮೋದಿಸಿದರು.

ಉಪ ಮೇಯರ್‌ ಸ್ಥಾನಕ್ಕೆ ಎಸ್‌.ಟಿ. ವೀರೇಶ್‌ ಅವರನ್ನು ಯಶೋದಾ ಯಗ್ಗಪ್ಪ ಸೂಚಿಸಿದರು. ವೀಣಾ ನಂಜಪ್ಪ ಅನುಮೋದಿಸಿದರು. ಪಾಲಿಕೆಯ ಆಡಳಿತ ಅವಧಿಗೆ ಉಳಿದಿರುವ 4 ತಿಂಗಳು 20 ದಿನಗಳಿಗೆ ಮೇಯರ್‌ ಆಗಿ ಚಮನ್‌ ಸಾಬ್‌ ಕಾರ್ಯನಿರ್ವಹಿಸಲಿದ್ದಾರೆ.

ಮೇಯರ್‌, ಉಪ ಮೇಯರ್ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಮೇಯರ್ ಹಾಗೂ ಉಪಮೇಯರ್ ಗೆಲುವು ಸಾಧಿಸಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ಕಾಂಗ್ರೆಸ್ ಮುಖಂಡರು ಗೆಲುವಿನ ಸಂಕೇತ ತೋರಿದರು –ಪ್ರಜಾವಾಣಿ ಚಿತ್ರ
ಮೇಯರ್ ಹಾಗೂ ಉಪಮೇಯರ್ ಗೆಲುವು ಸಾಧಿಸಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ಕಾಂಗ್ರೆಸ್ ಮುಖಂಡರು ಗೆಲುವಿನ ಸಂಕೇತ ತೋರಿದರು –ಪ್ರಜಾವಾಣಿ ಚಿತ್ರ
ಮೇಯರ್ ಆಗಿ ಗೆಲುವು ಸಾಧಿಸಿದ ಚಮನ್‌ಸಾಬ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಸಿಹಿ ತಿನ್ನಿಸಿದರು 
ಮೇಯರ್ ಆಗಿ ಗೆಲುವು ಸಾಧಿಸಿದ ಚಮನ್‌ಸಾಬ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಸಿಹಿ ತಿನ್ನಿಸಿದರು 

Highlights - null

Quote - ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ್‌ ಅವರ ಆಶೀರ್ವಾದಿಂದ ಮೇಯರ್‌ ಆಗಿ ಆಯ್ಕೆಯಾಗಿದ್ದು ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನಗರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಕೆ. ಚಮನ್‌ ಸಾಬ್‌ ನೂತನ ಮೇಯರ್

Cut-off box - ಬಿಜೆಪಿಯ ಒಬ್ಬ ಸದಸ್ಯ ಗೈರು ಪಾಲಿಕೆಯಲ್ಲಿ ಬಿಜೆಪಿ 22 ಸದಸ್ಯ ಬಲದಲ್ಲಿ ನಾಲ್ವರು ಈ ಮೊದಲೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಉಳಿದ 18 ಸದಸ್ಯರಲ್ಲಿ ರಾಕೇಶ್‌ ಜಾಧವ್‌ ಚುನಾವಣೆಗೆ ಗೈರಾದರು. ಈ ಮೂಲಕ ಬಿಜೆಪಿ ಅಭ್ಯರ್ಥಿ ಕೇವಲ 17 ಮತ ಪಡೆಯುವಲ್ಲಿ ಮಾತ್ರ ಶಕ್ತರಾದರು.  ಮೂವರು ಪಕ್ಷೇತರ ಅಭ್ಯರ್ಥಿಗಳು ಒಬ್ಬರು ಜೆಡಿಎಸ್‌ ಸದಸ್ಯರು ಸಂಸದೆ ಶಾಸಕರು ಸೇರಿದಂತೆ ಒಟ್ಟು 30 ಮತದಾರರು ಕಾಂಗ್ರೆಸ್‌ ಪರ ಮತ ಚಲಾಯಿಸಿದ್ದರಿಂದ ಕಾಂಗ್ರೆಸ್‌ ಅಭ್ಯರ್ಥಿಗೆ ಗೆಲುವು ಸುಲಭವಾಯಿತು. ಮಧ್ಯಾಹ್ನ 12ರಿಂದ ಮಧ್ಯಾಹ್ನ 1ರವರೆಗೆ ನಾಮಪತ್ರ ಸ್ವೀಕಾರ ಮಧ್ಯಾಹ್ನ 3ಕ್ಕೆ ನಾಮಪತ್ರ ಪರಿಶೀಲನೆ ನಡೆಯಿತು. ಬಳಿಕ ಉಮೇದುವಾರರ ಪಟ್ಟಿ ಘೋಷಿಸಲಾಯಿತು.  ಸದಸ್ಯರಿಗೆ ವಿಪ್‌ ಎರಡೂ ಪಕ್ಷಗಳು ತಮ್ಮ ಸದಸ್ಯರಿಗೆ ವಿಪ್‌ ಜಾರಿಗೊಳಿಸಿದ್ದವು. ಮೇಯರ್‌ ಸ್ಥಾನಕ್ಕೆ ಆಶಾ ಡಿ.ಎಸ್‌ ಕೆ. ಚಮನ್‌ ಸಾಬ್‌ ಹಾಗೂ ರಹೀಂ ಸಾಬ್‌ ನಡುವೆ ಪೈಪೋಟಿ ಇತ್ತು. ಕೊನೆಗೆ ವರಿಷ್ಠರ ಕೃಪಾಕಟಾಕ್ಷವಿದ್ದ ಪಾಲಿಕೆಯ ಹಿರಿಯ ಸದಸ್ಯ ಚಮನ್‌ಸಾಬ್‌ ಒಬ್ಬರೇ ನಾಮಪತ್ರ ಸಲ್ಲಿಸಿದರು. ಉಪಮೇಯರ್‌ ಸ್ಥಾನಕ್ಕೆ ಶಿವಲೀಲಾ ಕೊಟ್ರಯ್ಯ ಹಾಗೂ ಸೋಗಿ ಶಾಂತಕುಮಾರ್‌ ಆಕಾಂಕ್ಷಿಗಳಾಗಿದ್ದರು. ಅಂತಿಮವಾಗಿ ಸೋಗಿ ಶಾಂತಕುಮಾರ್‌ ಮಾತ್ರ ನಾಮ‍ಪತ್ರ ಸಲ್ಲಿಸಿದರು. ಮೇಯರ್‌ ಮತ್ತು ಉಪಮೇಯರ್‌ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಪಕ್ಷದ ನಾಯಕರು ಉತ್ಸುಕತೆ ತೋರದಿರುವ ಬಗ್ಗೆ ಪಾಲಿಕೆಯ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು. ಚುನಾವಣೆಗೆ ಸಂಬಂಧಿಸಿದಂತೆ ಚರ್ಚಿಸಲು ಕರೆದ ಸಭೆಯಲ್ಲಿ ಅನೇಕ ನಾಯಕರು ಗೈರಾಗಿದ್ದರು. ಇದರಿಂದ ಸದಸ್ಯರನ್ನು ಆಕ್ರೋಶಗೊಂಡಿದ್ದರು. ಹೀಗಾಗಿ ಪಾಲಿಕೆ ಚುನಾವಣೆ ವೇಳೆ ಬಿಜೆಪಿ ಸದಸ್ಯರಲ್ಲಿ ಹೆಚ್ಚಿನ ಹುರುಪು ಕಾಣಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT