ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯ ಎಂಕಾಂ ವಿದ್ಯಾರ್ಥಿಗಳಿಗೆ ಬುಧವಾರ ನಡೆದ ಪರೀಕ್ಷೆಯಲ್ಲಿ ಅಪೂರ್ಣ ಪ್ರಶ್ನೆಪತ್ರಿಕೆ ವಿತರಣೆಯಾಗಿದೆ. ವಿದ್ಯಾರ್ಥಿಗಳು ಗೊಂದಲದಲ್ಲಿಯೇ ಉತ್ತರ ಬರೆದಿದ್ದಾರೆ.
ಎಂಕಾಂ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ‘ಬಿಸಿನೆಸ್ ಅಪ್ಲಿಕೇಷನ್ ಅಂಡ್ ಆಪರೇಶನ್ ರಿಸರ್ಚ್’ ವಿಷಯದ ಪರೀಕ್ಷೆ ಬುಧವಾರ ನಡೆಯಿತು. 70 ಅಂಕಗಳಿಗೆ 10 ಪ್ರಶ್ನೆಗಳನ್ನು ನೀಡಲಾಗಿತ್ತು. ಇದರಲ್ಲಿ 5ನೇ ಪ್ರಶ್ನೆಯ ಕೊನೆಯ ಸಾಲು ಮುದ್ರಣಗೊಂಡಿರಲಿಲ್ಲ. ಅಪೂರ್ಣಗೊಂಡಿದ್ದ ಪ್ರಶ್ನೆಯನ್ನು ವಿದ್ಯಾರ್ಥಿಗಳೇ ಅರ್ಥ ಮಾಡಿಕೊಂಡು ಉತ್ತರಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
‘ಅಪೂರ್ಣ ಪ್ರಶ್ನೆ ಪತ್ರಿಕೆಗೆ ಸಂಬಂಧಿದಂತೆ ವಿಶ್ವವಿದ್ಯಾಲಯಕ್ಕೆ ಅಧಿಕೃತ ದೂರು ಬಂದಿಲ್ಲ. ಈ ವಿಷಯವನ್ನು ಸಂಬಂಧಪಟ್ಟವರು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ. ರಮೇಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.