ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಆಸ್ಪತ್ರೆ ತೆರೆಯದಿದ್ದರೆ ಪರವಾನಗಿ ರದ್ದು: ಡಿಸಿ

Last Updated 26 ಮಾರ್ಚ್ 2020, 15:29 IST
ಅಕ್ಷರ ಗಾತ್ರ

ದಾವಣಗೆರೆ: ‘ಕೊರೊನಾ ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳನ್ನು ತೆರೆಯದೇ ಇದ್ದರೆ ಅಂತಹ ಆಸ್ಪತ್ರೆಗಳ ಪರವಾನಗಿಯನ್ನು ರದ್ದುಪಡಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಗುರುವಾರ ಹಮ್ಮಿಕೊಂಡಿದ್ದ ವಿಡಿಯೊ ಸಂವಾದದ ಬಳಿಕ ಜಿಲ್ಲೆಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳನ್ನು ತೆರೆಯುವಂತೆ ಭಾರತೀಯ ವೈದ್ಯಕೀಯ ಸಂಘವು ಖಾಸಗಿ ನರ್ಸಿಂಗ್‌ ಹೋಮ್‌ಗಳಿಗೆ ಮತ್ತು ಕ್ಲಿನಿಕ್‌ಗಳಿಗೆ ತಕ್ಷಣ ಈ ಸೂಚನೆ ನೀಡಬೇಕು ಎಂದು ಆದೇಶಿಸಿದರು.

ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ತಮ್ಮ ಸಂಸ್ಥೆ ನೀಡಿರುವ ಗುರುತಿನ ಚೀಟಿಯನ್ನೇ ಬಳಸಬಹುದು. ಗುರುತಿನ ಚೀಟಿ ಇಲ್ಲದಿದ್ದಲ್ಲಿ ಪಾಲಿಕೆಯಲ್ಲಿ ನೋಡಲ್ ಅಧಿಕಾರಿಗಳ ಬಳಿ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ‘ಖಾಸಗಿ ಆಸ್ಪತ್ರೆಗಳನ್ನು ತೆರೆಸಲು ಪೊಲೀಸ್ ಇಲಾಖೆಯ ಸಹಾಯ ಬೇಕಾಗಿದ್ದರೆ ನೀಡಲಾಗುವುದು. ಜನಸಂದಣಿ ಆಗದಂತೆ ಟೋಕನ್‌ ವ್ಯವಸ್ಥೆ ಮಾಡಬೇಕು. ಅಂತರ ಕಾಯ್ದುಕೊಂಡು ಚಿಕಿತ್ಸೆ ನೀಡಬೇಕು. ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಪೊಲೀಸರು ಯಾವುದೇ ರೀತಿಯ ತೊಂದರೆ ನೀಡುವುದಿಲ್ಲ’ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಹಾಜರಿದ್ದರು.

ಕಠಿಣ ಕ್ರಮಕ್ಕೆ ಸಿಎಂ ಸೂಚನೆ

ಕೊರೊನಾ ಸೋಂಕು ನಿವಾರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಇನ್ನಷ್ಟು ಬಿಗಿ ನಿಲುವು ಅನುಸರಿಸಬೇಕು. ಹೊರ ರಾಜ್ಯಗಳಿಂದ ಬರುವವರನ್ನು ಕಡ್ಡಾಯವಾಗಿ ತಡೆಯಬೇಕು. ಬಂದ್‌ ಆಗಿರುವ ಖಾಸಗಿ ಆಸ್ಪತ್ರೆಗಳನ್ನು ಕೂಡಲೇ ತೆರೆಸಬೇಕು ಎಂದು ಮುಖ್ಯಮಂತ್ರಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಹಲವು ಕ್ರಮಗಳನ್ನು ಕೈಗೊಳ್ಳಲು ಸಲಹೆ ನೀಡಿದರು.

ಮುಚ್ಚಿದ್ದ ಆಸ್ಪತ್ರೆಗಳಿಗೆ ಷೋಕಾಸ್‌ ನೋಟಿಸ್‌

ನಗರದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಗುರುವಾರ ಸಂಜೆ ದಿಢೀರ್‌ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಮುಚ್ಚಿದ್ದ ಆಸ್ಪತ್ರೆಗಳಿಗೆ ಷೋಕಾಸ್‌ ನೋಟಿಸ್‌ ನೀಡುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

‘ಕೇಂದ್ರ ಗೃಹ ಸಚಿವಾಲಯವು ಆಸ್ಪತ್ರೆಗಳನ್ನು ಜೀವನಾವಶ್ಯಕ ಪಟ್ಟಿಗೆ ಸೇರಿಸಿದ್ದು, ಅಗತ್ಯ ಸೇವೆಯನ್ನು ನೀಡುವಂತೆ ನಿರ್ದೇಶನ ನೀಡಿದೆ. ವಾಸ್ತವ ಸ್ಥಿತಿಯನ್ನು ಅರಿಯಲು ಸುಮಾರು 10 ಖಾಸಗಿ ಕ್ಲಿನಿಕ್‌, ಆಸ್ಪತ್ರೆಗಳಿಗೆ ಭೇಟಿ ನೀಡಿದಾಗ ಬಹುತೇಕ ಕಡೆ ಬಾಗಿಲು ಮುಚ್ಚಿರುವುದು ಕಂಡು ಬಂತು. ಒಪಿಡಿಗಳನ್ನು ಮುಚ್ಚಲಾಗಿದ್ದು, ವೈದ್ಯರೂ ಇರಲಿಲ್ಲ. ಒಂದು ಕಡೆಯಂತೂ ‘ಕೋವಿಡ್‌–19 ಬಂದಿರುವುದರಿಂದ ಸರ್ಕಾರದ ನಿರ್ದೇಶನದ ಮೇಲೆ ಮುಚ್ಚಲಾಗಿದೆ’ ಎಂದು ಫಲಕ ಹಾಕಲಾಗಿತ್ತು. ಸರ್ಕಾರ ಇಂತಹ ಆದೇಶ ನೀಡಿಲ್ಲ. ಸೇವೆ ನೀಡದ ಆಸ್ಪತ್ರೆಗಳಿಗೆ ಷೋಕಾಸ್‌ ನೋಟಿಸ್‌ ಜಾರಿಗೊಳಿಸಲಾಗಿದೆ’ ಎಂದು ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT