ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಸೌಲಭ್ಯಕ್ಕೆ ಗೋಮಾಳ ಮಂಜೂರು

ಡಿಸಿ ನಿರ್ಧಾರಕ್ಕೆ ಗ್ರಾಮಸ್ಥರ ಪ್ರತಿರೋಧ
Last Updated 7 ಡಿಸೆಂಬರ್ 2022, 4:24 IST
ಅಕ್ಷರ ಗಾತ್ರ

ಜಗಳೂರು: ‘ಪಟ್ಟಣದ ವಿವಿಧೆಡೆ ದಶಕಗಳಿಂದ ಟೆಂಟ್‌ಗಳಲ್ಲಿ ವಾಸ ಮಾಡುತ್ತಿರುವ ಅಲೆಮಾರಿ ಕುಟುಂಬ ಗಳಿಗೆ ತಾಲ್ಲೂಕಿನ ಉದ್ದಗಟ್ಟ ಗ್ರಾಮದ ಗೋಮಾಳ ಜಾಗದಲ್ಲಿ ನಿವೇಶನಗಳನ್ನು ವಿತರಣೆ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಹವಾಲು ಸ್ವೀಕರಿಸಿ ನಂತರ ಉದ್ದಗಟ್ಟ ಗ್ರಾಮದ ಬಳಿ ಸರ್ಕಾರಿ ಗೋಮಾಳ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದರು.

‘ಗ್ರಾಮದ ಒಟ್ಟು 10 ಎಕರೆ ಸರ್ಕಾರಿ ಜಮೀನಿನಲ್ಲಿ 1.5 ಎಕರೆ‌ ವಿಸ್ತೀರ್ಣದಲ್ಲಿ ಅಲೆಮಾರಿ ಸಿಂಧೋಳ್, ಸುಡಗಾಡು ಸಿದ್ದರ ಸಮುದಾಯಕ್ಕೆ‌ ಸೇರಿದ 40‌ಕ್ಕೂ ಅಧಿಕ ಕುಟುಂಬಗಳ ನಿರಾಶ್ರಿತರಿಗೆ ಶಾಶ್ವತ ಸೂರು ಕಲ್ಪಿಸಲು ಸರ್ಕಾರದಿಂದ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಲು ತೀರ್ಮಾನಿಸಲಾಗಿತ್ತು. ಆದರೆ, ಪಟ್ಟಣದಿಂದ ದೂರ ಎಂದು ಫಲಾನುಭವಿಗಳು ಮುಂದಾಗಿರಲಿಲ್ಲ. ಈಗ ಅವರೇ ಬಂದು ಮನವಿ ಮಾಡಿದ್ದಾರೆ. ಶೀಘ್ರ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ದಾಖಲೆ ಸಂಗ್ರಹಿಸಿ ಮಂಜೂರಾತಿಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಹೇಳಿದರು.

ಗ್ರಾಮಸ್ಥರ ವಿರೋಧ: ಉದ್ದಗಟ್ಟ ಗ್ರಾಮಸ್ಥರು ಸ್ಥಳಕ್ಕೆ ಬಂದು ಪಟ್ಟಣದ ನಿರಾಶ್ರಿತರಿಗೆ ನಿವೇಶನಕ್ಕೆ ಜಾಗ ಮಂಜೂರಾತಿ ವಿಷಯಕ್ಕೆ ವಿರೋಧ ವ್ಯಕ್ತಪಡಿಸಿದರು. ‘ನಮ್ಮ ಗ್ರಾಮದಲ್ಲೂ ಸಾಕಷ್ಟು ಸೂರಿಲ್ಲದ ನಿರಾಶ್ರಿತರಿದ್ದಾರೆ. ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆ ಅಗತ್ಯವಿದೆ. ಉದ್ದಗಟ್ಟ ಸೇರಿದಂತೆ ಆಸುಪಾಸಿನ ಗ್ರಾಮಗಳಿಗೆ ಸೇರಿದ ಜಾನುವಾರುಗಳಿಗೆ ಮೇವಿನ ಏಕೈಕ ಗೋಮಾಳ ಇದಾಗಿದ್ದು, ಬೇರೆಯವರಿಗೆ ಅನ್ಯ ಉದ್ದೇಶಕ್ಕೆ ಜಮೀನು ಮಂಜೂರಾತಿ ನೀಡಲು ಹೊರಟಿರುವ ಜಿಲ್ಲಾಡಳಿತದ ಕ್ರಮಕ್ಕೆ ವಿರೋಧವಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಪ್ರತಿಕ್ರಿಯಿಸಿ, ‘ಸರ್ಕಾರಿ ಜಮೀನು ನಿಮ್ಮ ಗ್ರಾಮಕ್ಕೆ‌ ಮಾತ್ರವಲ್ಲ. ಅಲೆಮಾರಿ ಸಮುದಾಯ, ಹಾಗೂ ವಸತಿಶಾಲೆ ಇತರೆ ಇಲಾಖೆಗಳಿಗೆ ನಿಗದಿಗೊಳಿಸಲಾಗಿದೆ. ಗ್ರಾಮಸ್ಥರಾದ ತಾವು ಸಹಕರಿಸಬೇಕು. ವಿನಾಕರಣ ಅಡ್ಡಿ ಪಡಿಸಬೇಡಿ’ ಎಂದರು.

ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ತಹಶೀಲ್ದಾರ್ ಜಿ.ಸಂತೋಷ್ ಕುಮಾರ್, ಸಮಾಜ ಕಲ್ಯಾಣ‌ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರಪ್ಪ ಬಿ.
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT