ಮಂಗಳವಾರ, ಅಕ್ಟೋಬರ್ 26, 2021
24 °C
ಆವರಗೊಳ್ಳದ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಲಹೆ

ಟೈಲರ್‌ಗಳಿಗೆ ಸರ್ಕಾರದ ಅನುದಾನ ತಲುಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಟೈಲರ್ ವೃತ್ತಿ ಮಾಡುವವರು ಸೂಜಿ ದಾರದಿಂದ ಬಟ್ಟೆ ಹೊಲಿದಂತೆ ಎಲ್ಲರ ಮನಸ್ಸನ್ನು ಬೆಸೆಯುವ ಪವಿತ್ರ ಕೆಲಸ ಮಾಡುತ್ತಿದ್ದಾರೆ ಎಂದು ಆವರಗೊಳ್ಳದ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಶ್ಲಾಘಿಸಿದರು.

ಕರ್ನಾಟಕ ರಾಜ್ಯ ಹೊಲಿಗೆ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದಿಂದ ನಗರದ ರೋಟರಿ ಬಾಲಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ಹೊಲಿಗೆ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಉದ್ಘಾಟನೆ, ಕಾರ್ಮಿಕ ಇಲಾಖೆಯಿಂದ ದರ್ಜಿಗಳಿಗೆ ಫುಡ್‍ಕಿಟ್ ವಿತರಣೆ ಹಾಗೂ ಹಿರಿಯ ದರ್ಜಿಗಳಿಗೆ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿ ಕತ್ತರಿ ಹಾಕುವವರೇ ಹೆಚ್ಚು. ಆದರೆ ದರ್ಜಿಗಳು ಮಾತ್ರ ಬೇಡವಾದದ್ದಕ್ಕೆ ಕತ್ತರಿ ಹಾಕಿ, ಸೂಜಿದಾರದಿಂದ ಬಟ್ಟೆಯನ್ನು ಹೊಲಿಯುವ ಮೂಲಕ ಶ್ರೀಮಂತ, ಬಡವ ಎನ್ನದೇ ಅವರ ಮರ್ಯಾದೆ ಕಾಪಾಡುತ್ತಿದ್ದಾರೆ. ಅವರ ಕಾಯಕಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ’ ಎಂದು ಆವರಗೊಳ್ಳದ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಶ್ರೀಗಳು ಹೇಳಿದರು.

‘ಟೈಲರಿಂಗ್ ವೃತ್ತಿಯನ್ನು ಇಂತಹವರೇ ಮಾಡಬೇಕು ಎನ್ನುವ ನಿರ್ಬಂಧವಿಲ್ಲ. ಕೌಶಲ ಗೊತ್ತಿರುವ ಎಲ್ಲರೂ ಮಾಡಬಹುದು. ದರ್ಜಿಗಳು ನಿಮ್ಮ ಕುಲಕಸುಬನ್ನು ಕೀಳರಿಮೆಯಿಂದ ಕಾಣಬೇಡಿ. ಆಯ್ಕೆ ಮಾಡಿಕೊಂಡಿರುವ ವೃತ್ತಿಯ ಬಗ್ಗೆ ಸಂತಸಪಡಿ’ ಎಂದು ಸಲಹೆ ನೀಡಿದರು.

‘ಸರ್ಕಾರ ಕಾರ್ಮಿಕರ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ಇಟ್ಟಿದೆ. ಆದರೆ, ಅದನ್ನು ಸರಿಯಾಗಿ ನಿಮಗೆ ಮುಟ್ಟಿಸುವ ಕೆಲಸವಾಗುತ್ತಿಲ್ಲ. ಸರ್ಕಾರದ ಸೌಲಭ್ಯಗಳನ್ನು ಈ ಸಂಘಟನೆಯ ಮೂಲಕ ಪಡೆದು ನಿಮ್ಮ ಬದುಕಿನ ತಾಪತ್ರಯಗಳಿಂದ ಹೊರಬನ್ನಿ’ ಎಂದು ತಿಳಿಸಿದರು.

ಮೇಯರ್ ಎಸ್.ಟಿ. ವೀರೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ನಮ್ಮ ದೇಶದಲ್ಲಿ ಜೀವ ವಿಮೆ ಮಾಡಿಸಿಕೊಳ್ಳುವವರ ಕಾರ್ಮಿಕರು ಕಡಿಮೆ ಇದ್ದಾರೆ. ವಿದೇಶದಲ್ಲಿ ಶೇ 80ರಿಂದ 90ರಷ್ಟು ಮಂದಿ ವಿಮೆ ಮಾಡಿಸಿಕೊಂಡರೆ ನಮ್ಮ ದೇಶದಲ್ಲಿ ಶೇ 2ರಿಂದ 3ರಷ್ಟು ಕಾರ್ಮಿಕರು ಮಾತ್ರ ಮಾಡಿಸಿಕೊಳ್ಳುತ್ತಿದ್ದಾರೆ. ವಿಮೆಯನ್ನು ನಿಮ್ಮನ್ನೇ ನಂಬಿರುವ ಕುಟುಂಬದವರಿಗೆ ಸಹಾಯವಾಗುತ್ತದೆ’ ಎಂದು ತಿಳಿಸಿದರು.

ಕಾರ್ಮಿಕ ಇಲಾಖೆ ಸಹಾಯಕ ನಿರ್ದೇಶಕ ಇಬ್ರಾಹಿಂಸಾಬ್ ಮಾತನಾಡಿ, ‘ಲಾಕ್‌ಡೌನ್ ವೇಳೆ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಸರ್ಕಾರದಿಂದ ಪರಿಹಾರ ಧನ, ದಿನಸಿ ಕಿಟ್ ನೀಡಲಾಗಿದ್ದು, ಜಿಲ್ಲೆಯಲ್ಲಿ ಈಗಾಗಲೇ 82 ಸಾವಿರ ಕಟ್ಟಡ ಕಾರ್ಮಿಕರಿಗೆ ಹಲವು ಸಂಘಟನೆಗಳ ಸಹಕಾರದಿಂದ ಫುಡ್‍ಕಿಟ್ ವಿತರಿಸಲಾಗಿದೆ. 11 ಅಸಂಘಟಿತ ಕಾರ್ಮಿಕರಿಗೆ ಶೀಘ್ರದಲ್ಲಿ  ₹2 ಸಾವಿರ ಪರಿಹಾರ ಧನ ಅವರ ಖಾತೆಗೆ ತಲುಪಿಸಲಾಗುವುದು’ ಎಂದು ಹೇಳಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಜಿ. ಯಲ್ಲಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಎಲ್ಲರಿಗೂ ಬಟ್ಟೆ ಹೊಲಿದುಕೊಟ್ಟು ಮರ್ಯಾದೆ ಮುಚ್ಚುವ ಕೆಲಸ ಮಾಡುವ ಟೈಲರ್‌ಗಳ ಬದುಕೇ ಇಂದು ಮೂರಾಬಟ್ಟೆಯಾಗಿದೆ. ಆದ್ದರಿಂದ, ಟೈಲರ್ ಕಲ್ಯಾಣ ಮಂಡಳಿಯನ್ನು ಜಾರಿ ಮಾಡಿ, ಸರ್ಕಾರದ ವಿವಿಧ ಸವಲತ್ತುಗಳನ್ನು ನೀಡುವ ಮೂಲಕ ಟೈಲರ್‌ಗಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣರಾವ್ ಸುತ್ರಾವೆ, ಚಂದ್ರಶೇಖರ್ ಕೆ. ಗಣಪ, ಶ್ರೀನಿವಾಸ್ ಇಂಡಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.