ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ವಿವಿಧ ಬೇಡಿಕೆಗಳಿಗೆ ಆಗ್ರಹ: ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ

Published 23 ಫೆಬ್ರುವರಿ 2024, 6:29 IST
Last Updated 23 ಫೆಬ್ರುವರಿ 2024, 6:29 IST
ಅಕ್ಷರ ಗಾತ್ರ

ದಾವಣಗೆರೆ: ಬೆಂಬಲ ಬೆಲೆಗೆ ಕಾನೂನು ಮಾನ್ಯತೆ, ದೀಟೂರು, ಸಾಸ್ವೇಹಳ್ಳಿ ಏತ ನೀರಾವರಿ ಕಾಮಗಾರಿಗೆ ಚುರುಕು, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ ಒಳಗೊಂಡಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ(ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಫೆ.19ರಂದು ಚನ್ನಗಿರಿ ತಾಲ್ಲೂಕು ನಲ್ಲೂರಿನಿಂದ ಪಾದಯಾತ್ರೆ ಆರಂಭಿಸಿ 67 ಕಿ.ಮೀ ಕ್ರಮಿಸಿ ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.

‘ಕೇಂದ್ರ, ರಾಜ್ಯ ಸರ್ಕಾರದ ಬೆಂಬಲ ಬೆಲೆಗೆ ಸೂಕ್ತ ಕಾನೂನಾತ್ಮಕ ರೂಪ ನೀಡಬೇಕು. ಆಗ ಮಾತ್ರ ಬೆಂಬಲ ಬೆಲೆ ಯೋಜನೆಗೆ ನಿಜವಾದ ಅರ್ಥ ಬರುತ್ತದೆ. ಮಾರುಕಟ್ಟೆಯಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಕೃಷಿ ಉತ್ಪನ್ನ ಖರೀದಿಸಿದವರಿಗೆ 6 ತಿಂಗಳ ಜೈಲು ಶಿಕ್ಷೆ, ಪರವಾನಗಿ ರದ್ಧತಿ ಒಳಗೊಂಡಂತೆ ಸೂಕ್ತ ಕ್ರಮ ತೆಗೆದುಕೊಂಡಲ್ಲಿ ಕೃಷಿ ಉತ್ಪನ್ನಗಳಿಗೆ ಬೆಲೆ ದೊರೆಯುತ್ತದೆ. ಇಲ್ಲವಾದಲ್ಲಿ ಬೆಂಬಲ ಬೆಲೆ ಯೋಜನೆ ಪ್ರಯೋಜನಕ್ಕೆ ಬರುವುದೇ ಇಲ್ಲ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ತಿಳಿಸಿದರು.

‘ಬಗರ್‌ಹುಕುಂ ಸಾಗುವಳಿದಾರರು ಹಕ್ಕುಪತ್ರಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿದ್ದು, ತಾಲೂಕಿನಾದ್ಯಂತ ವಜಾಗೊಳಿಸಿದ್ದನ್ನು ತಕ್ಷಣ ಮರು ಪರಿಶೀಲಿಸಿ, ಹಕ್ಕುಪತ್ರ ನೀಡಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯ ಸರ್ಕಾರ ಅಕ್ರಮ- ಸಕ್ರಮ ವಿದ್ಯುತ್ ಯೋಜನೆ ಪುನಾರಂಭಿಸಬೇಕು. ಕೃಷಿ ಭಾಗ್ಯ ಯೋಜನೆಗೆ ಕೈಬಿಟ್ಟಿರುವ ಚನ್ನಗಿರಿ, ಹೊನ್ನಾಳಿ ತಾಲ್ಲೂಕನ್ನು ಸೇರ್ಪಡೆ ಮಾಡಬೇಕು. ಅರಣ್ಯ ಇಲಾಖೆಯವರು ಉಳುಮೆ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸುವುದನ್ನ ತಕ್ಷಣವೇ ನಿಲ್ಲಿಸಬೇಕು. ಸರ್ಕಾರ ರೈತರ ಎಲ್ಲ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದ್ಯಾಂತ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಮನವಿ ಸ್ವೀಕರಿಸಿ ಮಾತನಾಡಿ, ಸಂಬಂಧಪಟ್ಟ ಇಲಾಖೆಗಳ ಜೊತೆ ಸಭೆ ಕರೆದು ಬೇಡಿಕೆ ಈಡೇರಿಸುವ ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಚಿಕ್ಕಯಲೋದಹಳ್ಳಿ ಚಿರಂಜೀವಿ, ರಾಜನಹಟ್ಟಿ ರಾಜು, ಕಾಡನಕಟ್ಟೆ ತಿಪ್ಪೇಸ್ವಾಮಿ, ಕಡರನಾಯ್ಕನಹಳ್ಳಿ ಪ್ರಭು, ಅರಕೆರೆ ನಾಗರಾಜು, ಯಲೋದಹಳ್ಳಿ ರವಿಕುಮಾರ್, ಅಂಜಿನಪ್ಪ ಪೂಜಾರ್, ಬಾಲಾಜಿ, ಅಸ್ತಾಫನಹಳ್ಳಿ ಗಂಡುಗಲಿ, ಬಸಣ್ಣ, ಕೋಗನೂರು ಕುಮಾರ್, ಹೂವಿನಮಡು ನಾಗರಾಜು, ರಂಗನಾಥ್, ಅಣ್ಣಪ್ಪ, ಪುನೀತಕುಮಾರ್, ಕರಿಯಪ್ಪ, ಭೀಮಪ್ಪ, ಚಂದ್ರಪ್ಪ, ಪೀರಾನಾಯ್ಕ, ಮಂಜಪ್ಪ, ಕುಮಾರ, ಪ್ರವೀಣ, ಮಂಜಪ್ಪ, ಪ್ರಕಾಶ, ಆಂಜನೇಯ, ವೆಂಕಟೇಶ್, ಮಹಾ ಬಲೇಶ, ಆರ್.ನಾಗರಾಜ್, ಕೈದಾಳ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT