ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಚ್ಚಿನ ಪ್ರಾಧ್ಯಾಪಕರಿಗೆ ಶಿಷ್ಯರಿಂದ ‘ರಾಯಲ್‌ ಟ್ರೀಟ್‌’

ಜನ್ಮದಿನಕ್ಕೆ ಹೆಲಿಕಾಪ್ಟರ್‌, ರೋಲ್ಸ್‌ ರಾಯ್ಸ್‌ನಲ್ಲಿ ಪ್ರಯಾಣ
Last Updated 10 ಜುಲೈ 2019, 14:42 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಬಾಪೂಜಿ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ, ವಕ್ರದಂತ ತಜ್ಞ ಡಾ. ಕೆ. ಸದಾಶಿವ ಶೆಟ್ಟಿ ಅವರ ಪಾಲಿಗೆ ಮಂಗಳವಾರ ಅವಿಸ್ಮರಣೀಯ ದಿನ. ಕಾಲೇಜಿನ ಹಳೆ ವಿದ್ಯಾರ್ಥಿಗಳಾಗಿರುವ ದಂತ ವೈದ್ಯರು ದಾವಣಗೆರೆಯಿಂದ ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ‘ರೋಲ್ಸ್‌ ರಾಯ್ಸ್‌’ ಐಷಾರಾಮಿ ಕಾರಿನಲ್ಲಿ ಜಾಲಿ ರೈಡ್‌ ಮಾಡಿಸಿ ಅವರ ಜನ್ಮದಿನ ಆಚರಿಸಿದರು.

ಬಾಪೂಜಿ ವೈದ್ಯಕೀಯ ಕಾಲೇಜಿನ ವಕ್ರದಂತ ಚಿಕಿತ್ಸಾ ವಿಭಾಗದ ಹಳೆ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಪ್ರಾಧ್ಯಾಪಕ ಡಾ. ಸದಾಶಿವ ಶೆಟ್ಟಿ ಅವರ 65ನೇ ಜನ್ಮದಿನವನ್ನು ವಿನೂತನವಾಗಿ ಆಚರಿಸಿ, ‘ಗುರು ಕಾಣಿಕೆ’ ನೀಡುವ ಮೂಲಕ ಒಂದು ವಾರ ಮೊದಲೇ ‘ಗುರುಪೂರ್ಣಿಮೆ’ ಆಚರಿಸಿದರು! ದೇಶ– ವಿದೇಶಗಳಿಂದ ಬಂದಿದ್ದ 150ಕ್ಕೂ ಹೆಚ್ಚು ದಂತ ವೈದ್ಯರು ಗುರುವಿಗೆ ‘ರಾಯಲ್‌ ಟ್ರೀಟ್‌’ ನೀಡಿದರು.

ಬಾಪೂಜಿ ದಂತ ವೈದ್ಯಕೀಯ ಕಾಲೇಜಿನಲ್ಲಿ 39 ವರ್ಷ ಸೇವೆ ಸಲ್ಲಿಸಿರುವ ಸದಾಶಿವ ಶೆಟ್ಟಿ ಇದೇ ತಿಂಗಳು ನಿವೃತ್ತಿ ಹೊಂದುತ್ತಿದ್ದಾರೆ.

ಸರಳವಾಗಿ ಸಮಾರಂಭ ಇಟ್ಟುಕೊಂಡಿರುವುದಾಗಿ ಡಾ. ಶೆಟ್ಟಿ ಅವರಿಗೆ ಹೇಳಿದ್ದ ಹಳೆಯ ವಿದ್ಯಾರ್ಥಿಗಳು, ಮಂಗಳವಾರ ಬೆಳಿಗ್ಗೆ ಕಾಲೇಜಿನಿಂದ ಅವರನ್ನು ಬೆಂಜ್‌ ಕಾರಿನಲ್ಲಿ ಕರೆದುಕೊಂಡು ಎಂಬಿಎ ಕಾಲೇಜು ಮೈದಾನಕ್ಕೆ ಬಂದರು. ಬೆಂಗಳೂರಿಗೆ ತೆರಳಲು ಹೆಲಿಕಾಪ್ಟರ್‌ ಗೊತ್ತು ಮಾಡಿದ್ದನ್ನು ಕಂಡು ಡಾ. ಶೆಟ್ಟಿ ಭಾವುಕರಾದರು. ಅಷ್ಟರೊಳಗೆ ಅವರ ಪತ್ನಿ ಭಾನುಮತಿ ಶೆಟ್ಟಿ ಅವರೂ ಬಂದರು. ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ ಬಂದಿಳಿದಾಗ ಹಲವು ಹಳೆಯ ವಿದ್ಯಾರ್ಥಿಗಳು ಅವರಿಗೆ ಹೂಮಾಲೆ ಹಾಕಿ ಶುಭ ಕೋರಿದರು. ಬಾಡಿಗೆಗೆ ಗೊತ್ತು ಮಾಡಿದ್ದ ‘ರೋಲ್ಸ್‌ ರಾಯ್ಸ್‌’ ಕಾರಿನಲ್ಲಿ ‘ತಾಜ್‌ ವೆಸ್ಟ್‌ ಎಂಡ್‌’ ಹೋಟೆಲ್‌ಗೆ ಕರೆದುಕೊಂಡು ಹೋದರು. ‘ಆದರ್ಶ ಹ್ಯಾಮಿಲ್ಟನ್‌’ ಹೋಟೆಲ್‌ನಲ್ಲಿ ಮಧ್ಯಾಹ್ನದ ಭೋಜನಕೂಟ ಆಯೋಜಿಸಿದ್ದರು.

ಬೆಂಗಳೂರು ಕ್ಲಬ್‌ನಲ್ಲಿ ಸಂಜೆ ವಿಶೇಷವಾಗಿ ಆಯೋಜಿಸಿದ್ದ ಜನ್ಮದಿನದ ಪಾರ್ಟಿಯಲ್ಲಿ ವಿದ್ಯಾರ್ಥಿಗಳು ಡಾ. ಶೆಟ್ಟಿ ಅವರನ್ನು ಸತ್ಕರಿಸಿದರು. ಅವರ ಬದುಕಿನ ಕುರಿತು ‘ಟೀ ವಿಥ್‌ ಟೈಗರ್‌’ ಎಂಬ ಸಂದರ್ಶನವನ್ನೂ ನಡೆಸಿಕೊಡಲಾಯಿತು. ವಿದ್ಯಾರ್ಥಿ ಡಾ. ವಿಶ್ವಪೂರ್ಣ ನಿರ್ಮಿಸಿದ್ದ ಸಿನಿಮಾವನ್ನೂ ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ನ್ಯೂಜಿಲೆಂಡ್‌, ದುಬೈ, ಮಸ್ಕತ್‌, ಅಬುಧಾಬಿಯಿಂದಲೂ ಬಂದಿದ್ದ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುವಿಗೆ ಗೌರವ ಸಲ್ಲಿಸಿದರು.

‘ಸದಾಶಿವ ಶೆಟ್ಟಿ ನಿಷ್ಠುರ ಪ್ರಾಧ್ಯಾಪಕರಾಗಿದ್ದರು. ನಾವು ಅವರನ್ನು ಟೈಗರ್‌ ಎಂದೇ ಕರೆಯುತ್ತಿದ್ದೆವು. ಅವರಿಂದ ಕಲಿತ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂದು ದಂತ ವೈದ್ಯಕೀಯ ಕಾಲೇಜುಗಳ ಪ್ರಾಂಶುಪಾಲರಾಗಿದ್ದಾರೆ. ದೇಶ–ವಿದೇಶಗಳಲ್ಲಿ ಖ್ಯಾತ ದಂತ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಅವರ ಜನ್ಮದಿನವನ್ನೇ ದೊಡ್ಡ ಹಬ್ಬವನ್ನಾಗಿ ಆಚರಿಸಲು ಹಳೆ ವಿದ್ಯಾರ್ಥಿಗಳು ನಿರ್ಧರಿಸಿ, ಆರು ತಿಂಗಳಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು’ ಎಂದು ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ಮುಖಂಡ ಡಾ. ಎ.ಟಿ. ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

**

ಈಗಿನ ಕಾಲದಲ್ಲಿ ಕಾಲೇಜು ಮುಗಿದ ಮೇಲೆ ವಿದ್ಯಾರ್ಥಿಗಳು ಪ್ರಾಧ್ಯಾಪಕರನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದೇ ಅಪರೂಪ. ಹೀಗಿರುವಾಗ ವಿದೇಶದಿಂದ ಬಂದು ನನ್ನ ಜನ್ಮದಿನ ಆಚರಿಸಿರುವುದಕ್ಕೆ ಹೆಮ್ಮೆ ಎನಿಸುತ್ತದೆ.
– ಡಾ. ಕೆ. ಸದಾಶಿವ ಶೆಟ್ಟಿ, ಪ್ರಾಂಶುಪಾಲ, ಬಾಪೂಜಿ ದಂತ ವೈದ್ಯಕೀಯ ಕಾಲೇಜು

**

ಸದಾಶಿವ ಶೆಟ್ಟಿ ನಮ್ಮ ಕೈಹಿಡಿದು ವಿದ್ಯೆ ಕಲಿಸಿಕೊಟ್ಟಿದ್ದಾರೆ. ಯಾವೊಬ್ಬ ವಿದ್ಯಾರ್ಥಿಯಿಂದ ಏನನ್ನೂ ನಿರೀಕ್ಷಿಸಿರಲಿಲ್ಲ. ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ವಿನೂತನವಾಗಿ ಅವರ ಜನ್ಮದಿನ ಆಚರಿಸಿದ್ದೇವೆ.
– ಡಾ. ಎ.ಟಿ. ಪ್ರಕಾಶ್‌, ಹಳೆ ವಿದ್ಯಾರ್ಥಿ, ಬಾಪೂಜಿ ದಂತ ವೈದ್ಯಕೀಯ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT