ಜಗಳೂರು: ಜನಸಂಖ್ಯೆ ಹೆಚ್ಚಳ ದೇಶದ ಪ್ರಗತಿ ಕುಂಠಿತಕ್ಕೆ ಕಾರಣವಾಗುತ್ತದೆ ಎಂದು ಗ್ರೇಡ್ -2 ತಹಶೀಲ್ದಾರ್ ಮಂಜಾನಂದ ಅನಿಸಿಕೆ ವ್ಯಕ್ತಪಡಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನಸಂಖ್ಯೆ ಹೆಚ್ಚಳ ಸಂಪನ್ಮೂಲಗಳ ಕೊರತೆಗೆ ಕಾರಣವಾಗುತ್ತದೆ. ಇದರಿಂದ ದೇಶದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಆರೋಗ್ಯ ಇಲಾಖೆಯ ಕುಟುಂಬ ಕಲ್ಯಾಣ ಯೋಜನೆ ಸದುಪಯೋಗ ಮಾಡಿಕೊಳ್ಳುವ ಮೂಲಕ ಚಿಕ್ಕ, ಸುಖಿ ಸಂಸಾರಕ್ಕೆ ಎಲ್ಲರೂ ಒತ್ತು ನೀಡಬೇಕು. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಭಾಗದಲ್ಲಿ ಕಲ್ಯಾಣ ಯೋಜನೆ ಬಗ್ಗೆ ಜನರಿಗೆ ಸಮಗ್ರ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ಬಾಲ್ಯವಿವಾಹಕ್ಕೆ ಕಡಿವಾಣ ಹಾಕಲು ಸಾರ್ವಜನಿಕರು ಇಲಾಖೆ ಜೊತೆ ಸಹಕರಿಸಬೇಕು. ಪಾಲಕರು ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು. ಶಿಕ್ಷಣದಿಂದ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ಸಿಡಿಪಿಒ ಬಿರೇಂದ್ರಕುಮಾರ್ ಹೇಳಿದರು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ನಾಗರಾಜ್ ಮಾತನಾಡಿದರು. ಇದೇ ವೇಳೆ ಜನಸಂಖ್ಯಾ ನಿಯಂತ್ರಣದ ಭಿತ್ತಿಚಿತ್ರ ಬಿಡುಗಡೆ ಮಾಡಲಾಯಿತು.
ಇಸಿಒ ಬಸವರಾಜ್, ಹಿರಿಯ ಆರೋಗ್ಯ ಅಧಿಕಾರಿ ಸುಶೀಲಮ್ಮ, ಪಿಎಚ್‌ಸಿಒಗಳಾದ ಎಚ್. ರೂಪ, ಭಾರತಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.