ಶನಿವಾರ, ಸೆಪ್ಟೆಂಬರ್ 18, 2021
28 °C
ಕಾಂಗ್ರೆಸ್ ಸದಸ್ಯರ ಆರೋಪ

ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಗೆ (ಎಂಜಿಎನ್‌ವಿವೈ) ಸಂಬಂಧಿಸಿದ ಕ್ರಿಯಾ ಯೋಜನೆ ಅನುದಾನ ಹಂಚಿಕೆಯಲ್ಲಿ ಕಾಂಗ್ರೆಸ್ ವಾರ್ಡ್‌ಗಳಿಗೆ ತಾರತಮ್ಯ ಮಾಡಲಾಗಿದೆ ಎಂದು ಮಹಾನಗರಪಾಲಿಕೆ ಕಾಂಗ್ರೆಸ್ ಸದಸ್ಯರು ಆರೋಪಿಸಿದರು.

‘2019–20ನೇ ಸಾಲಿನಿಂದ 2023–24ರವರೆಗೆ ಈ ಯೋಜನೆಯಡಿ ₹125 ಕೋಟಿ ಅನುದಾನ ಹಂಚಿಕೆಯಾಗಲಿದ್ದು,  ವಾರ್ಡ್‌ಗಳಿಗೆ ಸರಿಸಮನಾಗಿ ಹಂಚಿಕೆ ಮಾಡುವುದು ಪರಿಪಾಠ. ಆದರೆ 16, 26, 36 ಹಾಗೂ 5ನೇ ವಾರ್ಡ್‌ಗಳನ್ನು ಕೈಬಿಟ್ಟಿದ್ದು, ಬಿಜೆಪಿ ಸದಸ್ಯರ ವಾರ್ಡ್‌ಗಳಿಗೆ ಹೆಚ್ಚಿನ ಹಾಗೂ ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳಿಗೆ ಕಡಿಮೆ ಅನುದಾನ ಹಂಚಿಕೆ ಮಾಡುವ ಮೂಲಕ ಅನ್ಯಾಯ ಮಾಡಲಾಗಿದೆ’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಬಿಜೆಪಿಯ 21 ವಾರ್ಡ್‌ಗಳಿಗೆ ₹51 ಕೋಟಿ ಅನುದಾನ ನೀಡಿದರೆ ಕಾಂಗ್ರೆಸ್‌ನ 22 ವಾರ್ಡ್‌ಗಳಿಗೆ ₹20 ಕೋಟಿ ಅನುದಾನ ನೀಡಲಾಗಿದೆ. ಶಾಸಕ ಎಸ್.ಎ. ರವೀಂದ್ರನಾಥ್ ಅವರ ಪುತ್ರಿ ವೀಣಾ ನಂಜಪ್ಪ ಅವರು ಪ್ರತಿನಿಧಿಸಿರುವ 40ನೇ ವಾರ್ಡ್‌ಗೆ ₹ 5.15 ಕೋಟಿ ಹಾಗೂ ಮೇಯರ್ ಬಿ.ಜಿ. ಅಜಯ್‌ಕುಮಾರ್ ಅವರು ಪ್ರತಿನಿಧಿಸಿರುವ 17ನೇ ವಾರ್ಡ್‌ಗೆ ₹2.70 ಕೋಟಿ ಅನುದಾನ ಹಂಚಿಕೆ ಮಾಡುವ ಮೂಲಕ ಕಾಂಗ್ರೆಸ್ ಸದಸ್ಯರನ್ನು ಕಡೆಗಣಿಸಲಾಗಿದೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ ಸದಸ್ಯರು ಇರುವ ವಾರ್ಡ್‌ಗಳಲ್ಲಿ ಹೆಚ್ಚಿನವು ಕೊಳಗೇರಿ ವಾರ್ಡ್‌ಗಳಾಗಿದ್ದು, ಅಲ್ಲಿಗೆ ಹೆಚ್ಚಿನ ಅನುದಾನ ನೀಡಬೇಕು. ಆದರೆ ಅಲ್ಲಿಗೆ ಕಡಿಮೆ ಅನುದಾನ ನೀಡಲಾಗಿದೆ. ಬಿಜೆಪಿ ಸದಸ್ಯರು ಪ್ರತಿನಿಧಿಸಿರುವ ವಾರ್ಡ್‌ಗಳಿಗೆ ಕೋಟಿ ಲೆಕ್ಕದಲ್ಲಿ ಅನುದಾನ ಹಂಚಿಕೆ ಮಾಡಿದರೆ ಕಾಂಗ್ರೆಸ್ ಸದಸ್ಯರ ವಾರ್ಡ್‌ ₹30 ಲಕ್ಷ, ₹40 ಲಕ್ಷ ಹಂಚಿದ್ದಾರೆ‘  ಎಂದು ಆರೋಪಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಸಮಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಅಧ್ಯಕ್ಷರಾಗಿದ್ದು, ಶಾಸಕರು, ಸಂಸದರು, ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು ಸದಸ್ಯರಾಗಿರುತ್ತಾರೆ. ಆದರೆ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಇಲ್ಲದ ಸಮಯದಲ್ಲಿ ತರಾತುರಿಯಲ್ಲಿ ಸಭೆ ಮಾಡಿ ಅನುಮೋದನೆಗೆ ಕಳುಹಿಸುವ ಮೂಲಕ ದ್ವೇಷದ ರಾಜಕಾರಣ ಮಾಡಿದ್ದಾರೆ’ ಎಂದು ಆರೋಪಿಸಿದರು.

 ‘ಈ ಕ್ರಿಯಾಯೋಜನೆ ರದ್ದುಗೊಳಿಸಿ ಹೊಸದಾಗಿ ಕ್ರಿಯಾಯೋಜನೆ ರಚಿಸುವಂತೆ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಪಾಲಿಕೆ ಸದಸ್ಯರು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಸರಿಸಮಾನವಾಗಿ ಹಂಚಿಕೆ ಮಾಡುವುದಾಗಿ ಮೇಯರ್ ಹೇಳುತ್ತಿದ್ದಾರೆ. ಕ್ರಿಯಾ ಯೋಜನೆಗೆ ಅನುಮೋದನೆಗೆ ಕಳುಹಿಸಿದ ಮೇಲೆ ಅವರು ಮಾತನಾಡಿ ಪ್ರಯೋಜನವೇನು‘ ಎಂದು ಪ್ರಶ್ನಿಸಿದರು.

15 ದಿನಗಳಲ್ಲಿ ಈ ತಾರತಮ್ಯವನ್ನು ಸರಿಪಡಿಸಿ ಸಮಾನವಾಗಿ ಅನುದಾನ ಹಂಚಿಕೆ ಮಾಡಬೇಕು. ಇಲ್ಲದಿದ್ದರೆ ಮೇಯರ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪಾಲಿಕೆ ಸದಸ್ಯರಾದ ದೇವರಮನಿ ಶಿವಕುಮಾರ್, ಅಬ್ದುಲ್ ಲತೀಫ್, ಮಂಜುನಾಥ್ ಗಡಿಗುಡಾಳ್, ಸಯ್ಯದ್ ಚಾರ್ಲಿ, ಉದಯ್‌ಕುಮಾರ್, ಉಮೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.