ಭಾನುವಾರ, ಜೂನ್ 20, 2021
29 °C
ಈರುಳ್ಳಿ ಬೆಳೆಗೆ ವಿಚಿತ್ರ ರೋಗ: ಕಂಗಾಲಾದ ಬೆಳೆಗಾರರು

ರೋಗ ಬಾಧೆ: ಈರುಳ್ಳಿ ನಾಶಮಾಡಿದ ರೈತರು

ವಿಶ್ವನಾಥ ಡಿ. Updated:

ಅಕ್ಷರ ಗಾತ್ರ : | |

Prajavani

ಹರಪನಹಳ್ಳಿ: ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ಈರುಳ್ಳಿ ಬೆಳೆ ವಿಚಿತ್ರ ರೋಗಕ್ಕೆ ತುತ್ತಾಗಿದ್ದರಿಂದ ಬೇಸತ್ತ ರೈತರು ತಮ್ಮ ಹೊಲದಲ್ಲಿ ಬೆಳೆದಿದ್ದ ಬೆಳೆಯನ್ನು ನಾಶಪಡಿಸುತ್ತಿದ್ದಾರೆ.

ತಾಲ್ಲೂಕಿನ ದಡಗಾರನಹಳ್ಳಿ ಗ್ರಾಮದ ರೈತ ಹಾಲೇಶಪ್ಪ ತಮ್ಮ ಒಂದು ಎಕರೆ ಜಮೀನಿನಲ್ಲಿ ಸೊಂಪಾಗಿ ಬೆಳೆದಿದ್ದ ಈರುಳ್ಳಿಯನ್ನು ಶನಿವಾರ ಟ್ರ್ಯಾಕ್ಟರ್‍ ಹರಿಸಿ ನಾಶಮಾಡಿದರು. ಬೆಳೆಗೆ ತಗುಲಿದ ರೋಗ ವಾಸಿಯಾಗದಿದ್ದರೆ ಗ್ರಾಮದಲ್ಲಿ ಬೆಳೆದ ಪ್ರತಿಯೊಬ್ಬ ಬೆಳೆಗಾರರು ತಮ್ಮ ಹೊಲದ ಈರುಳ್ಳಿ ಬೆಳೆಯನ್ನು ನಾಶಪಡಿಸುವುದು ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

‘ಬಿತ್ತನೆ ಮಾಡಿ ಮೂರು ತಿಂಗಳು ಆಗಿತ್ತು, ಗಿಡಗಳು ಹುಲುಸಾಗಿ ಬೆಳೆದು ಉತ್ತಮವಾಗಿದ್ದವು. ಎರಡೂವರೆ ತಿಂಗಳಲ್ಲಿ ಇಳುವರಿ ಬರುವ ನಿರೀಕ್ಷೆಯಿತ್ತು. ಆದರೆ, ವಿಚಿತ್ರವಾಗಿ ಬಂದಿರುವ ರೋಗಕ್ಕೆ ತುತ್ತಾದ ಗಿಡಗಳು ಒಣಗಿ, ಈರುಳ್ಳಿ ಗಡ್ಡೆ ಕೊಳೆಯಲು ಶುರುವಾಯಿತು. ಇದು ಗಿಡದಿಂದ ಗಿಡಕ್ಕೆ ಬಂದು ಈರುಳ್ಳಿ ಹೊಲವನ್ನೇ ಆವರಿಸಿದೆ. ಇದರ ಜೊತೆಗೆ ಬಿತ್ತನೆ ಮಾಡಿರುವ ಇತರೆ ಬೆಳೆಗಳಿಗೆ ಹಾನಿಯಾಗಬಾರದು. ನಾಶಕ್ಕೆ ಮುಂದಾಗಿದ್ದೇನೆ’ ಎಂದು ರೈತ ಹಾಲೇಶಪ್ಪ ನೊಂದು ನುಡಿದರು.

‘ಇಳುವರಿ ತನಕ ಕಾಯ್ದು ಕುಳಿತರೆ ಸಾವಿರಾರು ರೂಪಾಯಿ ನಷ್ಟ ಅನುಭವಿಸಬೇಕಾಗುತ್ತದೆ. ಒಂದು ಎಕರೆಗೆ ₹ 30 ಸಾವಿರ ಖರ್ಚು ಮಾಡಿ ಈರುಳ್ಳಿ ಬೀಜ ಬಿತ್ತನೆ ಮಾಡಿದ್ದೆವು. ಈ ಬಾರಿ ವರುಣ ಕೃಪೆ ತೋರಿದ್ದ. ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದೆವು. ಆದರೆ, ಈ ರೋಗ ಅದಕ್ಕೆ ತಣ್ಣೀರು ಎರಚಿತು. ಹಾಗಾಗಿ ಬೆಳೆ ಕೆಡಿಸಿ, ರಾಗಿ ಅಥವಾ ಹೂವು ಬೆಳೆಯುವ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ’ ಎಂದು ಯುವ ರೈತ ಕರಿಬಸಪ್ಪ ಅಳಲು ತೋಡಿಕೊಂಡರು.

ಹಾನಿಯಾದ ಈರುಳ್ಳಿ ಬೆಳೆಗೆ ಪರಿಹಾರ ಒದಗಿಸಬೇಕು ಎಂದು ಈರುಳ್ಳಿ ಬೆಳೆಗಾರರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು