ಬುಧವಾರ, ಏಪ್ರಿಲ್ 21, 2021
23 °C
ಉಚಿತ ಶಸ್ತ್ರಚಿಕಿತ್ಸೆಗಾಗಿ ಬಿಪಿಎಲ್‌ ಕಾರ್ಡ್‌ಗೆ ಮೊರೆಯಿಟ್ಟ ಪೋಷಕರು * ಪಿಂಚಣಿ ಹೆಚ್ಚಳಕ್ಕೆ ಅಂಗವಿಕಲರ ಕೂಗು

ಜನರ ಸಮಸ್ಯೆಗಳಿಗೆ ಜಿಲ್ಲಾಡಳಿತದ ಸ್ಪಂದನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮಗುವಿನ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಲು ಬಿಪಿಎಲ್‌ ಕಾರ್ಡ್‌ ಮಾಡಿಸಿಕೊಡುವಂತೆ ಮೊರೆಯಿಟ್ಟ ಪೋಷಕರು. ಪಿಂಚಣಿ ಮೊತ್ತ ಹೆಚ್ಚಿಸುವಂತೆ ಗೋಗರೆದ ಅಂಗವಿಕಲರು. ಸಾಲ ಸೌಲಭ್ಯಕ್ಕೆ ಬೇಡಿಕೆಯಿಟ್ಟ ತರಕಾರಿ ವ್ಯಾಪಾರಿಗಳು. ಅನಧಿಕೃತವಾಗಿ ನಿರ್ಮಿಸಿರುವ ಗುಡಿ ತೆರವುಗೊಳಿಸಿ ಉದ್ಯಾನ ಅಭಿವೃದ್ಧಿಗೊಳಿಸುವಂತೆ ದುಂಬಾಲು ಬಿದ್ದ ಮಹಿಳೆಯರು...

ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಜನಸ್ಪಂದನ ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರ ಎದುರು ಜಿಲ್ಲೆಯ ವಿವಿಧೆಡೆಯಿಂದ ಬಂdದಿದ್ದ 30ಕ್ಕೂ ಹೆಚ್ಚು ನಾಗರಿಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಅಹವಾಲು ಸಲ್ಲಿಸಿದರು.

ರಂಗೋಲಿ ಮಾರಿ ಬದುಕು ಸಾಗಿಸುತ್ತಿರುವ ರಾಜೀವಗಾಂಧಿ ಬಡಾವಣೆಯ ವೆಂಕಟೇಶ ನಾಯ್ಕ ಅವರು ಒಂದು ವರ್ಷ ನಾಲ್ಕು ತಿಂಗಳ ಮಗನಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಲು ಸಾಧ್ಯವಾಗದೇ ಇರುವುದರಿಂದ ಮಗನೊಂದಿಗೆ ಜಿಲ್ಲಾಧಿಕಾರಿ ಬಳಿ ಬಂದಿದ್ದರು. ‘ನನ್ನ ಬಳಿ ಆಧಾರ್‌ ಕಾರ್ಡ್‌ ಇಲ್ಲ. ಹೀಗಾಗಿ ಬಿಪಿಎಲ್‌ ಕಾರ್ಡ್‌ ಕೊಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಮುಗನಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಲು ಬಿಪಿಎಲ್‌ ಕಾರ್ಡ್‌ ಮಾಡಿಸಿಕೊಡಿ’ ಎಂದು ಮನವಿ ಮಾಡಿದರು.

ತಕ್ಷಣವೇ ಸ್ಪಂದಿಸಿದ ಜಿಲ್ಲಾಧಿಕಾರಿ, ‘ಕೂಡಲೇ ಆಧಾರ್‌ ಕಾರ್ಡ್‌ ಮಾಡಿಸಿ, ಬಿಪಿಎಲ್‌ ಕಾರ್ಡ್‌ ಕೊಡುವ ವ್ಯವಸ್ಥೆಯನ್ನು ಮಾಡಬೇಕು’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಮಂಟೇಸ್ವಾಮಿ ಅವರಿಗೆ ಸೂಚಿಸಿದರು. ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಡುವಂತೆ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕರಿಗೂ ನಿರ್ದೇಶನ ನೀಡಿದರು.

ನಗರದ ಇಬ್ಬರು ತರಕಾರಿ ವ್ಯಾಪಾರಿಗಳು ‘ಆತ್ಮನಿರ್ಭರ’ ಯೋಜನೆಯಡಿ ₹ 10 ಸಾವಿರ ಸಾಲಸೌಲಭ್ಯ ಕಲ್ಪಿಸುವಂತೆ ಮಾಡಿದ ಮನವಿ ಆಲಿಸಿದ ಜಿಲ್ಲಾಧಿಕಾರಿ, ಸಾಲ ಕೊಡಿಸುವಂತೆ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಸುಶೃತ ಶಾಸ್ತ್ರಿ ಅವರಿಗೆ ಸೂಚಿಸಿದರು.

ಅಂಗನವಾಡಿ ಕಾರ್ಯಕರ್ತೆಯಾಗಿ ನಿವೃತ್ತಿಯಾದ ಬಳಿಕ ನೀಡಬೇಕಾದ ₹ 50 ಸಾವಿರ ಇಡಗಂಟು ಕೊಡಿಸುವಂತೆ ಚಿಕ್ಕಬೆನ್ನೂರಿನ ಮಹಿಳೆಯೊಬ್ಬರು ಮನವಿ ಮಾಡಿದರು.

ಗುಡಾಳ್‌ ರಸ್ತೆಯಲ್ಲಿ ಅನಧಿಕೃತವಾಗಿ ಮೊಬೈಲ್‌ ಟವರ್‌ ನಿರ್ಮಿಸಲಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ದೂರು ನೀಡಿದಾಗ, ಕೆಲಸ ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ ಅವರಿಗೆ ಸೂಚಿಸಿದರು.

ಹೊನ್ನಾಳಿ ತಾಲ್ಲೂಕಿನ ಗುಡೇಹಳ್ಳಿಯ ವೃದ್ಧರೊಬ್ಬರು, ‘ನಮ್ಮ ಜಾಗದಲ್ಲಿ ಒತ್ತುವರಿ ಮಾಡಿ ಮನೆ ನಿರ್ಮಿಸಲಾಗುತ್ತಿದೆ. ನಮಗೆ ನ್ಯಾಯ ಕೊಡಿಸಿ’ ಎಂದು ಕಣ್ಣೀರು ಹಾಕಿದರು. ಹದಡಿಯ ವೃದ್ಧರೊಬ್ಬರು ಜಮೀನಿನ ಖಾತೆ ಬದಲಾವಣೆ ಮಾಡಿಕೊಡುತ್ತಿಲ್ಲ ಎಂದು ದೂರಿದರು.

ಜಗಳೂರು ತಾಲ್ಲೂಕಿನ ಬಸವನಕೋಟೆಯ ಶ್ರವಣದೋಷವುಳ್ಳ ವ್ಯಕ್ತಿಯೊಬ್ಬರು, ₹ 600 ನೀಡುತ್ತಿರುವ ಪಿಂಚಣಿ ಮೊತ್ತವನ್ನು ₹ 1400ಕ್ಕೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು. ಹುಚ್ಚಂಗಿಪುರದ ಮಹಿಳೆಯೊಬ್ಬರು, ಬಟ್ಟೆ ವ್ಯಾಪಾರ ಮಾಡಲು ₹ 1 ಲಕ್ಷ ಸಬ್ಸಿಡಿ ಹಾಗೂ ₹ 1 ಲಕ್ಷ ಸಾಲ ಸೌಲಭ್ಯವನ್ನು ಮಂಜೂರು ಮಾಡುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಮರಿಗೊಂಡನಹಳ್ಳಿಯ ಎಂಜಿನಿಯರ್‌ ವಿದ್ಯಾರ್ಥಿ ಮಯೂರ, ಬಿಸಿಎಂ ಹಾಸ್ಟೇಲ್‌ನಲ್ಲಿ ಪ್ರವೇಶ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.

ನಗರದ ಶಿವಕುಮಾರಸ್ವಾಮಿ ಬಡಾವಣೆಯ ಮಹಿಳೆಯರು, ‘ಬಡಾವಣೆಯ ಉದ್ಯಾನ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಗುಡಿಯನ್ನು ತೆರವುಗೊಳಿಸಬೇಕು. ಉದ್ಯಾನವನ್ನು ಅಭಿವೃದ್ಧಿಗೊಳಿಸಬೇಕು’ ಎಂದು ಮನವಿ ಮಾಡಿದರು. ಗುಡಿ ತೆರವುಗೊಳಿಸಿ ಉದ್ಯಾನ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ತಮ್ಮ ಹೆಸರನ್ನು ದೇವದಾಸಿಯರ ಪಟ್ಟಿಗೆ ಸೇರಿಸಬೇಕು ಎಂದು 10ಕ್ಕೂ ಹೆಚ್ಚು ಮಹಿಳೆಯರು ಬಂದು ಮನವಿ ಮಾಡಿದಾಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್‌ ಅವರು ಈಗ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಇದರಿಂದ ಸಿಟ್ಟಾದ ಜಿಲ್ಲಾಧಿಕಾರಿ, ‘ಅಧಿಕಾರಿಗಳು ಸಕಾರಾತ್ಮಕ ಮನೋಭಾವದಿಂದ ಕೆಲಸ ಮಾಡಬೇಕು. ನಮ್ಮನ್ನು ನಂಬಿಕೊಂಡು ಬಂದವರಿಗೆ ಏಕಾಏಕಿ ಸಾಧ್ಯವಿಲ್ಲ ಎಂದು ಹೇಳಬಾರದು’ ಎಂದು ತರಾಟೆಗೆ ತೆಗೆದುಕೊಂಡರು. ‘ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ಡಾಲರ್ಸ್‌ ಕಾಲೊನಿಯಲ್ಲಿ ಕೊಳಚೆ ನೀರು ಹರಿಯುತ್ತಿರುವ ಬಗ್ಗೆ ನಾಗರಿಕರು ಗಮನ ಸೆಳೆದಾಗ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಂಗಪ್ಪ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಮಂಟೇಸ್ವಾಮಿ ಅವರು ತಾವೂ ಸಹ ಅಲ್ಲಿಯೇ ವಾಸಿಸುತ್ತಿದ್ದು, ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡಿ ಎಂದು ಧ್ವನಿಗೂಡಿಸಿದರು.

ಗೈರಿಗೆ ಅಸಮಾಧಾನ: ಕೆ.ಎಸ್‌.ಆರ್‌.ಟಿ.ಸಿ, ಪೊಲೀಸ್‌ ಇಲಾಖೆ ಸೇರಿ ಕೆಲ ಇಲಾಖೆಯ ಅಧಿಕಾರಿಗಳು ಜನಸ್ಪಂದನ ಸಭೆಗೆ ಗೈರಾಗಿರುವುದಕ್ಕೆ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ವಿಜಯ ಮಹಾಂತೇಶ ದಾನಮ್ಮನವರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಕಡಲೆ ಖರೀದಿ ಕೇಂದ್ರಕ್ಕೆ ಮನವಿ

ಜಗಳೂರಿನಲ್ಲಿ ಬೆಂಬಲ ಬೆಲೆಯಡಿ ಕಡಲೆ ಖರೀದಿ ಕೇಂದ್ರವನ್ನು ಆರಂಭಿಸಬೇಕು ಎಂದು ರೈತರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ‘ಖರೀದಿ ಕೇಂದ್ರ ತೆರೆಯಲು ಈಗಾಗಲೇ ಒಂದು ಬಾರಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿಕೊಡಲಾಗಿದೆ. ಮತ್ತೊಮ್ಮೆ ಪ್ರಸ್ತಾವ ಕಳುಹಿಸಿಕೊಡುವ ಮೂಲಕ ಶೀಘ್ರದಲ್ಲೇ ಖರೀದಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

15 ದಿನಗಳಿಗೊಮ್ಮೆ ಜನಸ್ಪಂದನ ಸಭೆ

ಕೆಲವು ಇಲಾಖೆಗಳಿಗೆ ಸಂಬಂಧಿಸಿದಂತೆ ಯಾವುದೇ ಅರ್ಜಿಗಳು ಬಾರದೇ ಇರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ಪ್ರತಿ ವಾರ ಜನಸ್ಪಂದನ ನಡೆಸುವುದಕ್ಕಿಂತ ತಿಂಗಳಿಗೆ ಎರಡು ನಡೆಸಿದರೆ ಸಾಕು ಅನಿಸುತ್ತಿದೆ. ಇನ್ನು ಮುಂದೆ ಹದಿನೈದು ದಿನಗಳಿಗೆ ಒಮ್ಮೆ ಜನಸ್ಪಂದನ ಸಭೆ ಮಾಡೋಣ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು