ಕೊಪ್ಪ: ‘ಕಳೆದ ಅಕ್ಟೋಬರ್‌ನಲ್ಲಿ ಶಾನುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಕಟ್ಟೆ ಗ್ರಾಮದಲ್ಲಿ ನಡೆದಿದ್ದ ಹಿಂದುತ್ವ ಪರ ಕಾರ್ಯಕ್ರಮವೊಂದರಲ್ಲಿ ದ್ವೇಷ ಭಾಷಣ ಮಾಡಿದ್ದಕ್ಕೆ ಪ್ರತಿಯಾಗಿ ಈಗ ಚೈತ್ರಾ ಕುಂದಾಪುರ ಅವರಿಗೆ ತಕ್ಕ ಶಾಸ್ತಿಯಾಗಿದೆ’ ಎಂದು ಗ್ರಾಮಸ್ಥರು ಭಾನುವಾರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಅಂದು ಕಾರ್ಯಕ್ರಮ ನಡೆದಿದ್ದ ಸ್ಥಳದಲ್ಲಿ ತೀರ್ಥ ಪ್ರೋಕ್ಷಣೆ ಮಾಡಿದರು.
‘ಕಳೆದ ನಾಲ್ಕೂವರೆ ದಶಕದಿಂದ ಗಣಪತಿ ಉತ್ಸವ ನಡೆಸಿಕೊಂಡು ಬರುತ್ತಿದ್ದೇವೆ. ತುಂಬಾ ಕಷ್ಟದಲ್ಲಿ ಕಾರ್ಯಕ್ರಮ ನಡೆಸಿಕೊಂಡು ಹೋಗುತ್ತಿದ್ದೆವು. ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದವು. ಕಳೆದ ಬಾರಿ ಗಣಪತಿ ಮೆರವಣಿಗೆಯನ್ನು ಕೇಸರೀಕರಣ ಮಾಡಬೇಡಿ ಎಂದು ಹೇಳಿದ್ದಕ್ಕೆ ಕೆಲವರು ಹಿಂದುತ್ವ ಪರ ಕಾರ್ಯಕ್ರಮ ನಡೆಸಿ, ಚೈತ್ರಾ ಕುಂದಾಪುರ ಅವರನ್ನು ಕರೆಯಿಸಿ ಆಕೆಯಿಂದ ದ್ವೇಷ ಭಾಷಣ ಮಾಡಿಸಿದ್ದರು. ಇತರೆ ಸಮುದಾಯದ ಕುರಿತು ಅವಹೇಳನಕಾರಿ ಭಾಷಣ ಮಾಡಿ, ಗ್ರಾಮಸ್ಥರಿಗೆ ಚೈತ್ರಾ ಅಂದು ಮಾನಸಿಕವಾಗಿ ತುಂಬಾ ನೋವು ಕೊಟ್ಟಿದ್ದರು’ ಎಂದು ಗ್ರಾಮಸ್ಥರು ಹೇಳಿದರು.
‘ಆಗ ಮನಸಿನಲ್ಲಿಯೇ ಸಂಕಲ್ಪ ಮಾಡಿ, ಈ ಕೃತ್ಯ ಮಾಡಿದವರಿಗೆ ಪ್ರಾಯಶ್ಚಿತ ನೀಡಬೇಕು ಎಂದು ಗ್ರಾಮದ ದೇವರಲ್ಲಿ ಪ್ರಾರ್ಥನೆ ಮಾಡಲಾಗಿತ್ತು. ಪ್ರಾರ್ಥನೆ ನಡೆಸಿ ಒಂದು ವರ್ಷ ಕಳೆಯುವುದರೊಳಗೆ ಫಲಿಸಿದ್ದರಿಂದ (ಚೈತ್ರಾ ಬಂಧನ ಆಗಿದ್ದರಿಂದ) ದೇವರಿಗೆ ಈಡುಗಾಯಿ ಒಡೆದು, ಸ್ವಾಮಿಯ ಸೇವೆ ನಡೆಸಿದ್ದೇವೆ. ಆಕೆ ಭಾಗವಹಿಸಿದ್ದ, ಕಾರ್ಯಕ್ರಮ ನಡೆದ ಸ್ಥಳದಲ್ಲಿ ತೀರ್ಥ ಪ್ರೋಕ್ಷಣೆ ಮಾಡಲಾಯಿತು’ ಎಂದು ಗ್ರಾಮಸ್ಥರು ತಿಳಿಸಿದರು.