ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಡಿಜೆ, ನೃತ್ಯಕ್ಕೆ ಬ್ರೇಕ್- ಬಣ್ಣದಾಟಕ್ಕೆ ಸೀಮಿತವಾದ ಹೋಳಿ

ರಾಂ ಅಂಡ್ ಕೊ ಸರ್ಕಲ್‌ನಲ್ಲಿ ಕಾಣದ ಸಂಭ್ರಮ
Last Updated 30 ಮಾರ್ಚ್ 2021, 6:40 IST
ಅಕ್ಷರ ಗಾತ್ರ

ದಾವಣಗೆರೆ: ಕೋವಿಡ್ ಎರಡನೇ ಅಲೆಯಿಂದಾಗಿ ಸಾರ್ವಜನಿಕ ಹೋಳಿಗೆ ಜಿಲ್ಲಾಡಳಿತ ಅವಕಾಶ ನೀಡದ ಕಾರಣ ಈ ಬಾರಿ ಹೋಳಿ ಸಂಭ್ರಮ ಮನೆಗಳು ಹಾಗೂ ರಸ್ತೆಗಳಿಗೆ ಮಾತ್ರ ಸೀಮಿತವಾಗಿತ್ತು.

ಪಿಚಕಾರಿ, ಮೊಟ್ಟೆ ಹಾಗೂ ಬಣ್ಣಗಳನ್ನು ಖರೀದಿಸಿ ಇಟ್ಟುಕೊಂಡಿದ್ದ ಮಕ್ಕಳು ಪರಸ್ಪರ ಬಣ್ಣ ಎರಚಿಕೊಂಡು ಖುಷಿಯಿಂದ ಹೋಳಿ ಆಚರಿಸಿದರು. ಮನೆಯ ಮುಂಭಾಗ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರಿಗೆ ಬಣ್ಣದ ನೀರನ್ನು ಎರಚಿ ಸಂಭ್ರಮಿಸಿದರು.

ಯುವಕ–ಯುವತಿಯರು ಕಣ್ಣಿಗೊಂದು ಕೂಲಿಂಗ್ ಗ್ಲಾಸ್‌, ಬಾಯಲ್ಲಿ ಪೀಪಿ ಊದುತ್ತಾ ವಿವಿಧ ಬಡಾವಣೆಗಳ ಯುವಕರು ತ್ರಿಬಲ್‌ ರೈಡಿಂಗ್‌ನಲ್ಲಿ ರಸ್ತೆ ಹಾಗೂ ಗಲ್ಲಿಗಳಲ್ಲಿ ಸ್ನೇಹಿತರಿಗೆ ಬಣ್ಣ ಹಚ್ಚುತ್ತಾ ಬೈಕ್‌ಗಳಲ್ಲಿ ಸಂಚರಿಸಿದರು. ಡಿಜೆಗೆ ಅವಕಾಶವಿಲ್ಲದ ಕಾರಣ ತಮಟೆ ಸದ್ದಿನಲ್ಲೇ ಯುವಕ–ಯುವಕರು ಕುಣಿದರು.

ಓಕುಳಿಯಾಟವಾಡಿ ತಮ್ಮ ಕುಟುಂಬ, ಸ್ನೇಹಿತರ ಜತೆ ವಿವಿಧ ಭಂಗಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಅದನ್ನು ವಾಟ್ಸ್ಆ್ಯಪ್, ಫೇಸ್‌ಬುಕ್‌ಗಳಲ್ಲಿ ಹಾಕಿ ಲೈಕ್ ಪಡೆದುಕೊಂಡರು.

ರಾಮ್‌ ಅಂಡ್ ಕೊ ವೃತ್ತದಲ್ಲಿ ಇಲ್ಲದ ಸಂಭ್ರಮ:ಪ್ರತಿ ವರ್ಷ ಹೋಳಿ ಹಬ್ಬದ ದಿವಸ ರಾಮ್ ಅಂಡ್ ಕೊ ವೃತ್ತದಲ್ಲಿ ಸಂಭ್ರಮ ಮನೆ ಮಾಡುತ್ತಿತ್ತು. ಆದರೆ ಈ ವರ್ಷ ಹೋಳಿ ಆಟ ಆಡುವವರು ಇಲ್ಲದೇ ಬಣಗುಡುತ್ತಿತ್ತು. ಡಿಜೆ ಸೌಂಡ್ ಅಬ್ಬರ, ಹಾಡು, ನರ್ತನಗಳ ಮೂಲಕ ಹೋಳಿ ಆಡುತ್ತಿದ್ದ ಯುವಮನಸ್ಸುಗಳಿಗೆ ಈ ಬಾರಿ ನಿರಾಶೆಯಾಯಿತು.

‘ರಾಜಕೀಯ ಸಮಾರಂಭಗಳಿಗೆ ಇಲ್ಲದ ನಿರ್ಬಂಧ ನಮಗೇಕೆ’ ಎಂದು ಹಲವು ಮಂದಿ ಅಸಮಾಧಾನ ವ್ಯಕ್ತಪಡಿಸಿದರು.

ಬಿಗಿ ಬಂದೋಬಸ್ತ್: ರಾಮ್ ಅಂಡ್ ಕೊ ವೃತ್ತ ಸೇರಿ ನಗರದ ವಿವಿಧೆಡೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಈ ನಡುವೆಯೂ ಕೆಲವು ಯುವಕರು ರ‍್ಯಾಶ್ ಡ್ರೈವಿಂಗ್ ಮಾಡುತ್ತಿದ್ದುದು ಕಂಡು ಬಂತು.

ಹರ್ಬಲ್ ಹೋಳಿ: ಎಸ್‌.ಎಸ್‌. ಲೇಔಟ್ ಕುಂದವಾಡ ಕೆರೆ ರಸ್ತೆಯ ಬಳಿ ಶಾರದಾಂಬ ಸ್ನೇಹಿತರ ಬಳಗದ ಸದಸ್ಯೆಯರು ಕುಟುಂಬದ ಸದಸ್ಯರ ಜೊತೆ ಬಣ್ಣಗಳನ್ನು ಬಳಸದೇ ವಿಶಿಷ್ಟವಾಗಿ ಹರ್ಬಲ್ ಹೋಳಿ ಆಚರಿಸಿದರು.

ತರಕಾರಿ, ಹಣ್ಣು, ಸೊಪ್ಪುಗಳಿಂದ ಪೇಸ್ಟ್ ತಯಾರಿಸಿ ಅವುಗಳನ್ನು ಮುಖಕ್ಕೆ ಬಳಿದುಕೊಂಡು ಸಂಭ್ರಮಿಸಿದರು. ಟೊಮೆಟೊ, ಕ್ಯಾರೆಟ್, ಬೀಟ್‌ರೂಟ್‌, ಸೌತೇಕಾಯಿಗಳೇ ಬಣ್ಣಗಳನ್ನು ಬಿಂಬಿಸಿದವು.

ಪ್ರತಿ ಬಾರಿ ಸ್ನೇಹಿತೆಯರ ಜೊತೆಗೂಡಿ ಆಚರಿಸುತ್ತಿದ್ದರು. ಕೊರೊನಾ ಕಾರಣದಿಂದ ಕುಟುಂಬದ ಸದಸ್ಯರಿಗಷ್ಟೇ ಸೀಮಿತಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT