ಅತಿಯಾಗಿ ದೇಹ ದಂಡಿಸದಿರಿ: ಶಾಸಕ ಎಸ್.ಎ. ರವೀಂದ್ರನಾಥ್

ದಾವಣಗೆರೆ: ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವವರು ದೇಹವನ್ನು ಅತಿಯಾಗಿ ಬಳಲಿಸಬಾರದು. ಆರೋಗ್ಯ ಕಾಯ್ದುಕೊಳ್ಳಬೇಕು ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಸಲಹೆ ನೀಡಿದರು.
ರಾಜ್ಯ ವೇಟ್ ಲಿಫ್ಟರ್ಸ್ ಅಸೋಸಿಯೇಷನ್, ಜಿಲ್ಲಾ ವೇಟ್ ಲಿಫ್ಟಿಂಗ್ ಅಸೋಸಿಯೇಷನ್ ಹಾಗೂ ನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿರುವ ರಾಜ್ಯಮಟ್ಟದ ವೇಟ್ ಲಿಫ್ಟಿಂಗ್ ಸ್ಪರ್ಧೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಹದಲ್ಲಿ ನಿಶ್ಯಕ್ತಿ ಕಾಣಿಸಿಕೊಂಡ ನಂತರವೂ ಗೆಲ್ಲಬೇಕೆಂಬ ಹಠದಿಂದ ವೇಟ್ ಲಿಫ್ಟಿಂಗ್‌ನಲ್ಲಿ ತೊಡಗಬಾರದು. ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಆದ ಪರಿಸ್ಥಿತಿಯನ್ನು ಕ್ರೀಡಾಪಟುಗಳು ತಂದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ರಕ್ತದೊತ್ತಡ, ಸಕ್ಕರೆ ಮಟ್ಟ ಹಾಗೂ ಹೃದಯದ ಆರೋಗ್ಯದ ಬಗ್ಗೆ ನಿಯಮಿತವಾಗಿ ತಪಾಸಣೆಗೆ ಮಾಡಿದರು.
ಮೇಯರ್ ಎಸ್.ಟಿ. ವೀರೇಶ್, ‘ಕೊವಿಡ್ ಎರಡನೇ ಅಲೆಯಲ್ಲಿ ಸ್ತಬ್ಧವಾಗಿದ್ದ ಕ್ರೀಡಾ ವಲಯ ಈಗ ಮತ್ತೆ ಚಟುವಟಿಕೆಯಿಂದ ಕೂಡಿದೆ. ವೇಟ್ ಲಿಫ್ಟಿಂಗ್‌ಗೆ ಪಾಲಿಕೆ ವತಿಯಿಂದ ₹ 2 ಲಕ್ಷ ನೀಡಲಾಗಿದೆ. ಶೀಘ್ರದಲ್ಲೇ ಮಹಿಳೆಯರಿಗಾಗಿ ಪಾಲಿಕೆಯಿಂದ ಪ್ರತ್ಯೇಕ ಜಿಮ್ ತೆರೆಯಲಾಗುವುದು’ ಎಂದು ತಿಳಿಸಿದರು
ಭಾರತೀಯ ವೇಟ್ ಲಿಫ್ಟಿಂಗ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಎಸ್.ಎಚ್. ಆನಂದ ಗೌಡ, ‘ಈ ಕ್ರೀಡಾಕೂಟದಲ್ಲಿ 260ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ಪ್ರತಿಭೆಗಳನ್ನು ಆರಂಭದಲ್ಲೇ ಗುರುತಿಸಿ ಪ್ರೋತ್ಸಾಹ – ತರಬೇತಿ ನೀಡಲು ಇಂತಹ ಕ್ರೀಡಾಕೂಟಗಳು ನೆರವಾಗುತ್ತವೆ. ದಾವಣಗೆರೆಯಲ್ಲಿ ವೇಟ್ ಲಿಫ್ಟಿಂಗ್‌ಗೆ ನೆರವಾಗಲು ಸೌಲಭ್ಯಗಳನ್ನು ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.
ಪಾಲಿಕೆ ಸದಸ್ಯ ಚಮನ್ ಸಾಬ್ ಹಾಗೂ ಬಿಜೆಪಿ ಮುಖಂಡ ಅನಿತ್ ಸಿದ್ದೇಶ್ವರ ಮಾತನಾಡಿದರು. ಜಿಲ್ಲಾ ವೇಟ್ ಲಿಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಕೆ.ಎಂ. ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಚಿತ್ರನಟ ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವೇದಿಕೆ ಮೇಲೆ ಪಾಲಿಕೆ ಸದಸ್ಯ ಕೆ.ಎಂ. ವೀರೇಶ್ ಪೈಲ್ವಾನ್, ಶಾಂತಕುಮಾರ ಸೋಗಿ, ಜಯಮ್ಮ, ಗೋಣೆಪ್ಪ, ವೀಣಾ ನಂಜಪ್ಪ, ಗೌರಮ್ಮ ಗಿರೀಶ್, ಬಿಜೆಪಿ ಮುಖಂಡರಾದ ಎಂ. ಆನಂದ್, ಶ್ರೀನಿವಾಸ್, ಮುರುಗೇಶಪ್ಪ, ಆನಂದ್, ಶಿವಕುಮಾರ್ ದಾಸಕರಿಯಪ್ಪ, ಎಲ್.ಎಂ. ಕಲ್ಲೇಶ್, ಗಣೇಶ್ ರಾವ್, ಸುರೇಶ್ ಗಂಡಗಾಳೆ ಅವರೂ ಇದ್ದರು. ಎಚ್. ಬಸವರಾಜ ಸ್ವಾಗತಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.