ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಕೋಮುವಾದಿ ಸರ್ಕಾರ ಕಿತ್ತೊಗೆಯುವವರೆಗೂ ವಿರಮಿಸದಿರಿ

ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಸಲೀಂ ಅಹ್ಮದ್ ಕರೆ
Last Updated 3 ಸೆಪ್ಟೆಂಬರ್ 2021, 4:24 IST
ಅಕ್ಷರ ಗಾತ್ರ

ದಾವಣಗೆರೆ: ‘ಸಾಮರಸ್ಯ ದೇಶದಲ್ಲಿ ಕೋಮುಭಾವನೆಯನ್ನು ಸೃಷ್ಟಿಸುತ್ತಿರುವ,ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವವರೆಗೂ ವಿರಮಿಸಬೇಡಿ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಕರೆ ನೀಡಿದರು.

ನಗರದ ಬಾಪೂಜಿ ಸಮುದಾಯ ಭವನದಲ್ಲಿ ಗುರುವಾರ ನಡೆದ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತದಲ್ಲಿ ಸಂವಿಧಾನದ 15ನೇ ವಿಧಿಯು ಧರ್ಮ, ಜನಾಂಗದ ಜಾತಿ, ಲಿಂಗ, ಹುಟ್ಟಿದ ಸ್ಥಳ ಅಥವಾ ಇತರ ಯಾವುದೇ ಪ್ರಜೆಯ ವಿರುದ್ಧ ತಾರತಮ್ಯ ಮಾಡಬಾರದು ಎಂದು ಹೇಳುತ್ತದೆ. ಸಂವಿಧಾನದ 25ನೇ ವಿಧಿಯು ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಮುಕ್ತ ವೃತ್ತಿ, ಅಭ್ಯಾಸ ಮತ್ತು ಧರ್ಮದ ಪ್ರಚಾರದ ಬಗ್ಗೆ ಹೇಳುತ್ತದೆ. ಸಂವಿಧಾನವನ್ನು ಕಾಪಾಡಬೇಕಾದ ಸರ್ಕಾರ ಸಂವಿಧಾನದ ವಿಧಿಗಳನ್ನು ಗಾಳಿಗೆ ತೂರಿ ಅಧಿಕಾರ ನಡೆಸುತ್ತಿದೆ’ ಎಂದು ಆರೋಪಿಸಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಭ್ರಷ್ಟಾಚಾರವನ್ನು ಕಾರ್ಯಕರ್ತರು ಪ್ರತಿ ಮನೆ ಮನೆಗೆ ತೆರಳಿ ಜನರಿಗೆ ತಿಳಿಸಬೇಕು. ಜೊತೆಗೆ ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು, ಜನರ ಬದುಕನ್ನು ಬೀದಿಗೆ ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ಸಾರ್ವಜನಿಕರನ್ನು ಜಾಗೃತಗೊಳಿಸಬೇಕು’ ಎಂದು ಸಲಹೆ ನೀಡಿದರು.

‘70 ವರ್ಷ ಕಾಂಗ್ರೆಸ್ ಏನು ಮಾಡಿದೆ ಎಂದು ಪದೇ ಪದೇ ಕೇಳುತ್ತಿರುವ ಬಿಜೆಪಿ, ಈಗ ಇವರು ಖಾಸಗಿ ವ್ಯಕ್ತಿಗಳಿಗೆ ಮಾರುತ್ತಿರುವ ಸರ್ಕಾರದ ಸಂಸ್ಥೆಗಳು ಇದೇ ಕಾಂಗ್ರೆಸ್ ಪಕ್ಷದಿಂದ ಸ್ಥಾಪನೆಗೊಂಡಿರುವವು ಎಂಬುದನ್ನೇ ಮರೆತಂತಿದೆ’ ಎಂದು ಟೀಕಿಸಿದರು.

ಮಹಿಳೆಯರನ್ನು, ಯುವಕರನ್ನು ಹೆಚ್ಚಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು, ಪಕ್ಷ ಸಂಘಟನೆಗೆ ಒತ್ತು ನೀಡಿ ಎಂದು ಜಿಲ್ಲಾ ಪದಾಧಿಕಾರಿಗಳಿಗೆ ಸಲಹೆ ನೀಡಿದ ಸಲೀಂ ಅಹ್ಮದ್ ಅವರು ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಸಿದ್ಧರಾಗಬೇಕು. ಇದಕ್ಕೆ ಪೂರಕವಾಗಿ ಪ್ರಜಾಪ್ರತಿನಿಧಿ ಹಾಗೂ ವಾರ್ಡ್ ಸಮಿತಿಗಳನ್ನು ಸೆ.30ರ ಒಳಗೆ ಮತ್ತು ಬೂತ್ ಸಮಿತಿಗಳನ್ನು ನವೆಂಬರ್ ಕೊನೆಯ ಒಳಗೆ ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದರು.

ಹರಿಹರ ಶಾಸಕ ಎಸ್‌.ರಾಮಪ್ಪ, ಮಾಜಿ ಶಾಸಕರಾದ ಎಚ್.ಪಿ.ರಾಜೇಶ್, ಡಿ.ಜಿ.ಶಾಂತನಗೌಡ, ಅಬ್ದುಲ್ ಜಬ್ಬಾರ್, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೆ.ಎಸ್. ಬಸವಂತಪ್ಪ, ಜಿ.ಸಿ. ನಿಂಗಪ್ಪ, ಕರಿಬಸವನಗೌಡ್ರು, ಶಶಿಕಲಾ, ಜಿಲ್ಲಾ ವಕ್ತಾರ ಶಾಮನೂರು ಟಿ.ಬಸವರಾಜ್, ನಾಗೇಂದ್ರಪ್ಪ, ನಾಗರತ್ನಮ್ಮ, ಮುಖಂಡರಾದ ಮುದೇಗೌಡ್ರು ಗಿರೀಶ್, ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಗೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಸ್ವಾಗತಿಸಿದರು. ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT