ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

National Doctors Day | ರೋಗಿಗೆ ಮರು ಜನ್ಮ ನೀಡುವ ವೃತ್ತಿ

Published : 1 ಜುಲೈ 2023, 7:26 IST
Last Updated : 1 ಜುಲೈ 2023, 7:26 IST
ಫಾಲೋ ಮಾಡಿ
Comments

ಡಾ.ಜಿ.ಡಿ. ರಾಘವನ್‌

ದಾವಣಗೆರೆ: ಸಮಾಜದಲ್ಲಿ ವೈದ್ಯರನ್ನು ಪೂಜ್ಯ ಭಾವದಿಂದ ಕಾಣಲಾಗುತ್ತದೆ. ಹಲವರ ಪಾಲಿಗೆ ಅವರು ದೈವ ಸ್ವರೂಪಿ ಕೂಡ. ಮಾರಣಾಂತಿಕ ಕಾಯಿಲೆ ಗುಣಪಡಿಸಿ ಅನೇಕರಿಗೆ ಮರು ಜನ್ಮ ನೀಡುವವರೂ ಇವರೇ. ಹೀಗಾಗಿಯೇ ಭಾರತೀಯ ಸಂಸ್ಕೃತಿಯಲ್ಲಿ ‘ವೈದ್ಯೋ ನಾರಾಯಣ ಹರಿಃ’ ಎಂಬ ಉಲ್ಲೇಖವಿದೆ. 

ಪ್ರತಿ ವರ್ಷ ಜುಲೈ 1ರಂದು ವೈದ್ಯರ ದಿನಾಚರಣೆ ಆಚರಿಸಲಾಗುತ್ತದೆ. ಆ ದಿನ ವೈದ್ಯ ಬಿಧನ್‌ ಚಂದ್ರ ರಾಯ್‌ ಅವರನ್ನು ಸ್ಮರಿಸಲಾಗುತ್ತದೆ. ಬಿಧನ್‌ ಅವರು ದೇಶ ಕಂಡ ಅಪ್ರತಿಮ ಹಾಗೂ ಅಂತಃಕರಣವಿದ್ದಂತಹ ವೈದ್ಯ. ಸ್ವಾತಂತ್ರ್ಯ ಸೇನಾನಿ ಹಾಗೂ ಶಿಕ್ಷಣ ತಜ್ಞ ಕೂಡಾ ಆಗಿದ್ದವರು. ಅವರು ಜನಿಸಿದ್ದು 1882ರ ಜುಲೈ 1ರಂದು. ಹುಟ್ಟೂರು ಬಿಹಾರದ ಪಟ್ನಾ ಸಮೀಪದ ಬಂಕಿಪುರ. ಆಧುನಿಕ ಪಶ್ಚಿಮ ಬಂಗಾಳದ ನಿರ್ಮಾತೃ ಎಂದೇ ಕರೆಯಲ್ಪಡುವ ಅವರು ಆ ರಾಜ್ಯದ ಮುಖ್ಯಮಂತ್ರಿ ಕೂಡ ಆಗಿದ್ದವರು.

ಸೇವಾ ಮನೋಭಾವದ ವ್ಯಕ್ತಿಯಾಗಿದ್ದ ಅವರು ಮುಖ್ಯಮಂತ್ರಿಯಾಗಿದ್ದರೂ ಕೂಡ ವೈದ್ಯ ವೃತ್ತಿ ಮರೆತಿರಲಿಲ್ಲ. ಬಿಡುವಿಲ್ಲದ ಸಮಯದಲ್ಲೂ ಪ್ರತಿ ದಿನ ಎರಡು ಗಂಟೆ ರೋಗಿಗಳ ಉಪಚಾರಕ್ಕಾಗಿ ಮೀಸಲಿಡುತ್ತಿದ್ದರು. ಅನನ್ಯ ಹಾಗೂ ನಿಸ್ವಾರ್ಥ ಸೇವೆಗಾಗಿ ಅವರಿಗೆ 1961ರಲ್ಲಿ ‘ಭಾರತ ರತ್ನ’ ಗೌರವ ಸಂದಿತ್ತು. ವೈದ್ಯ ವೃತ್ತಿಯ ಘನತೆ ಹೆಚ್ಚಿಸಿದ ಕೀರ್ತಿ ರಾಯ್‌ ಅವರಿಗೆ ಸಲ್ಲುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಅನುಸಾರ ದೇಶವೊಂದರಲ್ಲಿ ಪ್ರತಿ 1,000 ಜನಸಂಖ್ಯೆಗೆ ಒಬ್ಬರು ವೈದ್ಯರಿರಬೇಕು. ಭಾರತದಲ್ಲಿ 1,000 ಜನಸಂಖ್ಯೆಗೆ ಇಬ್ಬರು ವೈದ್ಯರಿದ್ದಾರೆ ಎಂಬುದು 2021ರ ಅಂಕಿ ಅಂಶದಿಂದ ತಿಳಿದುಬಂದಿದೆ. 20 ವರ್ಷಗಳ ಹಿಂದೆ ಪರಿಸ್ಥಿತಿ ಬೇರೆಯೇ ಇತ್ತು. ಆಗ ಈ ಸಂಖ್ಯೆ 1ಕ್ಕಿಂತಲೂ ಕಡಿಮೆ ಇತ್ತು.

ಡಾ. ಜಿ.ಡಿ. ರಾಘವನ್‌
ಡಾ. ಜಿ.ಡಿ. ರಾಘವನ್‌

ದೇಶದಲ್ಲಿ ವೈದ್ಯಕೀಯ ಕಾಲೇಜುಗಳು ಹೆಚ್ಚಾಗುತ್ತಿರುವುದರಿಂದ ವೈದ್ಯಕೀಯ ಪದವಿ ಪೂರ್ಣಗೊಳಿಸುವವರ ಸಂಖ್ಯೆಯೂ ಏರುತ್ತಿದೆ. ಪ್ರತಿ ವರ್ಷ ಅಂದಾಜು 90,000 ಮಂದಿ ವೈದ್ಯಕೀಯ ಪದವಿ ಪೂರ್ಣಗೊಳಿಸಿ ಹೊರ ಬರುತ್ತಿದ್ದಾರೆ. ಹೀಗಾಗಿ ದೇಶದಲ್ಲಿ ವೈದ್ಯರ ಕೊರತೆಯೇನೂ ಇಲ್ಲ. ಆದರೆ ಬಹು‍ಪಾಲು ಮಂದಿ ಯುವ ವೈದ್ಯರು ಗ್ರಾಮೀಣ ಭಾಗಗಳಲ್ಲಿ ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಧೋರಣೆ ಬದಲಾಗಬೇಕಿದೆ.

ವೈದ್ಯರಾದವರು ಗ್ರಾಮೀಣ ಭಾಗದಲ್ಲಿ ಒಂದು ವರ್ಷ ಸೇವೆ ಸಲ್ಲಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಕೇಂದ್ರಗಳಲ್ಲೂ ಅವರು ಸೇವೆ ಸಲ್ಲಿಸಲೇಬೇಕು. ಸರ್ಕಾರದ ಈ ನಿಯಮದಿಂದಾಗಿ ಹಳ್ಳಿಗರಿಗೆ ವೈದ್ಯರ ಸೇವೆ ಲಭಿಸುತ್ತಿದೆ. ಇಲ್ಲದೇ ಹೋಗಿದ್ದರೆ ಹಳ್ಳಿ ಗಾಡಿನ ಜನರು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಎದುರಾದರೂ ನಗರ ಪ್ರದೇಶಗಳಲ್ಲಿನ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಿಗೆ ಎಡತಾಕಬೇಕಾಗುತ್ತಿತ್ತು. 

ಕರ್ನಾಟಕದ ವಿಚಾರಕ್ಕೆ ಬರುವುದಾದರೆ, ಇಲ್ಲಿ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಇದು ಸ್ವಾಗತಾರ್ಹ ನಡೆ. ಆದರೆ ಶೇ 90ಕ್ಕಿಂತಲೂ ಹೆಚ್ಚು ವೈದ್ಯರು ಎಂ.ಬಿ.ಬಿ.ಎಸ್ ಪೂರ್ಣಗೊಳಿಸಿದ ನಂತರ ಎಂ.ಡಿ ಹಾಗೂ ಎಂ.ಎಸ್ ವ್ಯಾಸಂಗಕ್ಕೆ ಒತ್ತು ನೀಡುತ್ತಾರೆ. ಅದಕ್ಕಾಗಿ ಓದು, ತರಬೇತಿ ಮುಂದುವರಿಸುತ್ತಾರೆ. ಸ್ನಾತಕೋತ್ತರ ಪದವಿ ಪೂರ್ಣಗೊಂಡ ತಕ್ಷಣವೇ ಆಸ್ಪತ್ರೆ, ಕ್ಲಿನಿಕ್‌ ಅಥವಾ ಪಾಲಿ ಕ್ಲಿನಿಕ್‌ ಆರಂಭಿಸಿ ನಗರ ಅಥವಾ ಪಟ್ಟಣಗಳಲ್ಲೇ ನೆಲೆವೂರಿಬಿಡುತ್ತಾರೆ. ವೈದ್ಯಕೀಯ ಕ್ಷೇತ್ರದಲ್ಲಿನ ಪೈಪೋಟಿ ಇದಕ್ಕೆ ಕಾರಣವಿದ್ದಿರಬಹುದು.  

ಪ್ರತಿ ವೈದ್ಯ ತನ್ನ ವೃತ್ತಿ ಜೀವನ ಆರಂಭಿಸುವ ಮುನ್ನ ವೈದ್ಯಕೀಯ ಲೋಕದ ಪಿತಾಮಹ, ಗ್ರೀಸ್‌ನ ಹಿಪ್ಪೋಕ್ರೇಟ್ಸ್ ಅವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸುವುದು ವಾಡಿಕೆ. ‘ನನ್ನ ಬಳಿ ಚಿಕಿತ್ಸೆಗಾಗಿ ಬರುವ ಪ್ರತಿಯೊಬ್ಬರ ನೋವನ್ನು ಶಮನ ಮಾಡುತ್ತೇನೆ’ ಎಂದು ಅವರು ಶಪಥ ಮಾಡಿರುತ್ತಾರೆ.

ಇದರ ಪ್ರಕಾರ ವೈದ್ಯರು, ರೋಗಿಯ ಪೂರ್ವಾಪರ ನೋಡಿ ಚಿಕಿತ್ಸೆ ನೀಡುವಂತಿಲ್ಲ. ಆತ ಬಡವನೇ ಆಗಿರಬಹುದು, ಶ್ರೀಮಂತನೇ ಆಗಿರಬಹುದು. ಆತ ಯಾವುದೇ ಜಾತಿಯವನಾಗಿರಬಹುದು. ನಗರ ನಿವಾಸಿಯಾಗಿರಬಹುದು ಅಥವಾ ಹಳ್ಳಿಯಲ್ಲಿ ನೆಲೆಸಿರಬಹುದು. ರೋಗಿ ಹೆಣ್ಣಾಗಿರಲಿ ಅಥವಾ ಗಂಡಾಗಿರಲಿ ಲಿಂಗ ತಾರತಮ್ಯ ನಡೆಸದೆ ನಿಷ್ಪಕ್ಷಪಾತವಾಗಿ ಅವರ ರೋಗ ಉಪಶಮನ ಮಾಡಲು ಶ್ರಮಿಸಬೇಕು.

ವೈದ್ಯ ವೃತ್ತಿಯು ಇತರ ಎಲ್ಲಾ ವೃತ್ತಿಗಳಿಗಿಂತಲೂ ಭಿನ್ನ ಮತ್ತು ವಿಶೇಷವಾದುದು. ಮನುಷ್ಯರ ಜೀವ ಉಳಿಸುವಂತಹ ಮಹತ್ವದ ಜವಾಬ್ದಾರಿ ಈ ವೃತ್ತಿಯಲ್ಲಿ ತೊಡಗಿಕೊಂಡಿರುವವರ ಮೇಲೆ ಇರುತ್ತದೆ. ವೈದ್ಯರಾದವರು ತಮ್ಮ ವೃತ್ತಿಯನ್ನು ಸಾಮಾನ್ಯವೆಂದು ಭಾವಿಸಬಾರದು. ನೋವಿನಿಂದ ನರಳುವ ಮನುಕುಲಕ್ಕೆ ಅಗತ್ಯ ಸೇವೆ ಒದಗಿಸಲು ದೊರೆತಿರುವ ಸದವಕಾಶ ಎಂದು ಭಾವಿಸಿ ಅವರ ಆರೈಕೆಯಲ್ಲಿ ತೊಡಗಿಕೊಳ್ಳಬೇಕು. ಆ ಮೂಲಕ ಸೇವಾ ಸಂತೃಪ್ತಿಯನ್ನು ಕಾಣಬೇಕು.  

(ಲೇಖಕರು ದಾವಣಗೆರೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT