ಭಾನುವಾರ, ಅಕ್ಟೋಬರ್ 2, 2022
19 °C
ಅತಿವೃಷ್ಟಿಯಿಂದ ಉಂಟಾದ ಹಾನಿಯ ಬಗ್ಗೆ ನಡೆದ ಪರಿಶೀಲನಾ ಸಭೆ

ಪರಿಹಾರ ವಿತರಿಸದೇ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಡಿ: ಬೈರತಿ ಬಸವರಾಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮಳೆಯಿಂದ ಮನೆಹಾನಿ, ನೀರು ನುಗ್ಗಿರುವುದು ಮುಂತಾದ ತೊಂದರೆಗಳು ಉಂಟಾದಾಗ ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕು. ಸರ್ಕಾರ ಅನುದಾನ ಒದಗಿಸಿರುವುದರಿಂದ ತಕ್ಷಣ ಪರಿಹಾರವನ್ನು ವಿತರಿಸಬೇಕು. ನೀವು ಪರಿಹಾರ ನೀಡದೇ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ತಿಳಿಸಿದರು.

ಮಳೆಹಾನಿ ಕುರಿತಂತೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಆಗಸ್ಟ್‌ 15ರ ಒಳಗೆ ಎಲ್ಲರಿಗೂ ಪರಿಹಾರ ವಿತರಿಸಿ ಆಗಬೇಕು. ಯಾವುದೇ ಸಬೂಬು ಹೇಳಬಾರದು ಎಂದು ಎಚ್ಚರಿಸಿದರು.

ಆಗಸ್ಟ್ 8ರ ವರೆಗೆ ವಾಡಿಕೆ ಮಳೆಗಿಂತ ಶೇ 106 ರಷ್ಟು ಅಧಿಕ ಮಳೆಯಾಗಿದೆ. ಚನ್ನಗಿರಿ ತಾಲ್ಲೂಕಿನಲ್ಲಿ 381, ದಾವಣಗೆರೆ 175, ಹರಿಹರ 173, ಹೊನ್ನಾಳಿ 216, ಜಗಳೂರು 161 ಹಾಗೂ ನ್ಯಾಮತಿಯಲ್ಲಿ 205 ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮುಂಗಾರು ಪೂರ್ವ ಮಳೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಸೇರಿ 4813.90 ಹೆಕ್ಟೇರ್ ಹಾನಿಯಾಗಿದ್ದವು. ₹ 6.11 ಕೋಟಿ ಪರಿಹಾರವನ್ನು 11,032 ರೈತರಿಗೆ ನೀಡಲಾಗಿದೆ. ಜುಲೈ, ಆಗಸ್ಟ್‌ನಲ್ಲಿ 12,108.74 ಹೆಕ್ಟೇರ್ ಹಾನಿಯಾಗಿದೆ ಎಂದು ವಿವರಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ 126 ಕೊಠಡಿಗಳಿಗೆ ಹಾನಿಯಾಗಿದೆ. ಅದರ ದುರಸ್ತಿಗೆ ಶಿಫಾರಸ್ಸು ಮಾಡಲಾಗಿದೆ.  ಈ ವರ್ಷ ಹೊಸದಾಗಿ 140 ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾತಿ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮಾಹಿತಿ ನೀಡಿದರು. 

ಕಚೇರಿಯಲ್ಲಿ ಕುಳಿತು ಅಂದಾಜು ಮಾಡದೇ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸಚಿವರಿ ಸೂಚನೆ ನೀಡಿದರು.

ಬೆಸ್ಕಾಂ, ಮೀನುಗಾರಿಕೆ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಗೆ ಬಾರದೆ ಇರುವುದನ್ನು ಕಂಡು ಬೇಸರಗೊಂಡ ಸಚಿವರು, ‘ಗೈರಾದವರಿಗೆ ನೋಟಿಸ್‌ ನೀಡಿ’ ಎಂದು ಜಿಲ್ಲಾಧಿಕಾರಿಗೆ ತಿಳಿಸಿದರು.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13ರಿಂದ 15ರ ವರೆಗೆ ಪ್ರತಿ ಮನೆಯಲ್ಲಿಯು ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ. ಈ ವೇಳೆ ಧ್ವಜ ಸಂಹಿತೆಯಂತೆ ಹಾರಿಸಲು ಮತ್ತು ಇಳಿಸಿಲು ಕ್ರಮ ಕೈಗೊಳ್ಳಬೇಕು. ಎಲ್ಲೂ ಅಪವಾದ ಬಾರದಂತೆ ನಿಯಮ ಪಾಲಿಸಬೇಕು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಹೆಚ್ಚುವರಿ ಜಿಲ್ಲಾಧಿಕಾರಿ ಲೋಕೇಶ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಆರ್.ಬಿ. ಬಸರಗಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು