ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‍ಡೌನ್ ಜಿಲ್ಲೆಗಳಿಗೆ ಹೋಗಬೇಡಿ, ಅಲ್ಲಿಂದಲೂ ಬರಬೇಡಿ

ಯುಗಾದಿ ಹಬ್ಬವನ್ನು ತಾವಿರುವಲ್ಲಿಯೇ ಆಚರಿಸಿ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ
Last Updated 23 ಮಾರ್ಚ್ 2020, 18:27 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ದಾವಣಗೆರೆ: ಕೊರೊನಾ ವೈರಸ್ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಯುಗಾದಿ ಹಬ್ಬವನ್ನು ತಾವು ಇರುವ ಸ್ಥಳದಲ್ಲೇ ಆಚರಿಸಬೇಕು. ಅನಗತ್ಯವಾಗಿ ಪರವೂರಿಗೆ, ನೆಂಟರ ಊರು ಎಂದು ತೆರಳಬಾರದು ಹಾಗೂ ಬೇರೆ ಜಿಲ್ಲೆಗಳಿಂದ ಯಾರೂ ಜಿಲ್ಲೆಗೆ ಬರಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚನೆ ನೀಡಿದರು.

ಕೊರೊನಾ ವೈರಸ್ ನಿಯಂತ್ರಣ ಸಂಬಂಧ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳಿದ್ದು, ಲಾಕ್‍ಡೌನ್ ಆಗಿರುವ 9 ಜಿಲ್ಲೆಗಳ ನಾಗರಿಕರು ಜಿಲ್ಲೆಗೆ ಹಬ್ಬ ಅಥವಾ ಇತರೆ ಕಾರಣಗಳಿಗೆ ಬರಬಾರದು ಎಂಬುದು ಎಸ್‍ಪಿ, ಸಿಇಒ ಹಾಗೂ ನಮ್ಮೆಲ್ಲರ ಮನವಿಯಾಗಿದೆ ಎಂದರು.

ಚೆಕ್‍ಪೋಸ್ಟ್ ಮೂಲಕ ನಿಗಾವಣೆ

ಲಾಕ್‍ಡೌನ್ ಆಗಿರುವ 9 ಜಿಲ್ಲೆಗಳಿಂದ ದಾವಣಗೆರೆಗೆ ಬರುವ ವಾಹನಗಳನ್ನು ತಪಾಸಣೆ ಮಾಡಲಾಗುವುದು. ಇದಕ್ಕಾಗಿ ಅಗತ್ಯವಿರುವ ಕಡೆಗಳಲ್ಲಿ ಚೆಕ್‍ಪೋಸ್ಟ್‌ಗಳನ್ನು ಆರಂಭಿಸಲಾಗುವುದು. ಜಿಲ್ಲೆಗೆ ಬೇರೆ ಬೇರೆ ಊರುಗಳಿಂದ ಬರುವ ವಾಹನಗಳಲ್ಲಿ ಜನರನ್ನು ತಪಾಸಣೆ(ಸ್ಕ್ರೀನಿಂಗ್) ಮಾಡಲಾಗುವುದು. ಅವರಿಗೆ ಯಾವುದೇ ಸೋಂಕು ಇರುವುದು ಕಂಡು ಬಂದರೆ ಅಂತಹವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ನಿಗಾವಣೆಗೆ ಇರಿಸಲಾಗುವುದು. ಇದಕ್ಕಾಗಿ ಅರಣ್ಯ, ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗುವುದು’ ಎಂದು ಹೇಳಿದರು.

ಲಾಕ್‌ಡೌನ್ ಜಿಲ್ಲೆಗಳಿಗೆ ಬಸ್ ಸಂಚಾರ ಇಲ್ಲ.

ಲಾಕ್‍ಡೌನ್ ಆಗಿರುವ 9 ಜಿಲ್ಲೆಗಳಿಂದ ಓಡಾಡುವ ಖಾಸಗಿ ಬಸ್‍ಗಳನ್ನೂ ನಿಲ್ಲಿಸಲಾಗುವುದು ಹಾಗೂ ಜಿಲ್ಲೆಯಿಂದ ಲಾಕ್‌ಡೌನ್‌ ಆಗಿರುವ ಜಿಲ್ಲೆಗಳಿಗೆ ಯಾವುದೇ ಬಸ್‍ಗಳು ಓಡಾಡದಂತೆ ಕೆಎಸ್‍ಆರ್‍ಟಿಸಿ, ಆರ್‍ಟಿಒ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಸೂಚನೆ ನೀಡಿದರು.

ಅಗತ್ಯ ಸೇವೆ ಹೊರತುಪಡಿಸಿ ಇತರೆ ಸೇವೆಗಳು ಬಂದ್

‘ಮೆಡಿಕಲ್ ಶಾಪ್, ಹಾಲು, ತರಕಾರಿ, ದಿನಸಿ ಅಂಗಡಿಗಳು, ಆಸ್ಪತ್ರೆಗಳು, ಪೆಟ್ರೋಲ್ ಬಂಕ್, ಕುಡಿಯುವ ನೀರಿನ ವ್ಯವಸ್ಥೆ, ಅಂಚೆ ಸೇವೆ, ಆಹಾರ, ಅಗ್ನಿಶಾಮಕ, ವಿದ್ಯುತ್ ಸೇರಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಾಣಿಜ್ಯ ಸೇವೆಗಳನ್ನು ಈ ಕ್ಷಣದಿಂದ ಸ್ಥಗಿತಗೊಳಿಸಲು ಆದೇಶಿಸಲಾಗುವುದು. ಬಾರ್ ಮತ್ತು ರೆಸ್ಟೊರೆಂಟ್‌, ಬಂಗಾರದ ಅಂಗಡಿ, ಬಟ್ಟೆ, ಪಾತ್ರೆ ಅಂಡಿಗಳು, ಹಾರ್ಡ್‍ವೇರ್ ಶಾಪ್‍ಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದರು.

ಆಹಾರ ಪಾರ್ಸೆಲ್‍ಗೆ ಅವಕಾಶ: ಹೋಟೆಲ್, ಕ್ಯಾಂಟಿನ್‍ಗಳಲ್ಲಿ ಕುಳಿತು ಊಟ ಮಾಡಲು ಅವಕಾಶ ಇಲ್ಲ. ಬದಲಾಗಿ ಪಾರ್ಸೆಲ್ ತೆಗೆದುಕೊಂಡು ಹೋಗಬಹುದು.

ಸುಳ್ಳುಸುದ್ದಿ ಹರಡಿದವರಿಗೆ ವಿರುದ್ಧ ಕ್ರಮ:

‘ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ. ಆದರೆ ಜಿಲ್ಲೆಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಇದೆ ಎಂದು ಸುಳ್ಳುಸುದ್ದಿ ಹರಡುತ್ತಿದ್ದಾರೆಂಬ ವಿಷಯ ನನ್ನ ಗಮನಕ್ಕೆ ಬಂದಿದ್ದು, ಇಂತಹ ಸುಳ್ಳು ಸುದ್ದಿ ಹರಡಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಆರೋಗ್ಯ, ಕಂದಾಯ, ಸ್ಥಳೀಯ ಸಂಸ್ಥೆಗಳು, ಪಾಲಿಕೆ, ಆರ್‍ಟಿಒ, ಕೆಎಸ್‍ಆರ್‍ಟಿಸಿ ಸೇರಿ ನಿಗಾವಣೆಗಾಗಿ ನಿಯೋಜಿಸಲಾಗಿರುವ 6 ತಂಡಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕು. ದಾಖಲಾತಿಗಳನ್ನು ನಿಖರವಾಗಿ ನಿರ್ವಹಿಸಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ಕಚೇರಿ ಕೆಲಸಕ್ಕಿಂತ ಮುಖ್ಯವಾಗಿ ಆದ್ಯತೆಯಾಗಿ ಕೊರೊನಾ ವೈರಸ್ ನಿಯಂತ್ರಣದ ಕಾರ್ಯಗಳಲ್ಲಿ ಭಾಗಿಯಾಗಬೇಕು’ ಎಂದು ತಿಳಿಸಿದರು.

‘ಎನ್-95 ಅವಶ್ಯಕತೆ ಇಲ್ಲ’

ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ಕರ್ತವ್ಯ ನಿರ್ವಹಿಸಲು ಎನ್-95 ಮಾಸ್ಕ್ ಬೇಕಾಗಿಲ್ಲ. ಬದಲಾಗಿ ಟ್ರಿಪಲ್ ಲೇಯರ್ ಮಾಸ್ಕ್ ಸಾಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ವೈದ್ಯಕೀಯ ವಿದ್ಯಾರ್ಥಿಗಳು ಇದುವರೆಗೂ ಎನ್-95 ಮಾಸ್ಕ್ ಲಭ್ಯವಾಗಿಲ್ಲ ಹಾಗಾಗಿ ಕರ್ತವ್ಯ ನಿರ್ವಹಿಸಲು ಕಷ್ಟ ಎಂದು ದೂರಿರುವ ಹಿನ್ನೆಲೆಯಲ್ಲಿ ಮೇಲಿನಂತೆ ಉತ್ತರಿಸಿದರು.

‘ಸರ್ಕಾರದ ಆದೇಶದ ಅನ್ವಯ ಎಲ್ಲೆಡೆಯೂ ಎನ್-95 ಮಾಸ್ಕ್ ಅವಶ್ಯಕವಲ್ಲ. ಬದಲಾಗಿ ಐಸಿಯು ಹಾಗೂ ಐಸೋಲೇಷನ್ ವಾರ್ಡ್‍ಗಳಲ್ಲಿ ಅದರ ಅವಶ್ಯಕತೆ ಇದೆಯಷ್ಟೇ. ವಿದ್ಯಾರ್ಥಿಗಳಿಗೆ ಈ ಕುರಿತು ಯಾವುದೇ ಆತಂಕ ಬೇಡ. ಸ್ಯಾನಿಟೈಸರ್ ಮತ್ತು ಮಾಸ್ಕ್‌ಗಳ ಕೊರತೆ ಬಾರದಂತೆ ನೋಡಿಕೊಳ್ಳಬೇಕು’ ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಖಾಸಗಿ ಬಸ್‌ಗಳಲ್ಲಿ ಹೆಚ್ಚಿನ ಜನ ತುಂಬಿಸುವುದು ಸರಿಯಲ್ಲ:

ತಾಲ್ಲೂಕುಗಳಿಂದ ಬರುವ ಖಾಸಗಿ ಬಸ್‍ಗಳಲ್ಲಿ ಯದ್ವಾತದ್ವ ಜನರನ್ನು ತುಂಬಿಸುವುದು ಸೂಕ್ತವಲ್ಲ. ಈ ಬಗ್ಗೆ ಕ್ರಮ ವಹಿಸಬೇಕು ಎಂದು ಆರ್‌ಟಿಒ ಅಧಿಕಾರಿಗಳಿಗೆ ಸೂಚಿಸಿದ ಡಿಸಿ ‘ಬಸ್ ವ್ಯವಸ್ಥೆ ಇಲ್ಲದ ಕಡೆ ಆಟೋದವರು ಸಾರ್ವಜನಿಕರಿಂದ ದುಪ್ಪಟ್ಟು ಹಣ ಕೇಳುತ್ತಿರುವುದು ಗಮನಕ್ಕೆ ಬಂದಿದ್ದು, ಇದನ್ನು ಈಗಲೇ ನಿಲ್ಲಿಸಬೇಕೆಂದು’ ಸೂಚಿಸಿದರು.

‘ಪೊಲೀಸ್ ಇಲಾಖೆಯ ಸಹಾಯ ಪಡೆದು ಪಾಲಿಕೆಯ ಆರೋಗ್ಯ ನಿರೀಕ್ಷಕರು, ಅಂಗಡಿ, ಬಾರ್, ರೆಸ್ಟೋರೆಂಟ್ ಸೇರಿ ವಾಣಿಜ್ಯ ಮಳಿಗೆಗಳನ್ನು ಎಲ್ಲೆಡೆ ಮುಚ್ಚಿಸಬೇಕು ಎಂದ ಅವರು ಜಿಲ್ಲೆಯಲ್ಲಿ ಎಲ್ಲ ಕ್ವಾರಿಗಳನ್ನು ಸಹ ಇಂದಿನಿಂದಲೇ ಬಂದ್ ಮಾಡಬೇಕು’ ಎಂದು ಸೂಚಿಸಿದರು.

ಅವಲೋಕನ ಅವಧಿ ಕಡ್ಡಾಯವಾಗಿ ಮುಗಿಸಿ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ‘ಪಾಲಿಕೆ, ಆರ್‍ಟಿಒ, ಕೆಎಸ್‍ಆರ್‍ಟಿಸಿ ಹಾಗೂ ಸಿಜಿ ಆಸ್ಪತ್ರೆಯ ಸಿಬ್ಬಂದಿ ಕರ್ತವ್ಯ ನಿರ್ವಹಣೆಗೆ ಅನುಕೂಲವಾಗುವಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.

‘ವಿದೇಶಕ್ಕೆ ಹೋಗಿ ಬಂದವರನ್ನು ಮನೆಯಲ್ಲೇ ಪ್ರತ್ಯೇಕವಾಗಿ ನಿಗಾ ವಹಿಸಿರುವವರ ಮಾಹಿತಿಯನ್ನು ಪೊಲೀಸ್ ಇಲಾಖೆಗೆ ಪ್ರತಿ ದಿನ ನೀಡಬೇಕು. ಸಿಬ್ಬಂದಿ ಅಂತಹವರನ್ನು ಮನೆಯಲ್ಲೇ ಇರುವಂತೆ ನಿಗಾ ವಹಿಸುವುದರ ಜೊತೆಗೆ ಅವರ ಮನೆಯ ಮುಂದೆ ಕೊರೊನಾ ವೈರಸ್ ಜಾಗೃತಿ ಬಗ್ಗೆ ಭಿತ್ತಿಚಿತ್ರ ಅಂಟಿಸಲಾಗುವುದು. ಹೊರಗೆ ಹೋಗುವುದರಿಂದ ತೊಂದರೆ ಆಗುವ ಹಿನ್ನೆಲೆಯಲ್ಲಿ ವಿದೇಶಕ್ಕೆ ಹೋಗಿ ಬಂದವರು ಕಡ್ಡಾಯವಾಗಿ ಅವಲೋಕನ ಅವಧಿಯನ್ನು ಪೂರ್ಣಗೊಳಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಪದ್ಮಾ ಬಸವಂತಪ್ಪ, ಹೆಚ್ಚುವರಿ ಜಿಲ್ಲಾಧಿಕರಿ ಪೂಜಾರ ವೀರಮಲ್ಲಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಕೆಎಸ್‍ಆರ್‍ಟಿಸಿ ಡಿಸಿ ಸಿದ್ದೇಶ್ವರ ಎನ್.ಹೆಬ್ಬಾಳ್, ಆರ್‍ಟಿಒ ಎನ್.ಜೆ.ಬಣಕಾರ್, ಡಿಎಚ್‍ಓ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT