ದಾವಣಗೆರೆ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಎಲ್ಲ ದೇಶಗಳಲ್ಲಿ ಭಾರತಕ್ಕೆ ಗೌರವ ದೊರೆಯುತ್ತಿದೆ. ಪಕ್ಕದ ಪಾಕಿಸ್ತಾನ, ಚೈನಾ ಕೂಡ ಮೋದಿಯಂಥ ನಾಯಕರು ಬೇಕು ಎಂದು ಹೇಳುತ್ತಿದೆ. ಆದರೆ, ನಮ್ಮವರೇ ಆದ ವಿರೋಧ ಪಕ್ಷದವರು ವಿದೇಶಕ್ಕೆ ಹೋಗಿ ಅವಹೇಳನ ಮಾಡುತ್ತಿದ್ದಾರೆ. ಅಂಥವರ ನಾಯಕತ್ವ ನಮಗೆ ಬೇಕೇ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.
ದಾವಣಗೆರೆ ಜಿಎಂಐಟಿ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಮಹಾಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದೇಶಕ್ಕೆ ಹೋಗಿ ಪ್ರಧಾನಿಯನ್ನು ಹೀಗಳೆಯುವ ಮೂಲಕ ಭಾರತದ ಪ್ರಜಾಪ್ರಭುತ್ವವನ್ನು ಹೀಯಾಳಿಸುತ್ತಿದ್ದಾರೆ. ಇದು ದೇಶದ್ರೋಹದ ಕೆಲಸ. ದೇಶದ ಬಗ್ಗೆ, ಜನರ ಬಗ್ಗೆ ಕಾಂಗ್ರೆಸ್‌ಗೆ ಕಾಳಜಿ ಇಲ್ಲ. ಕರ್ನಾಟಕದ ಬಗ್ಗೆಯೂ ಬದ್ಧತೆ ಇಲ್ಲ ಎಂದು ಟೀಕಿಸಿದರು.
‘ಯುಪಿಎ ಸರ್ಕಾರ ಇದ್ದಾಗ ಬಂದಿದ್ದ ಅನುದಾನದ ಐದು ಪಟ್ಟು ಅನುದಾನ ಮೋದಿ ಪ್ರಧಾನಿಯಾದ ಮೇಲೆ ಕರ್ನಾಟಕಕ್ಕೆ ಬಂದಿದೆ. ಹೆದ್ದಾರಿಗೆ ₹ 64,000 ಕೋಟಿ ಬಳಕೆಯಾಗಿದೆ. ರೈಲ್ವೆಗೆ ಈ ವರ್ಷ ₹ 7,350 ಕೋಟಿ ಬಂದಿದೆ. ಮಧ್ಯ ಕರ್ನಾಟಕದ ಬರ ನೀಗಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ₹ 5,600 ಕೋಟಿ ಮೀಸಲಿಡುವ ಮೂಲಕ ರಾಜ್ಯಕ್ಕೆ ಶಕ್ತಿ ತುಂಬಿಸಿದ್ದಾರೆ. ಕಳಸಾ-ಬಂಡೂರಿ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ಟೆಂಡರ್ ಮಾಡಿದ್ದೇವೆ. ಬರುವ ದಿನಗಳಲ್ಲಿ ನಾವೇ ಕಾಮಗಾರಿ ಪೂರ್ಣಗೊಳಿಸುತ್ತೇವೆ’ ಎಂದು ತಿಳಿಸಿದರು.
ನವಕರ್ನಾಟಕದಿಂದ ನವ ಭಾರತ ನಿರ್ಮಾಣಕ್ಕೆ ಜನರ ಆಶೀರ್ವಾದವಿರಲಿ. ಲೋಕಸಭಾ ಚುನಾವಣೆಗೆ ಕರ್ನಾಟಕದ ಚುನಾವಣೆ ದಿಕ್ಸೂಚಿಯಾಗಲಿದೆ. ಇಡೀ ಭಾರತದಲ್ಲಿ ಕಮಲ ಅರಳುವಂತಾಗಲಿದೆ. ಬಿಜೆಪಿಯ ಸುನಾಮಿ ಎದ್ದಿದೆ ಎಂದರು.
ಗ್ಯಾರಂಟಿ ಕಾರ್ಡ್ ವಿತರಿಸುತ್ತಿರುವ ಕಾಂಗ್ರೆಸ್‌ಗೆ ಗ್ಯಾರಂಟಿಯೂ ಇಲ್ಲ, ವಾರಂಟಿಯೂ ಇಲ್ಲ. ಅದು ಫೋರ್‌ಟ್ವೆಂಟ್ ಪಕ್ಷ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ವ್ಯಂಗ್ಯವಾಡಿದರು.
100 ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಈ ಸಮಾವೇಶವನ್ನು ಕಂಡು ಆ ಅಭ್ಯರ್ಥಿಗಳಿಗೆ ಚಳಜ್ವರ ಶುರುವಾಗಿದೆ. ಇಲ್ಲಿ ಸೇರಿರುವ ಲಕ್ಷಾಂತರ ಜನರನ್ನು ನೋಡುವಾಗ ಕಾಂಗ್ರೆಸ್ ಧೂಳಿಪಟ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
ಮಹಾಭಾರತದಲ್ಲಿ ಕೃಷ್ಣಾರ್ಜುನರು ಇದ್ದಂತೆ ಇಲ್ಲಿ ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ ಇದ್ದಾರೆ. ಭೀಷ್ಮನಂತೆ ಬಿ.ಎಸ್. ಯಡಿಯೂರಪ್ಪ ಮಾರ್ಗದರ್ಶನ ಮಾಡುತ್ತಿದ್ದಾರೆ. ಹಾಗಾಗಿ ಎಕ್ಸ್‌ಪಯರಿ ಅವಧಿ ಮುಗಿದಿರುವ ಕಳ್ಳರ, ಸುಳ್ಳರ, ಭ್ರಷ್ಟರ ಪಾರ್ಟಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಈ ಸಮಾವೇಶದ ಮೂಲಕ ಬಿಜೆಪಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಆಗಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಬಂದು 75 ವರ್ಷಗಳಲ್ಲಿ ಆರು ದಶಕಗಳ ಕಾಲ ಕಾಂಗ್ರೆಸ್ ಆಡಳಿತ ಇತ್ತು. ಆಗ ಯಾಕೆ ಗ್ಯಾರಂಟಿ ಯೋಜನೆಗಳನ್ನು ಕೊಡಲಿಲ್ಲ. ಅವರದ್ದೇ ಸರ್ಕಾರ ಇರುವ ಮೂರು ರಾಜ್ಯಗಳಲ್ಲಿ ಶೇ 28ರಷ್ಟು ನಿರುದ್ಯೋಗ ಸಮಸ್ಯೆ ಇದೆ. ಅದನ್ನು ಯಾಕೆ ಪರಿಹರಿಸಿಲ್ಲ. ಕರ್ನಾಟಕದಲ್ಲಿ ಕೇವಲ ಶೇ 2.1ರಷ್ಟು ನಿರುದ್ಯೋಗ ಸಮಸ್ಯೆ ಇದೆ. ಅದನ್ನೇ ಟೀಕೆ ಮಾಡುತ್ತಿದ್ದಾರೆ ಎಂದರು.
ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿಯನ್ನು ನಮ್ಮ ಸರ್ಕಾರ ಹೆಚ್ಚಿಸಿದೆ. ಯಾವ ಸಮುದಾಯಕ್ಕೂ ಅನ್ಯಾಯವಾಗದಂತೆ ಎಲ್ಲ ಸಮುದಾಯಗಳಿಗೆ ಮೀಸಲಾತಿ ನೀಡಿ ಸಾಮಾಜಿಕ ನ್ಯಾಯವನ್ನು ನೀಡುವ ನಿರ್ಧಾರವನ್ನು ಬಿಜೆಪಿ ಸರ್ಕಾರ ನಿನ್ನೆ ಕೈಗೊಂಡಿದೆ ಎಂದು ತಿಳಿಸಿದರು.
ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ರಾಜೀವ್ ಚಂದ್ರಶೇಖರ್, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್, ಡಿ.ವಿ. ಸದಾನಂದ ಗೌಡ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಚಿವರಾದ ಆರ್. ಅಶೋಕ್, ಸಿ.ಸಿ. ಪಾಟೀಲ, ಬೈರತಿ ಬಸವರಾಜ, ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಶಾಸಕ ಎಸ್.ಎ. ರವೀಂದ್ರನಾಥ್ ಮತ್ತಿತರರಿದ್ದರು.
ವಿಜಯ ದುಂಧುಬಿ: ಕಟೀಲ್
‘ರಾಜ್ಯದ ನಾಲ್ಕು ಕಡೆಗಳಿಂದ ಹೊರಟಿದ್ದ ವಿಜಯ ಸಂಕಲ್ಪ ಯಾತ್ರೆ ಬಿಜೆಪಿಯ ಶಕ್ತಿ ಕೇಂದ್ರ ದಾವಣಗೆರೆಯಲ್ಲಿ ಸಮಾರೋಪಗೊಂಡಿದೆ. 224 ಕ್ಷೇತ್ರಗಳಲ್ಲಿ ಸಂಚರಿಸಿದಾಗ ಸಿಕ್ಕಿದ ಸ್ಪಂದನೆ ಮತ್ತು ಇಲ್ಲಿ ಸೇರಿರುವ ಲಕ್ಷಾಂತರ ಮಂದಿಯನ್ನು ನೋಡಿದಾಗ ಇದು ಜನಜಾತ್ರೆಯಲ್ಲಿ ಸಾಗರದ ಅಲೆ ಎದ್ದಿದೆ. ಬಿಜೆಪಿ ವಿಜಯ ದುಂಧುಬಿ ಹಾರಿಸಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಶಾಭಾವ ವ್ಯಕ್ತಪಡಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.