ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ಸಿಗರಿಗೆ ಬಡವರ ಮೇಲೆ ನಾಟಕೀಯ ಪ್ರೀತಿ: ಗಾಯತ್ರಿ ಸಿದ್ದೇಶ್ವರ

ದಾವಣಗೆರೆ ದಕ್ಷಿಣ, ಉತ್ತರ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಮಾಡಿದ ಗಾಯತ್ರಿ ಸಿದ್ದೇಶ್ವರ
Published 6 ಮೇ 2024, 4:38 IST
Last Updated 6 ಮೇ 2024, 4:38 IST
ಅಕ್ಷರ ಗಾತ್ರ

ದಾವಣಗೆರೆ: ‘ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ. ಅವರ ಮೇಲೆ ನಿಜವಾದ ಕಾಳಜಿ ಇಲ್ಲ’ ಎಂದು ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಆರೋಪಿಸಿದರು.

ದಾವಣಗೆರೆ ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊನೆ ದಿನದ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ‘60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಬಡತನ ನಿರ್ಮೂಲನೆಗೆ ಪ್ರಮಾಣಿಕ ಪ್ರಯತ್ನ ಮಾಡಲೇ ಇಲ್ಲ. ಗಾಂಧಿ ಪರಿವಾರ ತಮ್ಮ ಕುಟುಂಬದ ಅಸ್ತಿತ್ವಕ್ಕಾಗಿ ರಾಜಕಾಣ ಮಾಡಿದೆಯೇ ವಿನಃ ದೇಶದ ಅಭಿವೃದ್ಧಿ, ಬಡವರ ಕಾಳಜಿಗಾಗಿ ಅಲ್ಲ’ ಎಂದು ಟೀಕಿಸಿದರು.

‘ಪ್ರಿಯಾಂಕಾ ಗಾಂಧಿ ಅವರು ದಾವಣಗೆರೆಯಲ್ಲಿ ನಿರುದ್ಯೋಗದ ಬಗ್ಗೆ ಮಾತನಾಡಿದ್ದಾರೆ. ದೇಶದಾದ್ಯಂತ ಬ್ರಿಟಿಷರ ಕಾಲದಲ್ಲಿದ್ದ ಅನೇಕ ದೊಡ್ಡ ದೊಡ್ಡ ಖಾಸಗಿ ಕಂಪನಿಗಳು, ಕಾರ್ಖಾನೆಗಳು ಮುಚ್ಚುವ ಹಂತಕ್ಕೆ ಬರಲು ಕಾಂಗ್ರೆಸ್ ಕಾರಣ. ಕಾಂಗ್ರೆಸ್ ಕಾಲದಲ್ಲಿ ಸಾರ್ವಜನಿಕ ಸ್ವಾಮ್ಯದ ಅನೇಕ ಉದ್ದಿಮೆಗಳು ನಷ್ಟದ ಹಾದಿಯಲ್ಲಿದ್ದವು. ಕೆಲಸ ಮಾಡುವ ಕಾರ್ಮಿಕರಿಗೆ ಸಂಬಳ ಕೊಡಲು ಆಗದ ಸ್ಥಿತಿಗೆ ಉದ್ದಿಮೆಗಳನ್ನು ತಂದಿದ್ದವು’ ಎಂದು ಟೀಕಿಸಿದರು.

ಬಿಜೆಪಿ ವಕ್ತಾರೆ, ನಟಿ ಮಾಳವಿಕಾ ಅವಿನಾಶ್ ಮಾತನಾಡಿ, ‘ಲೋಕಸಭಾ ಕ್ಷೇತ್ರದ ವಾತಾವರಣ ನೋಡಿದರೆ ಬಿಜೆಪಿ ಅಭ್ಯರ್ಥಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ. ಶಾಮನೂರು ಕುಟುಂಬದ ದೌರ್ಜನ್ಯದಿಂದ ಕ್ಷೇತ್ರದ ಮತದಾರರು ಹೈರಾಣಾಗಿದ್ದು, ಸಿದ್ದೇಶ್ವರ ಅವರ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಮತ ನೀಡಲಿದ್ದಾರೆ’ ಎಂದರು.

‘ದಾವಣಗೆರೆ ಬಿಜೆಪಿ ಭದ್ರಕೋಟೆ. 6 ಬಾರಿ ಸತತವಾಗಿ ಬಿಜೆಪಿ ಗೆದ್ದಿದೆ. ನಮ್ಮ ಕಾರ್ಯಕರ್ತರ ಶ್ರಮ, ಸಿದ್ದೇಶ್ವರ ಅವರ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಶ್ರೀರಕ್ಷೆ’ ಎಂದು ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ವಿಧಾನಪರಿಷತ್ ಮಾಜಿ ಮುಖ್ಯಸಚೇತಕ ಶಿವಯೋಗಿಸ್ವಾಮಿ, ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್, ವೀಣಾ ನಂಜಪ್ಪ, ರೇಖಾ ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT