ಸೋಮವಾರ, ಏಪ್ರಿಲ್ 6, 2020
19 °C

ಕುಡಿಯುವುದರಿಂದ ಕೊರೊನಾ ಬರಲ್ವಂತೆ: ಸಚಿವ ಕೆ.ಎಸ್. ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ದಾವಣಗೆರೆ: ‘ಕುಡಿಯುವುದರಿಂದ ಕೊರೊನಾ ಬರಲ್ವಂತೆ. ಯಾವುದೋ ಮಾಧ್ಯಮದಲ್ಲಿ ನೋಡಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದು ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.

ಕೊರೊನಾ ಮತ್ತು ಹಕ್ಕಿ ಜ್ವರದ ಕುರಿತು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಬಾರ್‌ ಮತ್ತು ರೆಸ್ಟೊರಂಟ್‌ಗಳನ್ನು ಬಂದ್‌ ಮಾಡಿಸುವ ವಿಚಾರ ಪ್ರಸ್ತಾಪವಾದಾಗ ಸಚಿವರು ಕುಡಿತದ ಬಗ್ಗೆ ತಿಳಿಸಿದರು.

ಅಲ್ಕೋಹಾಲಿಕ್‌ ಅಂಶ ಶೇ 60ಕ್ಕಿಂತ ಹೆಚ್ಚಿದ್ದರೆ ಕೊರೊನಾ ವೈರಸ್‌ ಬದುಕುಳಿಯುವುದಿಲ್ಲ. ಆದರೆ ಬಾರ್‌ಗಳಲ್ಲಿ ಬಳಸುವ ಮದ್ಯದಲ್ಲಿ ಶೇ 45ಕ್ಕಿಂತ ಹೆಚ್ಚಿಗೆ ಅಲ್ಕೋಹಾಲ್‌ ಇರುವುದಿಲ್ಲ. ಮತ್ತೆ ಅದಕ್ಕೆ ನೀರು ಹಾಕಿ ಕುಡಿಯುವುದರಿಂದ ಅದರ ಅಂಶ ಇನ್ನೂ ಕಡಿಮೆಯಾಗುತ್ತದೆ. ಹಾಗಾಗಿ ಕುಡಿತದಿಂದ ಕೊರೊನಾ ಕಡಿಮೆಯಾಗುವುದಿಲ್ಲ ಎಂದು ವೈದ್ಯರು ವಿವರಿಸಿದರು.

ನನ್ನ ಮನೆಯಲ್ಲಿ ಮಾಂಸಾಹಾರ ಬಂದ್‌: ‘ಹಕ್ಕಿಜ್ವರ ಬಂದಿರುವುದು ಈ ಜಿಲ್ಲೆಯ ಬನ್ನಿಕೋಡಿನಲ್ಲಾದರೂ ಅದರ ಜಾಗೃತಿ ರಾಜ್ಯದಾದ್ಯಂತ ಆಗಿದೆ. ನನ್ನ ಮನೆಯಲ್ಲಿಯೂ ಮಾಂಸಾಹಾರ ಬಂದ್‌ ಆಗಿದೆ. ಮೊಮ್ಮಕ್ಕಳಿಗೆ ನನ್ನ ಸೊಸೆ ಬೇಡ ಎಂದರೂ ಮೊಟ್ಟೆ ಬೇಯಿಸಿ ನೀಡುತ್ತಿದ್ದಳು. ಈಗ ಮೊಮ್ಮಕ್ಕಳ ಬೇಕು ಅಂದರೂ ಸೊಸೆ ಮೊಟ್ಟೆ ಕೊಡುತ್ತಿಲ್ಲ’ ಎಂದು ತನ್ನ ಮನೆಯಲ್ಲಿ ಆಗಿರುವ ಜಾಗೃತಿಯನ್ನು ವಿವರಿಸಿದರು.

ಕೊರೊನಾ ಒಂದು ಮತ್ತು ಎರಡನೇ ಹಂತದಲ್ಲಿ ಮಾತ್ರ ಭಾರತದಲ್ಲಿದೆ. ಮೂರನೇ ಹಂತಕ್ಕೆ ಹೋದರೆ ನಿಯಂತ್ರಣ ಅಸಾಧ್ಯ. ಅದಕ್ಕಾಗಿ ಎರಡನೇ ಹಂತ ದಾಟದಂತೆ ಕ್ರಮ ಕೈಗೊಳ್ಳಲಾಗಿದೆ. ದಾಟಿದರೆ ಈ ರೀತಿ ಸಭೆ ಕೂಡ ಮಾಡಲು ಸಾಧ್ಯವಿಲ್ಲ. ಇದರ ಬಗ್ಗೆ ಮನೆ ಮನೆಯಲ್ಲಿ ಜಾಗೃತಿಯಾಗಲಿ ಎಂಬ ಕಾರಣಕ್ಕೆ ಮಾರ್ಚ್‌ 22ರಂದು ಜನತಾ ಕರ್ಫ್ಯೂ ಘೋಷಿಸಲಾಗಿದೆ. ಪ್ರಧಾನಿ ಅವರ ತಲೆಗೆ ಈ ವಿಚಾರ ಹೇಗೆ ಹೊಳೆಯಿತು ಎಂಬುದು ಗೊತ್ತಿಲ್ಲ. ಜಾಗೃತಿಗೆ ಇದು ಅತ್ಯುತ್ತಮ ಮಾದರಿ ಎಂದು ಶ್ಲಾಘಿಸಿದರು.

ಅಂಗಡಿ, ಬಾರ್‌, ಹೋಟೆಲ್‌, ವ್ಯಾಪಾರ ವಹಿವಾಟುಗಳನ್ನು ಬಂದ್‌ ಮಾಡಿ ಎಂದು ತಿಳಿಸುವುದು ಬೇರೆಯವರಿಗೆ ಉಪಯೋಗ ಆಗಲಿ ಎಂದು ಅಲ್ಲ. ಸ್ವತಃ ಅಂಗಡಿ, ಹೋಟೆಲ್‌ಗಳ ಮಾಲೀಕರಿಗೇ ವೈರಸ್‌ ಬಾರದಿರಲಿ ಎಂಬ ಕಾರಣಕ್ಕಾಗಿ ಎಂದು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಆರೋಗ್ಯ ಇಲಾಖೆ, ಪಶುಸಂಗೋಪನ ಇಲಾಖೆ ಸಹಿತ ವಿವಿಧ ಇಲಾಖೆಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ಪ್ರೊ. ಎನ್‌. ಲಿಂಗಣ್ಣ, ಎಸ್‌. ರಾಮಪ್ಪ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಅವರೂ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು